ಸುಳ್ಯ:ಕೊಲ್ಲಮೊಗ್ರ ಗ್ರಾಮದ ಪನ್ನೆ ಎಂಬಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ವಿಳಂಬ ಆಗುತ್ತಿರುವುದನ್ನು ಪ್ರತಿಭಟಿಸಿ ಕೆಡಿಪಿ ಸದಸ್ಯರು ತಾಲೂಕು ಪಂಚಾಯತ್ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಧರಣಿ ನಡೆಸಿದ ಘಟನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಹಲವು ವರ್ಷಗಳಿಂದ
ನಿವೇಶನ ನೀಡದೆ ವಿಳಂಬ ಆಗುತಿದೆ. ಮೂರು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ಕಳೆದ ಸಭೆಯಲ್ಲಿ ಹೇಳಲಾಗಿತ್ತು. ಆದರೆ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ಕೆಡಿಪಿ ಸದಸ್ಯರು ಸಭೆಯಲ್ಲಿ ಮುಂಭಾಗದಲ್ಲಿ ಕುಳಿತರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್ ಗುಂಡಿ, ತೀರ್ಥರಾಮ ಜಾಲ್ಸೂರು, ಜಯಪ್ರಕಾಶ್ ನೆಕ್ರಪ್ಪಾಡಿ, ಪರಮೇಶ್ವರಿ ಕೆಂಬಾರೆ ಸಭೆಯ ಮುಂಭಾಗದಲ್ಲಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಿತು. ಕಿರಿಭಾಗ ಮೀಸಲು ಅರಣ್ಯದ

ಜಂಟಿ ಮೋಜಣಿ ಕಾರ್ಯದ ವರದಿ ಮತ್ತು ನಕಾಶೆ ಕೇಳಲಾಗಿದ್ದು. ಅರಣ್ಯ ಇಲಾಖೆಯಿಂದ ವರದಿ ಬಂದ ಬಳಿಕ ಮಾತ್ರ ಆರ್ಟಿಸಿ ತಿದ್ದುಪಡಿ ಮತ್ತಿತರ ಕ್ರಮ ವಹಿಸಲು ಸಾಧ್ಯ ಎಂದು ತಹಶೀಲ್ದಾರ್ ಸಭೆಗೆ ತಿಳಿಸಿದರು. ಈ ಮೀಸಲು ಅರಣ್ಯವನ್ನು ಕಂದಾಯ,ಅರಣ್ಯ,ಭೂ ಮಾಪನಾ ಇಲಾಖೆಯಿಂದ ಜಂಟಿ ಮೋಜಣಿ ಮಾಡಲಾಗಿದೆ. ಈ ಜಂಟಿ ಮೋಜಣಿ
ವರದಿ ಹಾಗು ಜಂಟಿ ಮೋಜಣಿ ನಕಾಶೆಯನ್ನು ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ಮೋಜಣಿ ವಿಭಾಗ ಶಿವಮೊಗ್ಗ ಇವರು ನೀಡಬೇಕಾಗಿದೆ. ಅವರಿಂದ ಸ್ವೀಕೃತವಾದ ಕೂಡಲೇ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರ ವರದಿ, ನಕಾಶೆ ನೀಡಲು ಪತ್ರ ಬರೆಯಲಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಸಭೆಗೆ ತಿಳಿಸಿದರು. ಇದನ್ನು ಫಾಲೋ ಆಪ್ ಮಾಡಿ ಕೂಡಲೇ ವರದಿ ತರಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚಿಸಿದರು.ಮುಂದಿನ ಸಭೆಗೆ ಮುನ್ನ ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದ ಹಿನ್ನಲೆಯಲ್ಲಿ ಕೆಡಿಪಿ ಸದಸ್ಯರು ಧರಣಿ ಹಿಂಪಡೆದು ಸಭೆಯಲ್ಲಿ ಭಾಗವಹಿಸಿದರು.








