*ಡಾ.ಸುಂದರ ಕೇನಾಜೆ.
ರಾಜ್ಯಗಳ ಭಾಷಾನೀತಿ ಎಂದಾಗ ಕರ್ನಾಟಕದ ಕೋಲಾರ ಗಡಿಪ್ರದೇಶವನ್ನೇ ಗಮನಿಸಿ, ಮುಳುಬಾಗಿಲು, ಬಂಗಾರಪೇಟೆ, ಕೆಜಿಫ್ ಇತ್ಯಾದಿ ಭಾಗದಲ್ಲಿ ಇಂದಿಗೂ ಕನ್ನಡ ಚಾಲ್ತಿಯಲ್ಲಿರುವುದು ಕಡಿಮೆಯೇ. ಇಲ್ಲಿ ಕನ್ನಡದಷ್ಟೇ ತಮಿಳು, ತೆಲುಗು ಮಾತನಾಡುವವರ ಸಂಖ್ಯೆಯೂ ಹೆಚ್ಚಿದೆ. ವಾಸ್ತವವಾಗಿ ಈ ಅರುವತ್ತೆಂಟು ವರ್ಷಗಳಲ್ಲಿ ಉಳಿದೆರಡು ಭಾಷೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಬೇಕಿತ್ತು, ಕನ್ನಡದ ಬಳಕೆ ಹೊಸ ತಲೆಮಾರಿನ ಮಧ್ಯೆ ಬಹುವಾಗಿ ಬೆಳೆಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ, ಇದಕ್ಕೆ ತಮಿಳು ತೆಲುಗಿನ ವಿಸ್ತರಣಾನೀತಿಯೂ ಕಾರಣ. ಈ ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿ
ಹುಟ್ಟಿಕೊಂಡಿರುವ(ಲಿಪಿ ಇಲ್ಲದಿದ್ದರೂ) ‘ಮರಸುಗನ್ನಡ’ ಎನ್ನುವ ಉಪಭಾಷೆಯೊಂದು ಇಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದು ಕರಾವಳಿ ಅಥವಾ ಕೊಡಗಿನಲ್ಲಿ ಬಳಕೆಯಲ್ಲಿರುವ ಅರೆಭಾಷೆಗಿಂತಲೂ ಭಿನ್ನ. ಅರೆಭಾಷೆ(ಅರೆಗನ್ನಡ)ಯಲ್ಲಿ ಕನ್ನಡ ಪದಗಳ ಸಂಖ್ಯೆಗಳೇ ಹೆಚ್ಚಿದ್ದರೆ, ಮರಸುಗನ್ನಡದಲ್ಲಿ ಮೂರೂ ದ್ರಾವಿಡ ಭಾಷೆಗಳು ಸ್ಥಾನ ಪಡೆದಿವೆ. ಈ ಎರಡು ರಾಜ್ಯಗಳ ಭಾಷಾ ನೀತಿ ಈ ಗಡಿ ಪ್ರದೇಶಗಳ ಮೇಲೆ ಹೀಗೆ ಪ್ರಭಾವ ಬೀರಿದ್ದನ್ನು ಗಮನಿಸಬಹುದು (ತುಮಕೂರಿನ ಪಾವಗಡ ತಾಲೂಕಿನ ಸುತ್ತ ತೆಲುಗು ನೆಲಗಳು ಆವರಿಸಿವೆ. ಹಾಗಾಗಿ ಇಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಹೆಚ್ಚು).ಇನ್ನು ಬೀದರ್, ಕಲಬುರುಗಿ ಕಡೆಗಳ

ಚಿತ್ರಗಳು:ಡಾ.ಕೇನಾಜೆ
ಗಡಿಗಳಿಗೆ ಹೋದರೆ ಅಲ್ಲಿ ತೆಲುಗಿನ ಜತೆಗೆ ಉರ್ದು ಪ್ರಾಬಲ್ಯವಿದೆ. ಸೇಡಂ, ಚಿಂಚೊಳ್ಳಿ ಭಾಗಗಳಲ್ಲಿ ತೆಲುಗು ಪ್ರಭಾವಕ್ಕೇನೂ ಕೊರತೆಯಿಲ್ಲ. ಬಸವಕಲ್ಯಾಣ ಶುದ್ದ ಕನ್ನಡದ ನೆಲ, ಕನ್ನಡದ ಶ್ರೇಷ್ಠತೆಯನ್ನು ಸಾರಿದ ವಚನ ಸಾಹಿತ್ಯದ ಮೂಲನೆಲ. ಇಲ್ಲಿ ಮರಾಠಿ ಪ್ರಭಾವವೂ ಇದೆ. ಈ ಸ್ಥಿತಿ ಬಿಜಾಪುರದ ಇಂಡಿ ತಾಲೂಕಿನ ಗಡಿಗಳಲ್ಲೂ ಕಾಣಬಹುದು. ಒಟ್ಟಿನಲ್ಲಿ ಕರ್ನಾಟಕದ ಗಡಿ ಪ್ರದೇಶದಿಂದ ಹೆಚ್ಚುಕಡಿಮೆ ಸುಮಾರು ನಲವತ್ತು ಕೀ.ಮೀ ಒಳಭಾಗಗಳಲ್ಲಿ ಕನ್ನಡವನ್ನು ಭೂತಕನ್ನಡಿ ಹಿಡಿದು ಹುಡುಕುವ ಅನಿವಾರ್ಯ ಬಹುತೇಕ ಕಡೆಗಳಲ್ಲಿವೆ. ಯಾವ ಪ್ರದೇಶ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದಿದೆಯೋ ಅಂತಹಾ ಕೆಲವು ಪ್ರದೇಶಗಳಲ್ಲಿ ಕನ್ನಡವನ್ನು ಹುಡುಕುವ ಸ್ಥಿತಿಯೂ ಇದೆ. ಅದೇ ಕನ್ನಡದ ನೆಲ ಬೇರೆ ರಾಜ್ಯಕ್ಕೆ ಹೋಗಿದ್ದರೆ ಆ ರಾಜ್ಯಭಾಷೆ ನಮ್ಮ ಗಡಿ ದಾಟಿ ಒಳಕ್ಕೆ ಬಂದಿಲ್ಲದಿದ್ದರೂ ಅಲ್ಲಿ ಕನ್ನಡದ ಬೆಳವಣಿಗೆಯೇನೂ ಬಾರಿ ಪ್ರಮಾಣದಲ್ಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಗಡಿಪ್ರದೇಶಗಳ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಹೆಚ್ಚುತ್ತಿದ್ದರೂ ಕನ್ನಡವನ್ನು ಕಲಿಯುವ ಅನಿವಾರ್ಯ ಇನ್ನೂ ಸೃಷ್ಟಿಯಾಗಿಲ್ಲ. ಇದು ಕೇವಲ ಶಾಲೆಗಳಿಗೆ ಮಾತ್ರ ಸೀಮಿತವಲ್ಲ. ಒಂದು ಉದಾಹರಣೆ ಗಮನಿಸಿ, ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಶುದ್ಧ ಕನ್ನಡದ ಲಿಂಗಾಯತ ಮಠವಾದ ಕನ್ನೇರಿ, ಒಂದು ಕಾಲದಲ್ಲಿ ಕನ್ನಡ ಬಳಸಿದ ಮುಖ್ಯ ನೆಲ. ಆದರೆ ಇಂದು ಮಠಾಧೀಶರು ಮತ್ತು ಅವರ ಆಪ್ತಸಹಾಯಕರನ್ನು ಹೊರತುಪಡಿಸಿದರೆ ಕರ್ನಾಟಕದಿಂದ ಭೇಟಿ ನೀಡುವ ಭಕ್ತರು ಮಾತ್ರ ಇಲ್ಲಿ ಕನ್ನಡಿಗರು. ಇಂತಹಾ ಉದಾಹರಣೆಗಳು ಕರ್ನಾಟಕದ ಸುತ್ತುಮುತ್ತಲಿನ ಹಲವು ಮಠ, ಮಂದಿರಗಳಲ್ಲೂ ಕಾಣುತ್ತಿದ್ದೇವೆ. ಅವುಗಳು ಇಂದು ಅನ್ಯರಾಜ್ಯಗಳ ಆಡಳಿತ ಭಾಷೆಯ ಅಧೀನಕ್ಕೆ ಒಳಗಾದ ಕಾರಣಕ್ಕೆ ನಿರ್ವಾಹವಿಲ್ಲವೆಂದು ಸುಮ್ಮನಿರಬಹುದು, ಆದರೆ ಗಡಿಯಂಚಿನ ಕರ್ನಾಟಕದೊಳಗೇ ಇರುವ ಧಾರ್ಮಿಕ ಕ್ಷೇತ್ರಗಳೂ ಕನ್ನಡವನ್ನು ಸ್ವೀಕರಿಸದ ಉದಾಹರಣೆಗಳಿವೆ. ಅರವತ್ತೆಂಟು ವರ್ಷ ಕಳೆದರೂ ಅವು ನಮ್ಮವುಗಳಾಗಲಿಲ್ಲ ಅಥವಾ ಕನ್ನಡವನ್ನು ಒಪ್ಪಿಕೊಳ್ಳಲಿಲ್ಲವೆಂದರೆ ಏನರ್ಥ?

ಆದ್ದರಿಂದ ಸುವರ್ಣ ಕರ್ನಾಟಕವನ್ನು ಆಚರಿಸುವ ಈ ಹೊತ್ತು ಯೋಚಿಸಿ ಕಾರ್ಯರೂಪಗೊಳಿಸಬೇಕಾದ ಅನೇಕ ಅಂಶಗಳಿವೆ. ಮೊದಲನೆಯದಾಗಿ ಕನ್ನಡದ ನೆಲವನ್ನು ತಮ್ಮದಾಗಿಸಿಕೊಂಡು ಅಲ್ಲಿ ಕನ್ನಡವನ್ನು ಅಳಿಸಿ ತಮ್ಮ ರಾಜ್ಯಭಾಷೆಯನ್ನು ಬಿತ್ತುವಲ್ಲಿ ನೆರೆಹೊರೆಯ ರಾಜ್ಯಗಳು ಹೇಗೆ ಸಫಲವಾಗಿವೆಯೋ ಹಾಗೇ, ಕನ್ನಡ ನಾಡಿನೊಳಗಿನ ಗಡಿಗಳ ಸುತ್ತ ಕನ್ನಡ ಭಾಷಾ ಬೆಳವಣಿಗೆಗೆ ದೀರ್ಘಾವಧಿ ಕ್ರಿಯಾಯೋಜನೆಯೊಂದನ್ನು ತಯಾರಿಸಿ ಜಾರಿಗೆ ತರಬೇಕು. ಸಂವಿಧಾನದ 350 ಬಿ ವಿಧಿಯ ಭಾಷಾ ಅಲ್ಪಸಂಖ್ಯಾತ ಅವಕಾಶಗಳನ್ನು ಜಾರಿಗೆ ತರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು.ಗಡಿಪ್ರದೇಶದ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್ ಇಟ್ಟುಕೊಳ್ಳುವುದಾದರೆ ಮೂರನೇ ಭಾಷೆಯಾಗಿ ಅವರವರ ಮಾತೃಭಾಷೆಯನ್ನೇ ಕಲಿಸಬೇಕು(ಅಷ್ಟೂ ಉಪಭಾಷೆಗಳ ಪಠ್ಯ ತಯಾರಿಯೂ ಮುಖ್ಯ).
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಬಲ ನೀಡಿ ಗಡಿಭಾಗದ ಮೂಲಭೂತ ಅಭಿವೃದ್ಧಿಗೆ ಆವಕಾಶ ನೀಡಬೇಕು (ಇತ್ತೀಚೆಗೆ ಭೇಟಿ ನೀಡಿದ ಗಡಿಪ್ರದೇಶವೊಂದರಲ್ಲಿ ಬಿಎಸ್ಎನ್ಎಲ್ ಮೊಬೈಲ್ ಆಗೊಮ್ಮೆ ಈಗೊಮ್ಮೆ ಸಿಗುವುದು ಬಿಟ್ಟರೆ, ಬೇರಾವುದೇ ನೆಟ್ವರ್ಕಾಗಲೀ, ಕನಿಷ್ಠ ಗುಣಮಟ್ಟದ ರಸ್ತೆಯಾಗಲೀ, ಮೂಲಭೂತ ಸೌಲಭ್ಯಗಳಾಗಲೀ ಇರಲಿಲ್ಲ) ಬದುಕುವುದಕ್ಕೇ ಕಷ್ಟಪಡುವವರಿಗೆ ಹೊಸ ಭಾಷೆ ಕಲಿಯುವಂತೆ ಸೂಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಆದ್ದರಿಂದ ನಮ್ಮ ಗಡಿಭಾಗಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇ ಆದರೆ ಗಡಿಯ ಒಳಗಿರುವ ಮತ್ತು ಹೊರಗಿನ ರಾಜ್ಯಗಳಲ್ಲಿರುವ ಕನ್ನಡಿಗರಲ್ಲಿ ಈ ರಾಜ್ಯವನ್ನು, ಇಲ್ಲಿಯ ಭಾಷೆಯನ್ನು ಪ್ರೀತಿಸುವ ಮನೋಭಾವ ಬೆಳೆಯಬಹುದು.ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ವಿಶೇಷ ಪ್ಯಾಕೇಜ್ ವೊಂದನ್ನು ನೀಡಬೇಕು.

ಕರ್ನಾಟಕದಿಂದ ಹೊರಗಿರುವ ಪ್ರದೇಶಗಳ ಕನ್ನಡಾಭಿವೃದ್ಧಿಗೆ ಗಮನ ಕೊಡುವುದರಲ್ಲಿ ತಪ್ಪಿಲ್ಲ, ಆದರೆ ನಮ್ಮ ನಕ್ಷೆಯ ಒಳಗೇ ಇರುವ ಪ್ರದೇಶಗಳ ಭಾಷಾವೃದ್ಧಿಗೆ ಯೋಜನೆ ರೂಪಿಸುವುದೇ ಇಂದಿನ ಅನಿವಾರ್ಯ.ಆದ್ದರಿಂದ ಗಡಿಭಾಗದಲ್ಲಿ ಕನ್ನಡವನ್ನು ಭದ್ರಗೊಳಿಸುವ ಕಾರ್ಯ ಮುಂದಿನ ಐದಾರು ವರ್ಷಗಳೊಳಗೆ ನಡೆದದ್ದೇ ಆದರೆ ಕರ್ನಾಟಕದೊಳಗೆ ಕನ್ನಡವನ್ನು ಮೊದಲು ಕಟ್ಟಬಹುದು. ರಾಜ್ಯದೊಳಗಿರುವ ಎಲ್ಲ ಉಪಭಾಷೆಗಳನ್ನು ಗೌರವಿಸುತ್ತಾ ಅವುಗಳಲ್ಲಿ ಕೆಲವು ಉಪಭಾಷೆಗಳ ಅಭಿವೃದ್ಧಿಗೆ ರಚಿಸಿರುವ ಅಕಾಡೆಮಿಗಳಂತೆ ‘ಗಡಿ ಕನ್ನಡ ಭಾಷಾ ಅಕಾಡೆಮಿ’ಯೊಂದನ್ನು ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಿದರೂ ತಪ್ಪಿಲ್ಲ. ಗಡಿಭಾಗದ ಅನ್ಯಭಾಷಿಕರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ್ದೇ ಆದರೆ ಗ್ರಾಮೀಣ ಮೀಸಲಾತಿಯಂತೆ ಇವರಿಗೂ ಮೀಸಲಾತಿಯ ಪ್ರೋತ್ಸಾಹ ನೀಡಬೇಕು. ಗಡಿಭಾಗದ ಕಲೆ, ಜಾನಪದ, ಸಂಗೀತ, ಕರಕುಶಲ ಹಾಗೂ ಗ್ರಾಮೀಣ ಸೊಗಡಿನ ಆಚಾರ-ವಿಚಾರಗಳಿಗೂ ಮಹತ್ವ ನೀಡುವ ಕಾರ್ಯಕ್ರಮ ನಡೆಯಬೇಕು.ಕರ್ನಾಟಕದಲ್ಲಿ ಈಗಿರುವ ಎಲ್ಲ ಅಕಾಡೆಮಿ, ಪ್ರಾಧಿಕಾರಗಳು ಮನಸ್ಸು ಮಾಡಿ ಈ ಭಾಗಕ್ಕೆ ಅನುದಾನ ನೀಡಿದರೆ ಈ ಯಶಸ್ಸು ಸಾಧ್ಯ.

ಒಟ್ಟಿನಲ್ಲಿ ಕರ್ನಾಟಕದ ಗಡಿಭಾಗದ ಕನ್ನಡ ನಾವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲವೆನ್ನುವುದು ನಾವು ಕಂಡುಕೊಂಡ ವಾಸ್ತವ. ಜತೆಗೆ ಅದನ್ನು ಸರಿಪಡಿಸಲು ಇದುವರೆಗೆ ಪ್ರಾಮಾಣಿಕ ಕೆಲಸಗಳು ನಡೆದಿಲ್ಲವೆನ್ನುವುದೂ ಸತ್ಯ. ಅದ್ದರಿಂದ ಈ ಬಗ್ಗೆ ಇನ್ನೂ ವಿಸ್ತೃತ ವರದಿ, ಚರ್ಚೆ ಮತ್ತು ಅನುಷ್ಠಾನದ ಆಶಯಗಳಿಗೆ ಪೂರಕ ಮಾಹಿತಿಯನ್ನು ನಮ್ಮ ಅಧ್ಯಯನ ತಂಡ ನೀಡಲು ಸಿದ್ದವಿದೆ. ಈ ಬಗ್ಗೆ ಕನ್ನಡದ ಮನಸ್ಸುಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಶಿಸುತ್ತೇವೆ.

(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು. ಲೇಖಕರು ಹಾಗೂ ಅಂಕಣಕಾರರು)