ಸುಳ್ಯ:ಕಾಳು ಮೆಣಸಿನ ದರ ಕಳೆದ ಆರು ವರ್ಷದಲ್ಲಿ ಗರಿಷ್ಠಕ್ಕೆ ಏರಿದ್ದು 2018ರ ಬಳಿಕ ಅತ್ಯುತ್ತಮ ಧಾರಣೆಗೆ ದಾಖಲಾಗಿದೆ.ಸುಳ್ಯದಲ್ಲಿ ಜೂ.11ರಂದು ಕೆ.ಜಿ.ದರ 675 ಇದೆ. ಕಳೆದ ಎರಡು ವಾರಗಳ ಅವಧಿಯಲ್ಲಿ 75 ರೂ ಏರಿಕೆಯಾಗಿದೆ.ಸೋಮವಾರ ಕೆ.ಜಿ ಗೆ 660 ಇದ್ದ ದರ 15 ರೂ ಜಿಗಿದು 675ಕ್ಕೆ ಏರಿಕೆಯಾಗಿದೆ. ಇನ್ನಷ್ಟು ಏರಿಕೆಯಾಗುವ
ನಿರೀಕ್ಷೆಯಿದ್ದು ಕೆಜಿಗೆ 700ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಾಳುಮೆಣಸು ಬೆಲೆ ನಿರಂತರ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ಭಾರಿ ನಿರೀಕ್ಷೆಯಲ್ಲಿದ್ದಾರೆ. ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ. 2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ 780ಗೆ ತಲುಪಿತ್ತು. ಈ ವರ್ಷ ಫೆಬ್ರುವರಿಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿದ್ದಾಗ ಕೆ.ಜಿಗೆ 500-525ರ ಆಸುಪಾಸಿನಲ್ಲಿ ಇದ್ದ ಧಾರಣೆ ಈಚೆಗೆ 2 ವಾರಗಳಿಂದ ಸತತ ಏರುಗತಿಯಲ್ಲಿದೆ.2018ರ ಹಂತಕ್ಕೆ ಬೆಲೆ ತಲುಪುವುದೇ ಎಂಬ ಕುತೂಹಲದಲ್ಲಿದ್ದಾರೆ ಬೆಳೆಗಾರರು.ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯುವ ಕಾಳುಮೆಣಸು ಮತ್ತೆ ಕೃಷಿಕರ ಕೈ ಹಿಡಿಯುವ ಭರವಸೆ ನೀಡಿದೆ.
ವಿಯೆಟ್ನಾಂನಲ್ಲಿ ಪ್ರತಿಕೂಲ ಹವಾಮಾನದ ಕಾರಣ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ಈ ಪೈಕಿ ಶೇ 50ಕ್ಕೂ ಹೆಚ್ಚು ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಕೊಡುಗೆ ಎಂದು ಹೇಳಲಾಗಿದೆ.
2019ರಲ್ಲಿ 2.8 ಲಕ್ಷ ಟನ್ಗೂ ಹೆಚ್ಚು ಕಾಳುಮೆಣಸು ಬೆಳೆದಿದ್ದ ವಿಯೆಟ್ನಾಂನಲ್ಲಿ ಈ ವರ್ಷ ಅಂದಾಜು 1.8 ಲಕ್ಷ ಟನ್ ಇಳುವರಿ ಲಭಿಸಿದೆ. ಭಾರತದ ಕಾಳುಮೆಣಸು ಉತ್ತಮ ಗುಣಮಟ್ಟ ಹೊಂದಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್ಗೆ 8,000 ಡಾಲರ್ ಬೆಲೆ ಇದೆ. ಬ್ರೆಜಿಲ್ನಿಂದ ಸಾಗುವ ಕಾಳುಮೆಣಸಿಗೆ 7,700 ಡಾಲರ್ ಸಿಕ್ಕಿದರೆ, ವಿಯೆಟ್ನಾಂ ಮೆಣಸಿಗೆ 6,500 ಡಾಲರ್ ಮತ್ತು ಮಲೇಷ್ಯಾ ಮೆಣಸಿಗೆ 4,900 ಡಾಲರ್ ಬೆಲೆ ಇದೆ.
ದೇಶದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆ ಬೆಳೆಯಲಾಗುತಿದೆ.