*ಡಾ.ಸುಂದರ ಕೇನಾಜೆ.
ಸುಮಾರು ಏಳೆಂಟು ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದ ಜನಪದ ವೀರರ ಸಾಕ್ಷ್ಯಚಿತ್ರ ತಯಾರಿಸುವ ಅವಕಾಶವೊಂದನ್ನು ನಮಗೆ ನೀಡಿತು(ನೋಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಿವು ಸಾಂಸ್ಕೃತಿಕ ರಂಗದ ಅಂತರ್ಜಾಲ) ಆ ಕಾಲದಲ್ಲಿ ಅದು ನೀಡಿದ ಅನುದಾನ ಬಹಳ ದೊಡ್ಡದೇನೂ ಅಲ್ಲ, ಆದರೆ ಸರಕಾರಿ ಸಂಸ್ಥೆಯೊಂದರ ಇಚ್ಛಾಶಕ್ತಿ ಮತ್ತು ಪ್ರೋತ್ಸಾಹ ಬಹಳ ದೊಡ್ಡದು. ನಾವು ಒಂದು ತಂಡವಾಗಿ ನಮ್ಮೆಲ್ಲಾ ಪರಿಶ್ರಮಗಳನ್ನು ಒಟ್ಟುಗೂಡಿಸಿ
ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದೆವು, ಮಾತ್ರವಲ್ಲ ಅದನ್ನು ನಾವೇ ಅಂತರ್ಜಾಲದಲ್ಲಿ ಬಿತ್ತರಿಸುವ ವ್ಯವಸ್ಥೆಯನ್ನೂ ಮಾಡಿದೆವು. ಆಶ್ಚರ್ಯ, ಲಕ್ಷಾಂತರ ಜನ ಈ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಒಂದು ವಿಷಯದ ವಾಸ್ತವಿಕ ಚಿತ್ರಣ, ಗುಣಮಟ್ಟ ಮತ್ತು ಅದನ್ನು ತಯಾರಿಸಿದ ಸಂಸ್ಥೆಯ ಕೆಲಸ ಇವುಗಳನ್ನು ಶ್ಲಾಘಿಸಿದ್ದನ್ನೂ ಕಂಡಿದ್ದೇವೆ.
ಇಲ್ಲಿ ಹೇಳ ಹೊರಟಿರುವುದು, ಸಾಕ್ಷ್ಯಚಿತ್ರಗಳೆಂಬ ಆಧುನಿಕ ಭಿತ್ತಿ ಫಲಕಗಳ ಮಹತ್ವದ ವಿಷಯವನ್ನು. ಒಂದು ಕಾಲದಲ್ಲಿ ಭಿತ್ತಿ ಫಲಕ(ನೋಟೀಸ್ ಬೋರ್ಡ್)ಗಳೆಂದರೆ ವಾಸ್ತವ ಸಂಗತಿಗಳನ್ನು ಬಿತ್ತರಿಸುವ ಸಜೀವ ಮಾಧ್ಯಮಗಳು. ಶಾಲಾ ಕಾಲೇಜು, ಪಂಚಾಯತ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ಭಿತ್ತಿ ಫಲಕದಲ್ಲಿ ಹೊಸ ವಿಚಾರವೊಂದು ಬಿದ್ದ ತಕ್ಷಣ ಕುತೂಹಲಿಗಳು ಅದರ ಸುತ್ತಮುತ್ತ ಮುಗಿಬೀಳುತ್ತಿದ್ದರು. ಅದನ್ನು ಅರ್ಥೈಸುವ, ವಿಸ್ತರಿಸುವ, ವ್ಯಾಖ್ಯಾನಿಸುವ ಕಾರ್ಯಚಟುವಟಿಕೆಯನ್ನು ನಿರ್ವಹಿಸುತ್ತಿದ್ದರು. ವಾಚಿಕವಾದದ್ದು ನಂತರ ಬಾಯ್ದೆರೆ ಪರಂಪರೆಯ ಮೂಲಕ ಎಲ್ಲವನ್ನೂ ಎಲ್ಲರಿಗೂ ದಾಟಿಸುವ ಆಕರ್ಷಣೆಗೆ ಒಳಗಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಅದೇ ಭಿತ್ತಿ ಫಲಕದ ಸ್ಥಾನವನ್ನು ಆಧುನಿಕ ತಂತ್ರಜ್ಞಾನಗಳು ಆಕ್ರಮಿಸಿಕೊಂಡಿವೆ. ಇನ್ನೂ ಒಂದಷ್ಟು ಹೆಜ್ಜೆ ಮುಂದುವರಿದು ದೃಶ್ಯ, ಶ್ರಾವ್ಯಗಳ ರೂಪದಲ್ಲಿ ಬಿತ್ತರಿಸಲ್ಪಡುತ್ತಿವೆ. ಹಾಗಾಗಿ ಇಂದು ಅನೇಕ ಕಡೆಗಳ ಗೋಡೆಗಳಲ್ಲಿ ಈ ಸಾಂಪ್ರದಾಯಿಕ ಭಿತ್ತಿ ಫಲಕಗಳೇ ಇಲ್ಲ. ಆ ಕೆಲಸವನ್ನು ಟಿ.ವಿ, ಕಂಪ್ಯೂಟರ್, ಮೊಬೈಲ್ ಪರದೆಗಳು ಸಲೀಸಾಗಿ ಮಾಡುತ್ತಿವೆ. ಅಂತರ್ಜಾಲಗಳು ಈ ಪರದೆಗಳಿಗೆ ಸಾಮಗ್ರಿಗಳನ್ನು, ಸಾಧನಗಳನ್ನು ವೇಗವಾಗಿ ಮತ್ತು ಸುಲಭವಾಗಿ ನೀಡುತ್ತಿವೆ. ಆದರೆ ಈ ಸಾಧನಗಳಲ್ಲಿ ಬಿತ್ತರಿಸಬೇಕಾದ ಮತ್ತು ಪರಿಣಾಮಕಾರಿಯಾಗಿ ಹೇಳಬಹುದಾದ ವಸ್ತು ವಿಷಯಗಳ ಗುಣಮಟ್ಟಗಳದ್ದೇ ಪ್ರಶ್ನೆ.

ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಇತಿಹಾಸ ಹಾಗೂ ಉನ್ನತ ವ್ಯಕ್ತಿತ್ವಗಳನ್ನು ಪರಿಚಯಿಸುವ ಮತ್ತು ಜೀವಂತವಾಗಿ ಇಡುವ, ಅದರ ಬಗ್ಗೆ ಅರಿವು ಮೂಡಿಸಲು ಬಳಸಬಹುದಾದ ಅತ್ಯಾಧುನಿಕ ವಿಧಾನ ಸಾಕ್ಷ್ಯಚಿತ್ರ. ಇದೇನೂ ಹೊಸ ಪರಿಕಲ್ಪನೆಯಲ್ಲ. ದೃಶ್ಯ ಮಾಧ್ಯಮ ಕಾಲಿರಿಸಿದ ಕಾಲದಿಂದಲೇ ಆರಂಭವಾದ ಮತ್ತು ಅನೇಕ ಭಾಷೆಗಳು ತಾಂತ್ರಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲು ತೊಡಗಿದಲ್ಲಿಂದಲೇ ಬಳಸಲ್ಪಟ್ಟ ಅಭಿವ್ಯಕ್ತಿ ಮಾಧ್ಯಮ. ಇದನ್ನು ಬಳಸುವಲ್ಲಿ ಕಳೆದ ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದ ಸಂಗತಿಯೊಂದಿದೆ, ನಮ್ಮ ಕೆಲವು ಸಂಸ್ಥೆಗಳು (ಸ್ವಾಯತ್ತ ಸಂಸ್ಥೆಗಳೇ ಹೆಚ್ಚು) ತಮಗೆ ಸಿಗುವ ಅನುದಾನದಲ್ಲಿ ಒಂದಿಷ್ಟನ್ನು ಪ್ರತೀ ವರ್ಷ ಸಾಕ್ಷ್ಯಚಿತ್ರಗಳನ್ನು ತಯಾರಿಸುವ ಯೋಜನೆಗೆ ಮೀಸಲಿಡುತ್ತಾ ಬರುತ್ತಿವೆ. ತಮಗೆ ಸಂಬಂಧಿಸಿದ(ಕೆಲವು ಬಾರಿ ಸಂಬಂಧ ಪಡದ) ವಿಷಯ ಅಥವಾ ವ್ಯಕ್ತಿಗಳ ಕುರಿತು ಚಿತ್ರಕತೆ, ನಿರ್ದೇಶಕನನ್ನು( ಹಲವು ಬಾರಿ ತಮ್ಮ ಒಳಗೇ ಒಬ್ಬರನ್ನು) ಆಯ್ಕೆ ಮಾಡಿ ಅವರಿಗೆ ಒಂದಷ್ಟು ಅನುದಾನ ನೀಡಿ ಸಾಕ್ಷ್ಯಚಿತ್ರ ತಯಾರಿಸಲು ಕಾಂಟ್ರಾಕ್ಟ್ ನೀಡಿ ಬಿಡುತ್ತವೆ. ಅವರು ಅನುದಾನ ಬಳಸಿ(ಅನೇಕ ಬಾರಿ ಕಾಟಾಚಾರಕ್ಕೆ) ಒಂದಷ್ಟು ವೀಡಿಯೋ ರೂಪವನ್ನು ಸಿಡಿ ಮೂಲಕ(ಸಿಡಿ ಕಾಲ ಕಳೆದು ವರ್ಷಗಳೇ ಆದರೂ ಇನ್ನೂ ಸಿಡಿಗಳೇ ಬೇಕೆಂದು ಹಠ ಹಿಡಿಯುವ ಸಂಸ್ಥೆಗಳೂ ಇವೆ) ಆ ಸಂಸ್ಥೆಗೆ ನೀಡಿ ತಮ್ಮ ಹೆಸರಿನ ಮುಂದೆ ಖ್ಯಾತ ನಿರ್ದೇಶಕ ಎಂದು ಹಾಕಿಕೊಳ್ಳುವುದಿದೆ. ಹೀಗೆ ಪಡೆದ ಸಿಡಿಗಳನ್ನು ತಮ್ಮ ಸಂಸ್ಥೆಯ ಕಪಾಟಿನ ಒಳಗಿಟ್ಟು ಪ್ರತೀ ಬಾರಿ ಸಾಧನೆಯ ವರದಿಯಲ್ಲಿ ಯಾರಿಗೂ ಸಿಗದ ಈ ಸಿಡಿ ಸಾಕ್ಷ್ಯಚಿತ್ರದ ಬಗ್ಗೆ ಆಗಾಗ ಹೇಳುತ್ತಾ ಪುಳಕಗೊಳ್ಳುವುದೂ ಇದೆ. ಅಂತೂ ಅನುದಾನ ಮುಗಿಸುವುದಕ್ಕೆ ನಮ್ಮ ಅನೇಕ ಸಂಸ್ಥೆಗಳಿಗೆ ಸಾಕ್ಷ್ಯಚಿತ್ರ ತಯಾರಿ ಮತ್ತು ಪುಸ್ತಕ ಪ್ರಕಟಣೆ ಎಂಬ ಖಯಾಲಿ ಅತ್ಯುತ್ತಮ ಮಾರ್ಗ. ಇದುವರೆಗೆ ಇಂತಹಾ ಸಂಸ್ಥೆಗಳು ತಯಾರಿಸಿದ ಸಾಕ್ಷ್ಯಚಿತ್ರಗಳು ಪ್ರಾಮಾಣಿಕವಾಗಿ ಹೊರಬರುತ್ತಿದ್ದರೆ ಇಂದಿನ ನಿರ್ದೇಶಕರು ವಿಷಯಕ್ಕಾಗಿ ತಡಕಾಡಬೇಕಾಗಿತ್ತೋ ಏನೋ? ಅದರಲ್ಲೂ ಈ ನಾಡಿನ ಸಾಹಿತಿಗಳ ಮತ್ತು ಕಲಾವಿದರ ಹೆಸರಿನಲ್ಲಿ ತಯಾರಿಸಿದ ಸಾಕ್ಷ್ಯಚಿತ್ರಗಳಂತೂ ಅನೇಕ, ಆದರೆ ಅವೆಲ್ಲ ಎಲ್ಲಿ ಹೋದವೋ? ಗೊತ್ತಿಲ್ಲ.

ಅದರೆ ನಿಜ ಕಾಳಜಿಯಿಂದ ಈ ನಾಡಿನ ಮಹತ್ವದ ಸಂಗತಿಗಳನ್ನು ಸಾಕ್ಷ್ಯಚಿತ್ರವಾಗಿ ತಯಾರಿಸಿ ಅದನ್ನು ಹಂಚಿದ ಉದಾಹರಣೆಗಳೂ ಇವೆ(ವಾರ್ತಾ ಇಲಾಖೆ ಇಂತಹಾ ಒಂದಷ್ಟು ಕೆಲಸ ಮಾಡಿದೆ) ಉತ್ತಮವಾದ ಚಿತ್ರಕತೆ, ಪ್ರಬುದ್ಧ ನಿರ್ದೇಶನ, ಆಕರ್ಷಕ ಛಾಯಾಚಿತ್ರ, ಉನ್ನತ ಸಂಕಲನ, ಮುದನೀಡುವ ಸಂಗೀತ ಮತ್ತು ಇನ್ನಿತರ ಸಂಗತಿಗಳನ್ನು ಗಮನಿಸಿ ಸಾಕ್ಷ್ಯಚಿತ್ರ ರಚಿಸಿದ ಉದಾಹರಣೆಗಳೂ ಇಲ್ಲದಿಲ್ಲ. ಆದರೆ ಇದು ಖಾಸಗಿಯಾಗಿ ಆದದ್ದೇ ಹೆಚ್ಚು. ಸರಕಾರಿ ವ್ಯವಸ್ಥೆಯಲ್ಲೂ ಉತ್ಕೃಷ್ಟ ಗುಣಮಟ್ವವನ್ನು ಪ್ರಚುರಪಡಿಸಲು ಬಹಳಷ್ಟು ಅವಕಾಶವಿದೆ. ಇಂದು ಹೊಸಹೊಸ ತಂತ್ರಜ್ಞಾನಗಳು, ಅದನ್ನು ನಿರ್ವಹಿಸುವ ತಂತ್ರಜ್ಞರು, ವಿಷಯದ ಆಳ ಅಗಲದ ಅರಿವಿರುವ ಪರಿಣತರು ನಮ್ಮ ಮುಂದಿದ್ದಾರೆ. ಇವರನ್ನು ಸೇರಿಸಿ ಈ ನಾಡಿನ ವಿಚಾರಗಳ ಅತ್ಯುತ್ತಮ ಸ್ಕ್ರಿಪ್ಟ್ ನಿಂದ ಆಕರ್ಷಕ ಸಾಕ್ಷ್ಯಚಿತ್ರಗಳ ತಯಾರಿ ನಡೆಸಬಹುದು.
ಹಾಗಾಗಿ ಅನುದಾನ ಪಡೆಯುವ ನಮ್ಮೆಲ್ಲಾ ಸ್ವಾಯತ್ತ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ವ್ಯಕ್ತಿತ್ವಗಳ ಉತ್ಕೃಷ್ಟ ಸಾಕ್ಷ್ಯಚಿತ್ರಗಳನ್ನು ವರ್ಷದಲ್ಲಿ ಕನಿಷ್ಠ ಒಂದೆರಡಾದರೂ ತಯಾರಿಸಿ ಕೊಡುಗೆ ನೀಡಬೇಕು. ಮಾತ್ರವಲ್ಲ ಅದನ್ನು ತಯಾರಿಸಲು ಇರುವ ಉತ್ಸಾಹದ ಇಮ್ಮಡಿ, ಅದನ್ನು ಇನ್ನೊಬ್ಬರಿಗೆ ತಲುಪಿಸುವುದರಲ್ಲೂ ಇರಬೇಕು. ಇಂದು ಕೇವಲ ಓದುವ, ಕೇಳುವ, ಅಥವಾ ನೋಡುವ ವ್ಯವಧಾನವನ್ನು ಮಾತ್ರ ಇರಿಸಿಕೊಳ್ಳದ ಜನರಿಗಾಗಿ ಈ ಮೂರನ್ನು ಒಂದೇ ಕಡೆ ಲಭ್ಯವಾಗುವಂತೆ ಒಂದು ವಿಷಯವನ್ನು ಹಂಚುವ ಕೆಲಸ ನಡೆಯಬೇಕು. ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಮಹತ್ವದ ವಿಷಯವನ್ನು ಒಂದು ಜವಾಬ್ದಾರಿ ಸಂಸ್ಥೆ ಹಂಚಿದ್ದೇ ಆದರೆ ಅದನ್ನು ಪಡೆಯುವ ಸಂಖ್ಯೆ ಮತ್ತು ಅದು ಈ ನಾಡಿಗೆ ನೀಡುವ ಕೊಡುಗೆ ಮಹತ್ತರವಾಗಿರುತ್ತದೆ. ಈ ಮಹತ್ತರ ಕೆಲಸ ಮಾಡುವ ಮನಸ್ಸು ಮಾಡಬೇಕಾಗಿದೆ.

(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಅಂಕಣಕಾರರು)