ಸುಳ್ಯ:ಸುಳ್ಯ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ತಾಲೂಕು
ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗ್ರಾಮ ಪಂಚಾಯತ್ಗಳಲ್ಲಿ ಮಳೆ ಮಾಪನ ಸರಿ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಮಳೆ ಮಾಪನವನ್ನು ಪ್ರತಿ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಸರಿ ಇಲ್ಲದ
ಮಳೆ ಮಾಪನವನ್ನು ದುರಸ್ತಿ ಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.ಅಮೃತ್ 2 ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಕಡಿದು ಹಾಕಲಾದ ರಸ್ತೆ ಬದಿಯನ್ನು ಇನ್ನೂ ಸರಿ ಪಡಿಸಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಕಾಮಗಾರಿ ನಡೆಸುವ ಏಜೆನ್ಸಿಗೆ ಪತ್ರ ಬರೆಯಲಾಗಿದ್ದು ಜನನ ಸರಿಪಡಿಸಲಾಗಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ನಗರದ ಚರಂಡಿ, ಸ್ಲಾಬ್ ಕುಸಿದಿರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದನ್ನು ಕೂಡಲೇ ಸರಿಪಡಿಸುವುದಾಗಿ ತಹಶೀಲ್ದಾರ್ ತಿಳಿಸಿದರು.
ನಗರ ಪಂಚಾಯತ್ನ ಹಸಿ ಕಸವನ್ನು ಅರಣ್ಯ ಇಲಾಖೆಯ ಸ್ಥಳದಲ್ಲಿ ಹಾಕಲಾಗುತಿದೆಯೇ, ಕಸ ಸಾಗಾಟಕ್ಕೆ ಎಷ್ಟು ಹಣ ಪಾವತಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ಸಭೆಯಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ, ಈ ಸ್ಥಳದ ಬಗ್ಗೆ ಸರ್ವೆ
ನಡೆಸಲಾಗುವುದು,ಅರಣ್ಯದಲ್ಲಿ ಕಸ ಹಾಕದಂತೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.ಸದ್ಯ ಅಲ್ಲಿಗೆ ಕಸ ಕೊಂಡೊಯ್ಯುತ್ತಿಲ್ಲ ಎಂದು ನ.ಪಂ.ಮುಖ್ಯಾಧಿಕಾರಿ ತಿಳಿಸಿದರು.
ನಗರ ಪಂಚಾಯತ್ನ ಮೀನು ಮಾರುಕಟ್ಟೆ ಸ್ಥಗಿತಗೊಂಡಿರುವ ಬಗ್ಗೆ ಧರ್ಮಪಾಲ ಕೊಯಿಂಗಾಜೆ ಪ್ರಶ್ನಿಸಿದರು.ಟೆಂಡರ್ ಮೊತ್ತ ಅಧಿಕ ಆಗಿದೆ ಎಂದು ಮಾರುಕಟ್ಟೆ ಏಲಂ ಆಗಿಲ್ಲ, ಮೊತ್ತ ಕಡಿಮೆ ಮಾಡಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಉತ್ತರಿಸಿದರು.ಮೆಸ್ಕಾಂನ ಅರಂರೋಡು ಶಾಖೆಯಲ್ಲಿ

ಪವರ್ಮೆನ್ ಕೊರತೆ ಇದೆ ಎಂದು ಕೆಡಿಪಿ ಸದಸ್ಯ ಅಶ್ರಫ್ ಗುಂಡಿ ಸಭೆಯ ಗಮನಕ್ಕೆ ತಂದರು. ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಬಾರದು ಎಂದು ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಗೆ 3 ದಿನ ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನದಲ್ಲಿ ಚರ್ಚಿಸಿ ನಿರ್ಧರ ಕೈಗೊಳ್ಳಲಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.
ಕೆಡಿಪಿ ಸದಸ್ಯರಿಂದ ಧರಣಿ:
ಕೊಲ್ಲಮೊಗ್ರ ಗ್ರಾಮದ ಪನ್ನೆ ಎಂಬಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ವಿಳಂಬ ಆಗುತ್ತಿರುವುದನ್ನು ವಿರೋಧಿಸಿ ಸಭೆ ಆರಂಭವಾಗುತ್ತಿದ್ದಂತೆ ನೆರೆ ಸಂತ್ರಸ್ತರಿಗೆ ಹಲವು ವರ್ಷಗಳಿಂದ ನಿವೇಶನ ನೀಡಲು ವಿಳಂಬ ಆಗುತಿದೆ. ಮೂರು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ಕಳೆದ ಸಭೆಯಲ್ಲಿ ಹೇಳಲಾಗಿತ್ತು.ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ಕೆಡಿಪಿ ಸದಸ್ಯರು ಸಭೆಯಲ್ಲಿ ಮುಂಭಾಗದಲ್ಲಿ ಕುಳಿತರು.ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್ ಗುಂಡಿ, ತೀರ್ಥರಾಮ ಜಾಲ್ಸೂರು, ಜಯಪ್ರಕಾಶ್ ನೆಕ್ರಪ್ಪಾಡಿ, ಪರಮೇಶ್ವರ ಕೆಂಬಾರೆ ಸಭೆಯ ಮುಂಭಾಗದಲ್ಲಿ ಧರಣಿ ಕುಳಿತರು.ಈ ಸಂದರ್ಭದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಿತು.ಕಿರಿಭಾಗ ಮೀಸಲು ಅರಣ್ಯದ ಜಂಟಿ ಮೋಜಣಿ ಕಾರ್ಯದ ವರದಿ ಮತ್ತು ನಕಾಶೆ ಕೇಳಲಾಗಿದೆ. ಅರಣ್ಯ ಇಲಾಖೆಯಿಂದ ವರದಿ ಬಂದ ಬಳಿಕ ಮಾತ್ರ

ಆರ್ಟಿಸಿ ತಿದ್ದುಪಡಿ ಮತ್ತಿತರ ಕ್ರಮ ವಹಿಸಲು ಸಾಧ್ಯ ಎಂದು ತಹಶೀಲ್ದಾರ್ ಸಭೆಗೆ ತಿಳಿಸಿದರು. ಈ ಮೀಸಲು ಅರಣ್ಯವನ್ನು ಕಂದಾಯ,ಅರಣ್ಯ,ಭೂ ಮಾಪನಾ ಇಲಾಖೆಯಿಂದ ಜಂಟಿ ಮೋಜಣಿ ಮಾಡಲಾಗಿದೆ.ಈ ಜಂಟಿ ಮೋಜಣಿ ವರದಿ ಹಾಗು ಜಂಟಿ ಮೋಜಣಿ ನಕಾಶೆಯನ್ನು ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ಮೋಜಣಿ ವಿಭಾಗ ಶಿವಮೊಗ್ಗ ಇವರು ನೀಡಬೇಕಾಗಿದೆ. ಅವರಿಂದ ಸ್ವೀಕೃತವಾದ ಕೂಡಲೇ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರ ವರದಿ, ನಕಾಶೆ ನೀಡಲು ಪತ್ರ ಬರೆಯಲಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಸಭೆಗೆ ತಿಳಿಸಿದರು.ಇದನ್ನು ಫಾಲೋ ಆಪ್ ಮಾಡಿ ಕೂಡಲೇ ವರದಿ ತರಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚಿಸಿದರು.ಮುಂದಿನ ಸಭೆಗೆ ಮುನ್ನ ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದ ಹಿನ್ನಲೆಯಲ್ಲಿ ಕೆಡಿಪಿ ಸದಸ್ಯರು ಧರಣಿ ಹಿಂಪಡೆದು ಸಭೆಯಲ್ಲಿ ಭಾಗವಹಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳ.ಎಂ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಕೆಡಿಪಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.








