ಸುಳ್ಯ: ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯ ಕಾಪಿಡುವಲ್ಲಿ ಪ್ರಮುಖ ಪಾತ್ರ ವಹಿಸುವ ಚದುರಂಗ ಸ್ಪರ್ಧೆಗೆ ಪೋಷಕರು ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಚದುರಂಗದಾಟಕ್ಕೆ ಪ್ರೋತ್ಸಾಹ ನೀಡುವುದು ಅತ್ಯಗತ್ಯ ಎಂದು ಜಾಲ್ಸೂರು, ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಧ್ಯಕ್ಷ ನ. ಸೀತಾರಾಮ ಹೇಳಿದರು.ಸುಳ್ಯ ತಾಲೂಕು ಚೆಸ್ ಅಸೋಸಿಯೇಷನ್ ಹಾಗೂ ದ.ಕ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ
ಜಾಲ್ಸೂರು ವಿನೋಬಗರದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾದ ಪ್ರಥಮ ಅಂತರ್ ಜಿಲ್ಲಾ ಚೆಸ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದ ಚದುರಂಗದಾಟದಲ್ಲಿ ಭಾರತದ ಹೆಸರು ಇತ್ತೀಚೆಗೆ ರಾರಾಜಿಸುತ್ತಿದ್ದು ಈ ಸ್ಥಾನಮಾನ ಶಾಶ್ವತವಾಗಿ ಉಳಿಯಬೇಕಾದರೆ ಮಕ್ಕಳು ಹಾಗೂ ಯುವ ಜನಾಂಗ ಚದುರಂಗದಾಟದತ್ತ ಆಕರ್ಷಿತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ತಾಲೂಕು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಶಾಂತಾರಾಮ್ ಭಟ್ ಮಾತನಾಡಿ, ಪ್ರಪ್ರಥಮ ಬಾರಿಗೆ ಸುಳ್ಯದಲ್ಲಿ ನಡೆಯುತ್ತಿರುವ ಅಂತರ್ ಜಿಲ್ಲಾ ಚದುರಂಗದಾಟಕ್ಕೆ ಸರ್ವರ ಸಹಕಾರ ಕೋರಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಾಕ್ಷಾತ್ ಹಾಗೂ ಅವರ ತಂಡ ಸಹಕರಿಸಿತು.ಸ್ಪರ್ಧೆಗೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 250 ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿದ್ದರು.
ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರಿ ಕೊಯಿಂಗಾಜೆ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಘಟಕ ಹಾಗೂ ಚದುರಂಗದಾಟದ ತರಬೇತುದಾರ ಹರಿಪ್ರಸಾದ್ ಕೊಯಿಂಗಾಜೆ ಸ್ವಾಗತಿಸಿದರು. ತಾಲೂಕು ಚೆಸ್ ಅಸೋಸಿಯೇಷನ್ ಖಜಾಂಜಿ ಸಾವಿತ್ರಿ ಬಾಜಿನಡ್ಕ ಧನ್ಯವಾದ ಸಮರ್ಪಿಸಿದರು.