ಮಂಗಳೂರು: ಇಂದು ರಾಜ್ಯ ಸಚಿವ ಸಂಪುಟದ ಸಭೆ ಮಂಗಳೂರಿನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುವ ಸಂಪುಟ ಸಭೆಗೆ ಮಂಗಳೂರು ನಗರ ಸಕಲ ಸಜ್ಜಾಗಿದೆ.ನಗರದ ಪಡೀಲಿನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ನಡೆಯಲಿರುವ ಸಂಪುಟ ಸಭೆಗೆ ಜಿಲ್ಲಾಧಿಕಾರಿಗಳ ಕಚೇರಿಯ
ಬೃಹತ್ ಸಂಕೀರ್ಣದ ಎರಡನೇ ಮಹಡಿಯಲ್ಲಿ ಹವಾನಿಯಂತ್ರಿತ ಪ್ರತ್ಯೇಕ ಹಾಲ್ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳು, ಟೇಬಲ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಹಾಲ್ನಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಸಂಪುಟ ದರ್ಜೆಯ ಸಚಿವರು ಮತ್ತು ಮುಖ್ಯಮಂತ್ರಿಯವರು ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಮಂಗಳೂರಲ್ಲಿ ‘ಮೆಡಿಕಲ್ ಟೂರಿಸಂ ಹಬ್’ ಸ್ಥಾಪನೆ, ಕರಾವಳಿಯಲ್ಲಿ ಐಟಿ ಪಾರ್ಕ್, ಮೀನುಗಾರಿಕೆ- ಬಂದರು ಅಭಿವೃದ್ಧಿ,ವಿಮಾನ ನಿಲ್ದಾಣ, ರಸ್ತೆ ಸಂಪರ್ಕ, ಕರಾವಳಿಯಲ್ಲಿ ಟೆಂಪಲ್ ಟೂರಿಸಂ ಅಭಿವೃದ್ಧಿ, ಕೃಷಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ದೊರೆಯುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಮತ್ತು ಸಚಿವರನ್ನು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸ್ವಾಗತಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರವೇ ಮಂಗಳೂರಿಗೆ ಆಗಮಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಹಬ್ಬದ ಕಳೆ ಏರ್ಪಟ್ಟಿದೆ.ಬೆಳಗ್ಗೆ 10 ಗಂಟೆಗೆ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಸಿಎಂ, ಡಿಸಿಎಂ, ಸಚಿವರು ಕದ್ರಿಯಿಂದ ಪಡೀಲ್ ಡಿಸಿ ಕಚೇರಿಗೆ ಆಗಮಿಸಲಿದ್ದಾರೆ.
10.30ಕ್ಕೆ ಪಡೀಲ್ ಡಿಸಿ ಕಚೇರಿಯಲ್ಲಿ ಕ್ಯಾಬಿನೆಟ್ ಸಭೆ. ಸಭೆಯ ಬಳಿಕ ಸಿಎಂ ಮಾಧ್ಯಮಗೋಷ್ಠಿ ನಡೆಸುವರು.








