ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಇದನ್ನು ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಒತ್ತಾಯಿಸಿದ್ದಾರೆ. ಸುಳ್ಯ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದ್ದು ಸುಳ್ಯ ತಾಲೂಕಿನ
ದುಗ್ಗಲಡ್ಕ, ಕಂದಡ್ಕ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದಿನಗಳಿಂದ ಕಾಡಾನೆ ಹಾವಳಿ ತೀವ್ರಗೊಂದ್ದು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ. ಜನವಸತಿ ಪ್ರದೇಶದ ಸಮೀಪದಲ್ಲಿಯೇ ಕಾಡಾನೆ ಬೀಡು ಬಿಟ್ಟ ಕಾರಣ ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದುದರಿಂದ ಸರಕಾರ, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಕ್ರಮ ಕೈಗೊಂಡು ಆನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು, ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












