ಸುಳ್ಯ:ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ನಿ. ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯುತ್ತಿರುವ ಹಲಸು, ಮಾವು ಮೇಳದಲ್ಲಿ ಸಾಂಸ್ಕೃತಿಕ ಸಂಭ್ರಮ ಮನಸೂರೆಗೊಂಡಿತು.ಪ್ರತಿ ದಿನ
ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಜೂ.12ರಂದು ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ವೈಭವ, ವಿದುಷಿ ಇಂದುಮತಿ ನಾಗೇಶ್ ನಿರ್ದೇಶನದಲ್ಲಿ ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಸುಳ್ಯ ಶಾಖೆಯ ಶಿಷ್ಯ ವೃಂದದಿಂದ ನೃತ್ಯ ವೈಭವ ನಡೆಯಿತು.
ಜೂ. 13ರಂದು ಸಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ದೇಲಂಪ್ಪಾಡಿ ಮಹಿಳಾ ಯಕ್ಷಗಾನ ತಂಡದವರಿಂದ ದಕ್ಷಯಜ್ಞ ಯಕ್ಷಗಾನ ನಡೆಯಿತು.ಬಳಿಕ ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿಗಳು ನಡೆಯಿತು. ಇಂದು
(ಜೂ.14ರಂದು) ಸಂಜೆ 4ರಿಂದ ಪಂಡಿತ್ ಸಿದ್ದಲಿಂಗೇಶ್ ಕಣವಿ, ಗಾನಯೋಗಿ ಮ್ಯೂಸಿಕ್ ಅಕಾಡೆಮಿ ಬೆಂಗಳೂರು ಇವರ ಶಿಷ್ಯರಾದ ಮಾವಂಜಿ ಸಹೋದರಿಯರಿಂದ ಸುಗಮ ಸಂಗೀತ ಸಂಜೆ 4.30ರಿಂದ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಮಾಡಿದ ಅಭಿಷೇಕ್ ಕಣೆಮರಡ್ಕ ಇವರಿಂದ ಕೂಚುಪುಡಿ ನೃತ್ಯ, ಸಂಜೆ 6.30ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ.
ಡೋಲು ಬಾರಿಸುವ ಮೂಲಕ ಸಮಿತಿಯ ಗೌರವ ಅಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಹಲಸು ಮತ್ತು ಮಾವು ಮೇಳಕ್ಕೆ ಚಾಲನೆ ನೀಡಿದರು.ಗೌರವ ಮಾರ್ಗದರ್ಶಕ ಡಾ. ಯು.ಪಿ ಶಿವಾನಂದ, ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಗೌಡ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಮಧುರ ಜಗದೀಶ್ ಸೇರಿದಂತೆ ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.














