*ಡಾ.ಸುಂದರ ಕೇನಾಜೆ.
ಪ್ರವಾಹ ಇದ್ದಲ್ಲೆಲ್ಲ ಸಂಕಟ ಪಡುವುದು ಸಾಮಾನ್ಯ. ಆದ್ದರಿಂದ ಈ ಹೊನಲಿಗೂ ಕನಲಿಗೂ ಸಂಬಂಧವಿದೆ. ನಿರೀಕ್ಷೆಗಳು ಪ್ರವಾಹವಾದಾಗ ಪರೀಕ್ಷೆಗಳು ಸಂಕಟವಾಗುವುದನ್ನು ಇಲ್ಲಿ ವಿಸ್ತರಿಸಲಾಗಿದೆ. ಈ ನಿರೀಕ್ಷೆಯ ಹೊನಲಿಗೆ ಮತ್ತು ಪರೀಕ್ಷೆಗಳ ಕನಲಿಗೆ ತರಗತಿಗಳ ಗಡಿಗಳಿಲ್ಲ, ವಯಸ್ಸಿನ ಮಿತಿಗಳೂ ಇಲ್ಲ. ಸರಕಾರಿ, ಖಾಸಗಿ ಎನ್ನುವ ವಿಭಾಗಗಳಾಗಲಿ, ಶ್ರೀಮಂತ, ಬಡವ ಎನ್ನುವ ಅಂತಸ್ತುಗಳಾಗಲಿ ಇಲ್ಲ. ನಿವೃತ್ತಿಯ ಅಂಚಿನಲ್ಲಿರುವವರು ಅನಿವಾರ್ಯವಾಗಿ ಪರೀಕ್ಷೆ ಬರೆಯುದಾದರೆ ಅಥವಾ
ಪರೀಕ್ಷೆ ಎನ್ನುವ ಏನನ್ನೇ ಎದುರಿಸುವುದಾದರೆ ಸಂಕಟ ಪಡುವುದು ಸಾಮಾನ್ಯ. ಸರಕಾರಿ ಶಾಲೆಗಳಿಂದ ಇಂಟರ್ನ್ಯಾಷನಲ್ ಶಾಲೆಗಳವರೆಗೂ ಯುಜಿಯಿಂದ ಪಿಜಿವರೆಗೂ ಒಂದೇ ಸ್ಥಿತಿ. ಒದ್ದಾಡುವುದು, ಚಳಿ ಜ್ವರ, ತಲೆನೋವು ಬರಿಸಿಕೊಳ್ಳುವುದು(ಗ್ಯಾಸ್ಟಿಕ್ ಅಂತ ಹೊರಳಾಡುವುದೂ ಇದೆ) ಕೆಲವು ಬಾರಿ ಅನಾಹುತಗಳನ್ನೂ ಸೃಷ್ಟಿಸಿಕೊಳ್ಳುವುದು ಇದರ ಲಕ್ಷಣ. ನಿರೀಕ್ಷೆಗಳು ಪ್ರವಾಹದ ಸ್ವರೂಪವನ್ನು ಪಡೆದರೆ ಪರೀಕ್ಷೆಗಳು ಪರಿತಪಿಸುವ ಅಥವಾ ಉರಿಯ ಸ್ವರೂಪವನ್ನು ಪಡೆಯುವುದು ಸಹಜ.
ಸಾಮಾನ್ಯವಾಗಿ ನಿರೀಕ್ಷೆಗಳ ಹೊನಲು ಹೇಗಿರುತ್ತದೆ ಎಂದರೆ, ಅತೀ ಹೆಚ್ಚಿನ ಅಂಕ, ಆ ಅಂಕದಿಂದ ಗಿಟ್ಟಿಸುವ ಅತ್ಯುನ್ನತ ತರಗತಿ(ಕೋರ್ಸ್), ಅಲ್ಲಿಂದ ಮತ್ತೆ ತಮಗೆ ಮಾತ್ರ ಸಿಗಬೇಕಾದ ಅಷ್ಟೇ ಉನ್ನತ ಉದ್ಯೋಗ, ಅಲ್ಲಿಂದ ಮುಂದೆ ಅತೀ ಹೆಚ್ಚು ಸಂಬಳ, ಸ್ಥಾನಮಾನ, ಅವಕಾಶ, ಸನ್ಮಾನ, ಪ್ರತಿಷ್ಠೆ ಹೀಗೆ… ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಜಗತ್ತಿನಲ್ಲಿರುವ ಎಲ್ಲ ಪ್ರತಿಷ್ಠಿತವಾದದು ತಮಗೇ ಸಿಗಬೇಕು, ಅದನ್ನು ಪಡೆಯುವುದೇ ಈ
ಪರೀಕ್ಷೆ ಅಥವಾ ಸ್ವರ್ಧೆಯ ಅಂತಿಮ ಗುರಿ ಎಂಬ ಹೊನಲು ಇದ್ದಲ್ಲೆಲ್ಲ ಕನಲು ಇದ್ದೇ ಇರುತ್ತದೆ. ಹಾಗೆಂದು ಇದು ಮಧ್ಯಮ ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ. ಈ ಒದ್ದಾಟಕ್ಕೆ ಒಳಗಾದ ವ್ಯಕ್ತಿ ಯಾರೇ ಆದರೂ ಪರೀಕ್ಷೆಗಳ ಕನಲಿಕೆಗೆ ಒಳಗಾಗದೇ ಇರಲು ಸಾಧ್ಯವಿಲ್ಲ. ಚುನಾವಣೆ ಎನ್ನುವುದು ಒಂದು ಸ್ಪರ್ಧೆ ಹೌದು, ಆದರೆ ಮೌಲ್ಯಮಾಪನ(ಪರೀಕ್ಷೆ) ಎನ್ನುವುದು ಸ್ಪರ್ಧೆ ಹೇಗಾಗುತ್ತದೋ ಗೊತ್ತಿಲ್ಲ. ಅದು ಪ್ರತಿಭೆಯನ್ನು ತಿಳಿಯುವ ಮಾದರಿ ಎನ್ನುವುದು ಸತ್ಯ.
ಅನೇಕ ನಿರೀಕ್ಷೆಗಳು ಹೊನಲಾಗಿ ಹರಿಯುವುದಕ್ಕೆ ನಿಗದಿತ ಯೋಜನೆ ಇಲ್ಲದಿರುವುದೇ ಕಾರಣ. ಉನ್ನತವಾದುದು ಬೇಕು ಎನ್ನುವವರು ಅದನ್ನು ಪಡೆಯುವ ಸಾಧ್ಯತೆಗಳನ್ನು ಯೋಜಿಸದೇ ಭ್ರಮೆಯಲ್ಲಿದ್ದರೆ ಕನಲುವುದು ಸಾಮಾನ್ಯ. ಸ್ನೇಹಿತರೊಬ್ಬರು ತನ್ನ ಮಗ ಪರೀಕ್ಷಾ ವೇಳಾಪಟ್ಟಿ ಸಿಕ್ಕ ನಂತರದ ಮೂರು ದಿನ ರಾತ್ರಿಹಗಲೆನ್ನದೆ ನಡೆಸುತ್ತಿದ್ದ ಕಾರ್ಯಚಟುವಟಿಕೆಗಳಿಗೆ ಆತಂಕಗೊಂಡರು, ವರ್ಷ ಪೂರ್ತಿ ಕಾಲಾಹರಣ ಮಾಡಿ ಪರೀಕ್ಷೆಗೆ ವಾರ ಬಾಕಿ ಇದ್ದಾಗ ಒದ್ದಾಡುವ ಸ್ಥಿತಿಗೆ ಮರುಗಿದರು. ಹೌದು, ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಒಂದು ವಾರ ಬಾಕಿ ಇರುವಾಗ ನಿದ್ದೆ ಬಿಟ್ಟು ಓದುವ, ಪಾಸಾಗದಿದ್ದರೆ ಅಥವಾ ಮಾರ್ಕ್ ತೆಗೆಯದಿದ್ದರೆ ಮರ್ಯಾದೆ ಪ್ರಶ್ನೆ ಎಂದು ಹಪಾಹಪಿಸುವ ಸಂದರ್ಭಗಳನ್ನು ಕಾಣುತ್ತಿದೇವೆ.
ನಿಜವಾಗಿಯೂ ಪರೀಕ್ಷೆಗಳ ತಯಾರಿ ಎನ್ನುವುದು ವಾರ್ಷಿಕವಾದುದು, ಹಾಗೆಂದು ವರ್ಷ ಪೂರ್ತಿ ಕೊನೆಯ ಕ್ಷಣದ ತಯಾರಿಯಂತೆ ನಡೆಸುವ ಪ್ರಕ್ರಿಯೆಯಂತೂ ಅಲ್ಲ. ಬದಲಾಗಿ ವರ್ಷದ ಆರಂಭದಿಂದಲೇ ಉಳಿದೆಲ್ಲಾ ಚಟುವಟಿಕೆಯ ಭಾಗವಾಗಿ ನಡೆಸುವ ತಯಾರಿ. ಹೆಚ್ಚಿನ ಅಂಕಗಳನ್ನು ಬಯಸುವ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಆರಂಭದಿಂದಲೇ ತೊಡಗಿಕೊಂಡರೆ ಈ ಹೊನಲು ಹಾಗೂ ಅದರಿಂದ ಉಂಟಾಗುವ ಕನಲು ತಪ್ಪುತ್ತದೆ. ಅನೇಕರಿಗೆ ಈ ತಂತ್ರ ಗೊತ್ತಿರುವುದಿಲ್ಲ. ಕೆಲವರು ಕೊನೆಗೆ ಓದಿದರೆ ಮಾತ್ರ ಅರ್ಥವಾಗುವುದೆಂದು ವಾದಿಸುತ್ತಾರೆ. ಊಟನಿದ್ದೆ ಬಿಟ್ಟಾದರೂ ಓದಿ ಮಾರ್ಕ್ ತೆಗೆಯಬೇಕೆಂದು ಹೋರಾಡುತ್ತಾರೆ. ಇದು ಇವರ ಬೇಗಬೇಗ (Harry up)ಎನ್ನುವ ಒತ್ತಡಕ್ಕೆ ಒಳಗಾಗುವ ಮನಸ್ಥಿತಿಯಿಂದಲೇ ಹುಟ್ಟಿಕೊಂಡದ್ದಾಗಿರುತ್ತದೆ. ಈ ಒತ್ತಡದ ಕಾರ್ಯಚರಣೆಗೆ ಒಳಗಾದ ವ್ಯಕ್ತಿ ಎಲ್ಲ ಕೆಲಸಗಳನ್ನು ಕೊನೆಯ ಕಾಲಕ್ಕೆ ಇಟ್ಟುಕೊಳ್ಳುತ್ತಾನೆ ಮತ್ತು ಪರೀಕ್ಷೆ ಹತ್ತಿರವಾಗುತ್ತಿದಂತೆ ಭಯ, ದುಃಖಕ್ಕೆ ಒಳಗಾಗುತ್ತಾನೆ. ಅನೇಕ ಸಂದರ್ಭದಲ್ಲಿ ನೆನಪು ಕೈ ಕೊಡುವ ಇಲ್ಲಾ ಅನಾರೋಗ್ಯ ಕೈ ಹಿಡಿಯುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಕಂಠಪಾಠದ ಮೂಲಕ ಬರೆಯಬಹುದೆಂದು ಬರೆಯಲಾಗದೇ ಮರೆತು ಬಿಡುವುದೂ ಇದೆ. ಇದು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾದ ಮಾತಲ್ಲ. ತನ್ನ ಬದುಕಿನ ಎಲ್ಲಾ ಸಂಗತಿಗಳಿಗೂ ಅನ್ವಯಿಸುತ್ತದೆ.
ವಾಸ್ತವವಾಗಿ ಫಲಿತಾಂಶದಿಂದ ಪಡುವ ಸಂತಸದಷ್ಟನ್ನೇ
ಪ್ರಕ್ರಿಯೆ(ಕಲಿಕೆ)ಯಿಂದಲೂ ಪಡೆಯಲು ಸಾಧ್ಯ. ಅನೇಕರು, ಅನೇಕ ಸಂದರ್ಭಗಳಲ್ಲಿ ಪ್ರಕ್ರಿಯೆಗಳೊಂದಿಗೆ ಒತ್ತಡ, ನಿರುತ್ಸಾಹ, ಭಯ ಕೆಲವು ಬಾರಿ ದುಃಖವನ್ನೂ ಅನುಭವಿಸಿ, ಫಲಿತಾಂಶಗಳಲ್ಲಿ ಸಂತಸಪಡುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ನಕಾರಾತ್ಮಕ ಭಾವನೆಗಳನ್ನು ಇಟ್ಟುಕೊಂಡು ಪ್ರಕ್ರಿಯೆಯಲ್ಲಿ ತೊಡಗಿಕೊಂಡವರಿಗೆ ಸಕಾರಾತ್ಮಕ ಫಲಿತಾಂಶವನ್ನು ಸ್ವೀಕರಿಸುವುದು ಕಷ್ಟ. ಇದರಿಂದ ಫಲಿತಾಂಶಗಳಲ್ಲೂ ಕನಲುವ ಸ್ಥಿತಿ ಉಂಟಾಗುತ್ತದೆ.
ಆದ್ದರಿಂದ ಪ್ರತೀ ಪರೀಕ್ಷೆ ಅಥವಾ ಮೌಲ್ಯಮಾಪನಕ್ಕೆ ಒಳಗಾಗುವುದೂ ಒಂದು ತಂತ್ರ. ಈ ತಂತ್ರವನ್ನು ನಿಭಾಯಿಸಲು ವಾರ್ಷಿಕವಾದ ಯೋಜನೆಯೊಂದು ಬೇಕು. ಈ ಯೋಜನೆಯಲ್ಲಿ ದಿನವೊಂದಕ್ಕೆ ಎಷ್ಟು ತಯಾರಿ ನಡೆಸಬೇಕು. ಈ ತಯಾರಿಯ ಮಧ್ಯೆ ಎಷ್ಟು ಇತರ ಚಟುವಟಿಕೆಗಳು ಬೇಕು ಎನ್ನುವ ಖಚಿತ ತೀರ್ಮಾನಗಳು ಮತ್ತು ಅದನ್ನು ಅನುಕರಿಸುವ ಬದ್ಧತೆಗಳು ಬೇಕು. ಇದು ಕಾರ್ಯರೂಪಕ್ಕೆ ಬರಲು ಮಾರ್ಗದರ್ಶಕರ ಅಥವಾ ಪೋಷಕರ ಬೆಂಬಲ ಬೇಕು. ಇದಕ್ಕೆ ಕಾರಣಗಳನ್ನು ಹುಡುಕುವುದು, ಸಮಸ್ಯೆಗಳನ್ನು ಹೇಳಿಕೊಳ್ಳುವುದು ಇತ್ಯಾದಿಗಳಿಂದ ಖಡಾಖಂಡಿತವಾಗಿ ದೂರ ಇರಬೇಕು. ಅನೇಕ ಬಾರಿ ಮೊಬೈಲ್, ಟಿ.ವಿ, ಪೋಷಕರನ್ನು, ಶಿಕ್ಷಕರನ್ನು ಯಾರೂ ಸಿಗದಿದ್ದರೆ ಸರಕಾರವನ್ನು ದೂರುವುದಿದೆ. ಇದರಿಂದ ಮತ್ತೆ ಕನಲುವಿಕೆ ಬಿಟ್ಟರೆ
ಬೇರೇನೂ ಕಾಣಲು ಸಾಧ್ಯವಿಲ್ಲ. ಓದುವುದು ಮಾತ್ರ ಮುಖ್ಯವಲ್ಲ, ಓದಿದ ವಸ್ತುವನ್ನು ನಿಗದಿತ ಸಮಯದಲ್ಲಿ ಪ್ರತಿಪಾದಿಸುವ ಅಥವಾ ಅಭಿವ್ಯಕ್ತಿಸುವ ಕಲೆಗಾರಿಕೆಯ ಅರಿವಿರಬೇಕು. ಇದನ್ನೂ ಅಭ್ಯಾಸ ಮಾಡಿಕೊಳ್ಳಬೇಕು. ಅನೇಕರಿಗೆ ಕಲಿಕೆ ನಡೆಸಿದ ಅದೇ ತಂತ್ರದಲ್ಲಿ ಬರೆಯಲು ಅಥವಾ ಅಭಿವ್ಯಕ್ತಿಸಲು ಸಾಧ್ಯತೆ ಇರುವುದಿಲ್ಲ. ಇನ್ನು ಕೆಲವರು ಏನೂ ತಯಾರಿ ನಡೆಸದಿದ್ದರೂ ಏನೇನೋ ಬರೆದು ಫಲಿತಾಂಶ ನಿರೀಕ್ಷೆಯ ಹೊನಲಿನಲ್ಲಿರುವುದೂ ಇದೆ. ಇವೆರಡೂ ಕನಲುವ ದಾರಿಗಳೇ ಆಗಿರುತ್ತವೆ.
ಒಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡಿದ ಯಾವುದೇ ಪರೀಕ್ಷಾರ್ಥಿ ನಿರೀಕ್ಷೆಯನ್ನೂ ಪ್ರಾಮಾಣಿಕವಾಗಿಯೇ ಇಟ್ಟುಕೊಳ್ಳಬಹುದು. ಹೊನಲಿನ ಮತ್ತು ಕನಲಿನ ಹೊರಗಿದ್ದು ಹೊಳಹಿನ ಮತ್ತು ಕನಸಿನ ಸಾಧ್ಯತೆಯೊಂದಿಗೆ ಇರುವುದೇ ಸಂತಸದಾಯಕ ಕಲಿಕೆ.
(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು,ಲೇಖಕರು ಹಾಗೂ ಅಂಕಣಕಾರರು).