ಸುಳ್ಯ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ಏ.30ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ. ಸಂಜೆ 4.30ಕ್ಕೆ ನಡೆಯುವ ಚುನಾವಣಾ ಪ್ರಚಾರ ಸಭೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಜೆ 4 ಗಂಟೆಗೆ ಸುಳ್ಯಕ್ಕೆ ಆಗಮಿಸುವ ನಡ್ಡಾ ಅವರು ನೇರವಾಗಿ
ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಲಿದ್ದಾರೆ. ನಳಿನ್ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲಾಗಿದ್ದು ಗೃಹ ಪ್ರವೇಶ ನಡೆದಿದೆ.ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಲಿದ್ದಾರೆ. ಭಾಗೀರಥಿ ಮುರುಳ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಅಭ್ಯರ್ಥಿ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ಮಾಡಲಾಗಿದೆ.ಎಲ್ಲೆಡೆ ಬಿಜೆಪಿ ಪರ ಒಲವು ವ್ಯಕ್ತವಾಗುತಿದೆ.
231 ಬೂತ್ಗಳಲ್ಲಿ ಸಭೆಗಳು ನಡೆದಿದೆ. ಬಿಜೆಪಿ ಪರವಾದ ಒಲವು ವ್ಯಕ್ತವಾಗುತಿದೆ. ಈ ಬಾರಿ 35 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವಿನ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಏ.30ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ.ಎಲ್ಲಾ ಮನೆಗಳನ್ನು ಭೇಟಿ ಮಾಡಿ ಪ್ರಚಾರ ನಡೆಯಲಿದೆ. ಎರಡು ಹಂತದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ. ರಾಜ್ಯ ಹಾಗು ಕೇಂದ್ರ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದು ಹೇಳಿದರು.
ಮೇ.5 ರಂದು ಅಣ್ಣಾಮಲೈ ಸುಳ್ಯಕ್ಕೆ:
ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಹಾಗು ಕರ್ನಾಟಕದ ಸಹ ಪ್ರಭಾರಿಯಾಗಿರುವ ಕೆ.ಅಣ್ಣಾಮಲೈ ಅವರು ಮೇ.5 ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ. ಕ್ಷೇತ್ರದ ವಿವಿಧ ಕಡೆಗಳಲ್ಲಿ ಸಭೆ ನಡೆಯಲಿದ್ದು ಅಣ್ಣಾಮಲೈ ಅವರು ಭಾಗವಹಿಸಲಿದ್ದಾರೆ ಎಂದು ಕಂಜಿಪಿಲಿವತಿಳಿಸಿದ್ದಾರೆ.
ಸಾಕಷ್ಟು ಅಭಿವೃದ್ಧಿ ಆಗಿದೆ:
ಸುಳ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಬಹುತೇಕ ಎಲ್ಲಾ ರಸ್ತೆಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಆಗಿದೆ. ಉಳಿದ ಒಂದೆರಡು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿದೆ ಎಂದು ಅವರು ಹೇಳಿದರು. ಸುಳ್ಯ ಕ್ಷೇತ್ರದ ಅಭಿವೃದ್ಧಿ ಮಾಡಿರುವುದು ಬಿಜೆಪಿ. ಮುಂದೆಯೂ ಬಿಜೆಪಿ ಕ್ಷೇತ್ರದ ಅಭಿವೃದ್ಧಿ ಮಾಡುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ,ಸಾಮಾಜಿಕ ಜಾಲತಾಣ ಪ್ರಮುಖ ಪ್ರಸಾದ್ ಕಾಟೂರು, ಅಶೋಕ್ ಅಡ್ಕಾರ್ ಉಪಸ್ಥಿತರಿದ್ದರು.