ಸುಳ್ಯ: ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮತ್ತು ಮನೆಯವರು ಸಮರ್ಪಣೆ ಮಾಡುವ ನೂತನ ಬ್ರಹ್ಮರಥ ಸುಳ್ಯ ಶ್ರೀ ಚೆನ್ನಕೇಶವ ದೇವರ ಸನ್ನಿಧಿಗೆ ಆಗಮಿಸಿತು. ಡಿ.25ರಂದು ಸಂಜೆ 8 ಗಂಟೆಯ ವೇಳೆಗೆ ವೈಭವದ ಶೋಭಾಯಾತ್ರೆಯ ಮೂಲಕ ಚೆನ್ನಕೇಶವನ ಸನ್ನಿಧಿಗೆ ಬ್ರಹ್ಮರಥ ಆಗಮಿಸಿತು. ದೇವಸ್ಥಾನದ ರಾಜಗೋಪುರದ ಬಳಿಯಲ್ಲಿ ಸ್ವಾಗತಿಸಿ, ವಿಶೇಷ ಪೂಜೆ ಹಾಗೂ ವೈದಿಕ ಕಾರ್ಯಕ್ರಮದ ಬಳಿಕ ರಥವನ್ನು ಇಳಿಸಿ ಭೂಸ್ಪರ್ಶ ಮಾಡದೆ ಇರಿಸಲಾಯಿತು.
ಸಂಜೆ 4 ಗಂಟೆಯ ವೇಳೆಗೆ ಸುಳ್ಯಕ್ಕೆ ಬ್ರಹ್ಮರಥ

ಪುರ ಪ್ರವೇಶ ಮಾಡಿತು. ಸುಳ್ಯ ತಾಲೂಕಿಗೆ ಆಗಮಿಸಿದ ಬ್ರಹ್ಮರಥಕ್ಕೆ ಕನಕಮಜಲಿನಲ್ಲಿ ಭಕ್ತಿ ಸಂಭ್ರಮದ ಸ್ವಾಗತ ಕೋರಲಾಯಿತು. ಅಲ್ಲಿಯ ಸ್ವಾಗತದ ಬಳಿಕ ವಿವಿಧ ಕಡೆಗಳ ಸ್ವಾಗತದ ಬಳಿಕ ಸುಳ್ಯ ನಗರದ ಓಡಬಾಯಿಗೆ ಆಗಮಿಸಿದ ರಥಕ್ಕೆ ಭಕ್ತಿ ಸಂಭ್ರಮದ ಅದ್ದೂರಿ ಸ್ವಾಗತ ಕೋರಲಾಯಿತು. ರಥಕ್ಕೆ ಪುಷ್ಪಾರ್ಚನೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಮುಖರು ಸೇರಿ ಸ್ವಾಗತ ಕೋರಿದರು. ನೆರೆದ ನೂರಾರು ಮಂದಿಯ ಕಂಠದಿಂದ ಹೊರಹೊಮ್ಮಿದ ಚೆನ್ನಕೇಶವನಿಗೆ ಜೈ ಘೋಷಣೆ ಭಕ್ತಿ ಸಂಭ್ರಮದ ಅಲೆಯೆಬ್ಬಿಸಿತು. ಬಳಿಕ ಅದ್ದೂರಿ ಶೋಭಾಯಾತ್ರೆಯ ಮೂಲಕ ಬ್ರಹ್ಮರಥವನ್ನು ಚೆನ್ನಕೇಶವ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.

ವೇದ ಘೋಷ, ಚೆಂಡೆ, ವಾದ್ಯ ಮೇಳಗಳು, ನಾಸಿಕ್ ಬ್ಯಾಂಡ್, ಸಿಂಗಾರಿ ಮೇಳ, ಯಕ್ಷಗಾನ ವೇಷ, ಗೊಂಬೆಯಾಟ, ಆಕರ್ಷಕ ಕುಣಿತ ಭಜನೆ, ತಿರಯಾಟಂ, ಶೃಂಗಾರ ಕಾವಡಿ, ದ್ವಿಚಕ್ರ ವಾಹನ ಮೆರವಣಿಗೆ, ನಾಲ್ಕು ಚಕ್ರ ವಾಹನಗಳು ಶೋಭಾಯಾತ್ರೆಗೆ ಸಾಥ್ ನೀಡಿದವು. ನೂರಾರು ಮಂದಿ ಭಕ್ತರು ಶೋಭಾಯಾತ್ರೆಯ ಜೊತೆಯಲ್ಲಿ ಸಾಗಿ ಬಂದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಮಂದಿ ಭಕ್ತರು ಶೋಭಾಯಾತ್ರೆ ಕಣ್ತುಂಬಿಕೊಂಡರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೃಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೊಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ ಡಾ.ಐಶ್ವರ್ಯ, ಕೆ.ವಿ.ಹೇಮನಾಥ,ಬ್ರಹ್ಮರಥ ಸಮರ್ಪಣಾ ಸಮಿತಿಯ

ಗೌರವಾಧ್ಯಕ್ಷ ಕೃಷ್ಣ ಕಾಮತ್, ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ, ಸಮಿತಿಯ ಪದಾಧಿಕಾರಿಗಳು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು, ಪ್ರಮುಖರು, ಜನಪ್ರತಿನಿಧಿಗಳು, ಸಾವಿರಾರು ಮಂದಿ ಭಕ್ತರು ಮತ್ತಿತರರು ಉಪಸ್ಥಿತರಿದ್ದರು. ಡಿ.24ರಂದು ಕೋಟೇಶ್ವರದಿಂದ ಹೊರಟು ಕನಕಮಜಲಿಗೆ ಆಗಮಿಸಿದ ರಥಕ್ಕೆ ಕನಕಮಜಲಿನ ಶ್ರೀ ಆತ್ಮಾರಾಮ ದೇವರಿಗೆ ವಿಶೇಷ ಮಹಾ ಮಂಗಳಾರತಿ ನೆರವೇರಿಸಿ, ನೂತನ ಬ್ರಹ್ಮರಥಕ್ಕೆ ಆರತಿ ಬೆಳಗುವ ಮೂಲಕ ಬ್ರಹ್ಮರಥಕ್ಕೆ ಸ್ವಾಗತ ಕೋರಲಾಯಿತು.
ಡಿ.31ರಂದುಪೂ. ಗಂಟೆ 10ಕ್ಕೆ ಡಾ. ಕೆ. ವಿ. ಚಿದಾನಂದ ಹಾಗೂ

ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ
ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ. ಜ.1ರಂದು ರಾತ್ರಿ ಗಂಟೆ 7.00ರಿಂದ ಬ್ರಹ್ಮ ರಥದ ಆಲಯಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಜ.2 ರಂದು ಬೆಳಿಗ್ಗೆ
7ರಿಂದ ಗಣಹೋಮ, ಕಲಶಾಭಿಷೇಕಗಳು ಹಾಗೂ ಪೂರ್ವಾಹ್ನ 9.15ರಿಂದ 9.35ರ ನಡುವಿನ ಮಕರ ಲಗ್ನದ ಸುಮೂರ್ಹತದಲ್ಲಿ ಬ್ರಹ್ಮರಥದ ಭೂ ಸ್ಪರ್ಶ, ಬ್ರಹ್ಮರಥ ಪೂಜೆ ನಡೆಯಲಿದೆ. ಪೂ.10ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
