*ಡಾ. ಸುಂದರ ಕೇನಾಜೆ.
ಇವೆರಡು ಪುರಾಣದ ಹಿನ್ನೆಲೆಯ ಕೃತಿಗಳು, ಹಾಗೆಂದು ಇವೆರಡು ಪರಸ್ಪರ ಹೋಲಿಸುವಂತದ್ದಲ್ಲ. ಒಂದು ಗಂಭೀರ ವಿಮರ್ಶೆಯಾದರೆ, ಇನ್ನೊಂದು ಪುರಾಣ ಹಿನ್ನೆಲೆಯ ಕಾದಂಬರಿ. ಒಂದು ಮಹಾಭಾರತದ ಒಳ ತಿರುಳು ಹಾಗೂ ಅದರ ಸುತ್ತಮುತ್ತ ಸಂಸ್ಕೃತ, ಕನ್ನಡದಲ್ಲಿ ಹೆಣೆಯಲ್ಪಟ್ಟ ವಿದ್ವತ್ಪೂರ್ಣ ಕಾವ್ಯ ಪ್ರಬೇಧಗಳ ಒಳನೋಟವಾದರೆ, ಇನ್ನೊಂದು ಅದೇ ಮಹಾಭಾರತದ ಪಾತ್ರವೊಂದರ ಸ್ವಗತ ನಿರೂಪಣೆ ಹಾಗೂ ವ್ಯಕ್ತಿತ್ವದ ಕನಿಷ್ಠ, ಗರಿಷ್ಠಗಳನ್ನು ಗುರುತಿಸುವ ಸ್ವವಿಶ್ಲೇಷಣೆ. ಕೆಲವು ದಿನಗಳ ಹಿಂದೆ
ಓದಿದ ಈ ಎರಡು ಕೃತಿಗಳ ಕಿರುನೋಟ ಇಲ್ಲಿ ಹೀಗಿದೆ….
ಲಕ್ಷ್ಮೀಶ ತೋಳ್ಪಾಡಿ ತ್ರಿಭಾಷಾ(ಕನ್ನಡ, ಸಂಸ್ಕೃತ, ತುಳು) ಸಂವೇದನೆಯ ಅಪೂರ್ವ ವಿದ್ವಾಂಸ. ತುಳು ಬದುಕಿನೊಂದಿಗೆ ಕನ್ನಡ ಮತ್ತು ಸಂಸ್ಕೃತ ಕಾವ್ಯ ಜಗತ್ತನ್ನು ತಲಸ್ಪರ್ಶಿಯಾಗಿ ನೋಡಿದ, ಆ ಕುರಿತು ಗಾಢವಾದ ಅನುಭವ ಹಂಚುವ ಉಪನ್ಯಾಸ ಮತ್ತು ಬರೆಹಗಳನ್ನು ನೀಡುತ್ತಾ ಬಂದವರು. ಒಂದು ಪದ ಅಥವಾ ವಾಕ್ಯದ ಬಳಕೆಯ ಹಿಂದೆ ಅಡಗಿದ ಸೂಕ್ಷ್ಮಾತಿಸೂಕ್ಷ್ಮ ಅರ್ಥಗಳನ್ನು ಗ್ರಹಿಸಿ, ಅದನ್ನು ಬಳಸುವ ಸಾಮರ್ಥ್ಯ, ಕಲೆಗಾರಿಕೆ ಎರಡನ್ನೂ ಸಿದ್ದಿಸಿಕೊಂಡವರು. ಅವರ “ಮಹಾಭಾರತ ಅನುಸಂಧಾನದ ಭಾರತಯಾತ್ರೆ” ಮೇಲಿನ ಮಾತಿಗೆ ಅನ್ವರ್ಥವಾಗುವಂತೆ ರಚಿಸಲ್ಪಟ್ಟ ಕೃತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುವ ಮೊದಲೇ ಪತ್ರಿಕೆಯಲ್ಲಿ ಪ್ರಕಟಗೊಂಡು ವಿದ್ವತ್ ವಲಯದಲ್ಲಿ ಬೆರಗು ಮೂಡಿಸಿದ ಲೇಖನಗಳು ಇಲ್ಲಿಯವು. ಇಲ್ಲಿರುವ ಇಪ್ಪತ್ತೈದು ಬಿಡಿಬರೆಹಗಳನ್ನು ಓದುವುದಕ್ಕೂ ಒಂದು ಅರ್ಹತೆ ಬೇಕು. ಅಂದರೆ ಸಾಮಾನ್ಯ ಓದಿಗೆ ನಿಲುಕದ, ಹಾಗೆಂದು ಅಸಾಮಾನ್ಯವೆಂದು ತಿರಸ್ಕರಿಸಲಾಗದ ಬುದ್ಧಿಯನ್ನು ಜಾಗೃತವಾಗಿರಿಸಿಕೊಂಡೇ ಓದಬೇಕಾದ ಕೃತಿ.

ಮಹಾಭಾರತದ ನಾನಾ ಫಟನೆಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸುತ್ತಾ ಅದಕ್ಕೆ ಸಂಸ್ಕೃತ ಮತ್ತು ಕನ್ನಡ ಕಾವ್ಯಗಳ ಪುಪ್ಟೀಕರಣವನ್ನು ನೀಡುತ್ತಾ ಸಾಗುವ ಇಲ್ಲಿಯ ಲೇಖನಗಳು ಓದುಗನಿಗೆ ಹೊಸ ಅನುಭವವನ್ನು ನೀಡುವುದರ ಜತೆಗೆ ತೋಳ್ಪಾಡಿಯವರ ಜ್ಞಾನದ ಹರುಹನ್ನು ವಿಸ್ಮಯಗೊಳಿಸುತ್ತವೆ. ತನ್ನ ಪುರಾಣ ಜ್ಞಾನ, ಇತಿಹಾಸ ಪ್ರಜ್ಞೆ, ವಿಸ್ತೃತ ಓದು ಮತ್ತು ಜೀವನಾನುಭವ ಇವೆಲ್ಲವೂ ಮೇಳೈಸಿ ರೂಪುಗೊಂಡ ಈ ಕೃತಿಯೊಳಗೆ ಒಬ್ಬ ಮಾನವತಾವಾದಿಯೂ ಕುಳಿತಿದ್ದಾನೆ. ಹಾಗಾಗಿ ಇಲ್ಲಿ ಸಂಘರ್ಷವನ್ನೂ ಸಂತಾಪವನ್ನೂ ಮೀರಿದ ಸಮನ್ವಯ ಮತ್ತು ಸಂತಸವನ್ನು ಒಳಗೊಳಗೇ ಹೇಳಲಾಗಿದೆ. ಇದೇ ಈ ಯಾತ್ರೆಯ ಅನುಸಂಧಾನ. ಇದನ್ನು ಹೇಳಲು ತೋಳ್ಪಾಡಿ ಮಾಹಾಭಾರತವೆಂಬ ಮಹಾ ತೇರಿಗೆ ಪರಂಪರೆಯೊಂದಿಗೆ ಹರಿದು ಬಂದ ಕಾಳಿದಾಸ, ಕ್ಷೇಮೇಂದ್ರ, ಪಂಪ, ಬಸವಣ್ಣ, ಕುಮಾರವಾಸ್ಯ, ಜತೆ ಗಾಂಧೀ, ಅಂಬೇಡ್ಕರನ್ನೂ ಬಿಡದ ಆಧುನಿಕ ವಿಮರ್ಶಕರ ನೋಟವನ್ನು ಅಲಂಕರಿಸುತ್ತಾರೆ. ಇದೇ ಈ ಕೃತಿಯ ಶ್ರೇಷ್ಠತೆ. ಅಂದರೆ ಪುರಾಣ ಕಾವ್ಯಗಳ ಬಗ್ಗೆ ತನ್ನೋರ್ವನ ನೋಟವನ್ನು ಮಾತ್ರ ದಾಖಲಿಸುವ ಏಕಮುಖ ನಿಲುವಿನ ಹೊರತಾಗಿ ತನ್ನ ವಿಶಿಷ್ಟ ಆಲೋಚನಾಕ್ರಮ ಹೇಗೆ ಪ್ರಬಲವಾಗಿದೆ ಎನ್ನುವುದನ್ನು ಕಾವ್ಯ ಪರಂಪರೆಯ ಉತ್ಕೃಷ್ಟ

ಲಕ್ಷ್ಮೀಶ ತೋಳ್ಪಾಡಿ
ಉದಾಹರಣೆಗಳ ಮೂಲಕ ಸಮರ್ಥಿಸಿದ್ದಾರೆ. ಇದು ಇವರ ತಿಳಿವಳಿಕೆಯ ವ್ಯಾಪ್ತಿಯನ್ನು ಪರಿಚಯಿಸುವ ಸಾಧನ ಮತ್ತು ಓರ್ವ ಸಂಶೋಧಕನ ಚಿಕಿತ್ಸಕ ಪ್ರವೃತ್ತಿಯೂ ಹೌದು. ಹಾಗಾಗಿ ಇಂತಹಾ ಬರೆಹಗಳು ತೋಳ್ಪಾಡಿಯವರನ್ನು ಮುಂದೊಂದು ದಿನ ಜ್ಞಾನಪೀಠದತ್ತ ಕೊಂಡೊಯ್ದರೂ ಆಶ್ಚರ್ಯ ಪಡಬೇಕಾಗಿಲ್ಲ.
ರಾಧಾಕೃಷ್ಣ ಕಲ್ಚಾರ್ ರವರ ‘ಕವಚ’, ಮಹಾಭಾರತದ ದುರಂತದಲ್ಲೂ ಉದಾತ್ತನಾದ ಕರ್ಣನ ಪಾತ್ರದ ಬಗ್ಗೆ ಚಿತ್ರಿಸಿರುವಂತದ್ದು. ಹುಟ್ಟುತ್ತಲೇ ತನ್ನನ್ನು ತಾನೇ ಅನುಭವಕ್ಕೆ, ವಿಮರ್ಶೆಯ ಒರೆಗೆ ಒಡ್ಡುತ್ತಾ ಸಾಗುವ ಕರ್ಣನ ಪೂರ್ಣ ಬದುಕಿನ ಚಿತ್ರಣ ಇಲ್ಲಿಯದು. ಮಹಾಭಾರತದ ಪಾತ್ರಗಳ ಬಗ್ಗೆ ಆಧುನಿಕ ಸಾಹಿತ್ಯದಲ್ಲಿ ಅನೇಕ ಕೃತಿಗಳು ಬಂದಿವೆ( ಕನ್ನಡ ಕಾವ್ಯಗಳಲ್ಲಂತೂ ಬಹುಪಾಲು. ಯಯಾತಿ, ರಂಡಾಂ ವೂಳಂ(ಭೀಮಾಯಣ), ಞಾನಿನಿ ಉರಙಟ್ಟೆ(ನಾನಿನ್ನು ನಿದ್ರಿಸುವೆ)ಇಂತಹಾ ಭಾರತೀಯ ಕೃತಿಗಳಿಗೆ ಉನ್ನತ ಮನ್ನಣೆಗಳೂ ಲಭಿಸಿವೆ) ಕಲ್ಚಾರ್ ಪುರಾಣ ಪಾತ್ರಗಳನ್ನು ಕನಿಷ್ಠ ಮೂರು ದಶಕಗಳಿಂದ ತಾಳಮದ್ದಳೆಯ ಅರ್ಥಗಾರಿಕೆ ಎನ್ನುವ ವಾಚಿಕ ಪರಂಪರೆಯ ಮೂಲಕ ಕಟ್ಟಿಕೊಡುತ್ತಾ ಬಂದವರು, ಆದರೆ ಇಲ್ಲಿಯ ಕರ್ಣನ ಪಾತ್ರ ವಿಶ್ಲೇಷಣೆಯ ಈ ಬರೆಹ, ವಾಚಿಕ ಪರಂಪರೆಗಿಂತಲೂ ಭಿನ್ನವಾದ ಲೌಕಿಕ ಅನುಭವವನ್ನು ಕೊಡುವಂತದ್ದು. ಇದು ತಾಳಮದ್ದಳೆಯ ಹತ್ತಿರವಿದ್ದವರಿಗೆ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತದೆ. ಕರ್ಣನ ಸುತ್ತ ಜನ್ಮದತ್ತವಾಗಿ ರೂಪುಗೊಂಡಿರುವ ಕವಚ ಮತ್ತು ಸ್ವಯಂ ಕರ್ಣನೇ ರೂಪಿಸಿಕೊಂಡಿರುವ ಕವಚ, ಇವೆರಡು ಅಂತಿಮವಾಗಿ ಹೇಗೆ ನಿಷ್ಕ್ರಿಯಗೊಳ್ಳುತ್ತದೆ ಎನ್ನುವುದೇ ಇಲ್ಲಿಯ ಕಥಾ ಹಂದರ. ಒಂದರ್ಥದಲ್ಲಿ ಅರಿವಿದ್ದೋ ಇಲ್ಲದೆಯೋ ನಿಷ್ಪ್ರಯೋಜಕ ಆವರಣ ಕರ್ಣನದ್ದು.
ಹಾಗೇ ನೋಡಿದರೆ ಮಹಾಭಾರತದ ಕರ್ಣ, ತನ್ನದೇ ಕೈಯಲ್ಲಿಲ್ಲದ ಹಣೆಬರಹ(ಸ್ಕ್ರಿಪ್ಟ್)ಕ್ಕೆ ಹೊಂದಿಕೊಂಡ ಪಾತ್ರ. ಗ್ರೀಕ್ ಪುರಾಣದ ಈಡಿಪಸ್ ನ ದುರಂತ ಪಾತ್ರದಂತೆ ಕರ್ಣನ ಬದುಕಿನಲ್ಲಿ ತನ್ನ ನಿರ್ಧಾರಕ್ಕಿಂತಲೂ ವಿಧಿಯದ್ದೇ ಮುಖ್ಯ ತೀರ್ಮಾನ. ಪಾತ್ರ ಗ್ರಹಿಕೆಯ ಅನೇಕ ಸಂದರ್ಭದಲ್ಲಿ ವಿಧಿಯ ಈ ಕೃತ್ಯಗಳು ಜನಸಾಮಾನ್ಯನ ಆಕ್ಷೇಪಕ್ಕೂ ಒಳಗಾಗುವಂತದ್ದು. ವಿಧಿಯನ್ನು ಜರೆಯುತ್ತಾ ಅದಕ್ಕೊಳಗಾದ ಪಾತ್ರಗಳ ಮೇಲೆ ಕರುಣೆ ತೋರಿಸುತ್ತಾ ಅದನ್ನು ಜೀವಂತವಾಗಿರಿಸಿದ್ದೂ ಇದೆ.

ರಾಧಾಕೃಷ್ಣ ಕಲ್ಚಾರ್
ಹೀಗಿರುವುದರಿಂದಲೇ ಕವಿಗಳು ಕೈಮೀರಿ ಕರ್ಣನನ್ನು ಉದಾತ್ತವಾಗಿ ಬೆಳೆಸಲು ಸಾಧ್ಯವಾದದ್ದು. ಆದರೆ ಕಲ್ಚಾರ್ ಇಲ್ಲಿ ಪಾತ್ರವನ್ನು ವ್ಯಕ್ತಿಯ ವಾಸ್ತವ ಬದುಕಿನ ನೆಲೆಯಿಂದ ನೋಡಲು ಯತ್ನಿಸಿದ್ದಾರೆ. ಹಾಗೆ ನೋಡುವುದಕ್ಕೆ ಮಹಾಭಾರತದಲ್ಲಿ ಕರ್ಣನಷ್ಟು ಸೂಕ್ತ ಪಾತ್ರವೂ ಇನ್ನೊಂದಿಲ್ಲ ಎನ್ನಬಹುದು. ಕಾದಂಬರಿಯಂತಹಾ ಸೃಜನಶೀಲ ವಿಭಾಗದಲ್ಲಿ ಅರ್ಥಗಾರಿಕೆಯಂತೆ ಒಳನೋಟಗಳೊಂದಿಗೆ ಪಾತ್ರ ಗೌರವವನ್ನು ಎತ್ತಿ ಹಿಡಿಯುವುದು ಅಷ್ಟು ಸುಲಭವಲ್ಲ. ಆದರೂ ಈ ಕಾದಂಬರಿಯಲ್ಲಿ ಕರ್ಣನನ್ನು ಕರ್ಣನನ್ನಾಗಿ ನೋಡುವ ವಿಧಾನವೊಂದು ಸಿಗುತ್ತದೆ. ಹೀಗೆ ನೋಡಲು ನಮಗೆ ವ್ಯಾಸ ಭಾರತದಲ್ಲಾಗಲಿ, ಪಂಪ, ಕುಮಾರವ್ಯಾಸರಲ್ಲಾಗಲಿ ಅವಕಾಶವಿಲ್ಲದ ಕಾರಣ ಈ ಕೃತಿಗೆ ಮಹತ್ವವಿದೆ.
ಒಟ್ಟಿನಲ್ಲಿ ಪುರಾಣ ಕಥೆಗಳ ಹೊಸ ಗ್ರಹಿಕೆಗೆ ಕರಾವಳಿ ಕರ್ನಾಟಕದ ಕೊಡುಗೆ(ಯಕ್ಷಗಾನದ ಮೂಲಕ) ಬಹು ದೊಡ್ಡದು. ಅದನ್ನು ಗಂಭೀರಗೊಳಿಸಿ ಉತ್ಕೃಷ್ಟವಾಗಿಸುವ ಬರೆಹಗಳು ತೋಳ್ಪಾಡಿಯವರದ್ದು, ಅದೇ ಕಥೆಗೆ ಕಲಾ ಸ್ಪರ್ಶ ನೀಡಿ ಸೃಜನಾತ್ಮಕಗೊಳಿಸುವ ಬರೆಹಗಳು ಕಲ್ಚಾರ್ ರವರದ್ದು. ಪುರಾಣವನ್ನು ಸಾಮಾನ್ಯ ಕಥೆಯಾಗಿ ನೋಡುವ ರೀತಿಗೂ ಆ ಕಥೆಯನ್ನು ಉನ್ನತವಾಗಿ ಅಥವಾ ಬದುಕಾಗಿ ನೋಡುವ ರೀತಿಗೂ ಅಜಗಜ ಅಂತರವಿದೆ. ಎಲ್ಲ ಓದುಗರಿಗೂ ಬರಹಗಾರರಿಗೂ ಈ ವ್ಯತ್ಯಾಸ ಕಾಣಲೇ ಬೇಕೆಂದೇನೂ ಇಲ್ಲ, ಆದರೆ ಯಾರಿಗೆ ಕಾಣಲು ಸಾಧ್ಯವಾಗುತ್ತದೋ ಅವರು ಶ್ರೇಷ್ಠವಾದುದನ್ನೇ ಮರುಸೃಷ್ಠಿ ಮಾಡುತ್ತಾರೆ. ಪುರಾಣವನ್ನು ನೋಡುವ ಕಣ್ಣುಗಳಿಗಾಗಿ ಉನ್ನತವಾದುದನ್ನು ಕೊಡುವ ಈ ತುಡಿತಗಳಿಗೆ ಆಸ್ವಾದಿಸುವ ಮತ್ತು ಅಭಿನಂದನೆ ಸಲ್ಲಿಸುವ ಆಶಯ ಬಿಟ್ಟರೆ ಪರ್ಯಾಯ ದಾರಿಗಳಿಲ್ಲ.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು ಹಾಗೂ ಜಾನಪದ ಸಂಶೋಧಕರು)