*ಗಣೇಶ್ ಮಾವಂಜಿ.
‘ಒಬ್ಬ ಒಳ್ಳೆಯ ಗುಣನಡತೆಯ ಹುಡುಗ ಇದ್ದಾನೆ. ನಿಮ್ಮ ಕಡೆ ಹುಡುಗಿ ಇದ್ದರೆ ಹೇಳಿ ಆಯ್ತಾ…’.
ಊರಿನ ಕಾರ್ಯಕ್ರಮವೊಂದರಲ್ಲಿ ಹಿರಿಯರೊಬ್ಬರು ಮತ್ತೊಬ್ಬರೊಂದಿಗೆ ಹೇಳುತ್ತಿದ್ದರು. ‘ಹುಡುಗ ಯಾರು?’ ಎಂದು ಕೇಳಿದಾಗ ದೂರದಲ್ಲಿ ಓರ್ವ ಯುವಕನೊಂದಿಗೆ ಹರಟೆ ಹೊಡೆಯುವ ಮತ್ತೊಬ್ಬ ಯುವಕನನ್ನು ಬೊಟ್ಟು ಮಾಡಿ ತೋರಿಸಿದರು. ಆ ಯುವಕ ನೋಡಿದರೆ ಆಗಷ್ಟೇ ಕಿಸೆಯಿಂದ ಸ್ಯಾಚೆಟ್ ನ್ನು ತೆಗೆದು ಅಂಗೈಗೆ ಸುರಿದು ತನ್ನ ಕೆಳ ತುಟಿಯನ್ನು
ಗಲ್ಲದವರೆಗೆ ಎಳೆದು ಅಂಗೈಗೆ ಸುರಿದ ಹುಡಿಯನ್ನು ತನ್ನ ಹಲ್ಲಿನ ಸೆಟ್ ನ ಕೆಳಭಾಗಕ್ಕೆ ತಳ್ಳುತ್ತಿರುವುದು ಕಂಡು ಬಂತು.
ಒಳ್ಳೆಯ ಗುಣನಡತೆಯ ಹುಡುಗನೆಂದು ಬಣ್ಣನೆಗೆ ಒಳಗಾದ ವ್ಯಕ್ತಿಯ ಸಾಕ್ಷಾತ್ ದರ್ಶನ ಮಾಡಿದ ಬಳಿಕ ‘ಹುಡುಗನಿಗೆ ದುರಾಭ್ಯಾಸ ಏನಾದ್ರು ಉಂಟಾ?’ ಎಂದು ಪ್ರಶ್ನೆ ಬಂದಾಗ ‘ಹಾಗೇನೂ ಇಲ್ಲಪ್ಪಾ…ಹುಡುಗ ಅಪ್ಪಟ ಚಿನ್ನ. ಯಾವಾಗಲಾದರೂ ಒಮ್ಮೊಮ್ಮೆ ಫ್ರೆಂಡ್ಸ್ ಸಿಕ್ಕಿದಾಗ ಬೀಯರ್ ಮಾತ್ರ ಕುಡಿಯುತ್ತಾನೆ ಅಷ್ಟೇ’ ಎಂಬ ಹೊಗಳಿಕೆಯ ಮಾತುಗಳು ಮತ್ತೆ ಬಂದವು.
ಅಲ್ಲಿಗೆ ಒಳ್ಳೆಯ ಹುಡುಗನೆಂದು ಹೊಗಳಿಕೆಗೆ ಒಳಗಾದ ವ್ಯಕ್ತಿಯ ಎರಡು ಒಳ್ಳೆಯ ಗುಣಗಳು ಅದಾಗಲೇ ಬಟಾ ಬಯಲಾಗಿದ್ದವು. ಹುಡುಗಿ ಸಿಗದ ಈ ಕಾಲದಲ್ಲೂ ಪ್ರಾಯಕ್ಕೆ ಬಂದ ಹುಡುಗರು ದುರಾಭ್ಯಾಸ ಅಂಟಿಸಿಕೊಂಡರೆ ಮತ್ತೆ ಹುಡುಗಿ ಸಿಗುವ ಮಾತೆಲ್ಲಿ?

ಹಳ್ಳಿಯ ಹುಡುಗರು, ಸಣ್ಣಪುಟ್ಟ ಕೆಲಸ ಮಾಡುತ್ತಾ ಹೊಟ್ಟೆ ಹೊರೆಯುವ ಯುವಕರು ದುರಾಭ್ಯಾಸಗಳನ್ನು ಅಂಟಿಸಿಕೊಂಡು ಬಾಯಿ ಕೆಂಪು ಮಾಡಿಕೊಂಡೋ ಅಥವಾ ಒಮ್ಮೊಮ್ಮೆ ಮಾತ್ರ ಎಂದುಕೊಂಡು ನಶೆ ಏರಿಸಿ ಜಾಲಿ ಮಾಡುತ್ತಿದ್ದರೆ ಪ್ರಸಕ್ತ ಸನ್ನಿವೇಶದಲ್ಲಿ ಮದುವೆಯಾಗದೆಯೇ ಉಳಿದುಬಿಡುವ ಆತಂಕ ಇದೆ. ಏಕೆಂದರೆ ಪರಿಸ್ಥಿತಿ ಆ ಹಂತಕ್ಕೆ ಬಂದು ತಲುಪಿದೆ.
ಒಂದು ಕಾಲದಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡ್ ಎನ್ನುವಂತಹ ಪರಿಸ್ಥಿತಿ ಇದ್ದರೂ ಈಗ ಆ ಡಿಮಾಂಡ್ ಇಲ್ಲದಾಗಿ ಹೋಗಿದೆ. ಕೆಲ ವರ್ಷಗಳ ಹಿಂದೆ ಬ್ರಾಹ್ಮಣ ವಧುವಿಗೆ ಮಾತ್ರ ಬರ ಎಂಬ ಪರಿಸ್ಥಿತಿ ಇದ್ದರೂ ಈಗೀಗ ಎಲ್ಲಾ ಧರ್ಮಗಳ, ಎಲ್ಲಾ ಜಾತಿಗಳಲ್ಲೂ ಮೀಸೆ ಹೊತ್ತ ಸಾಮಾನ್ಯ ಗಂಡಸರಿಗೆ ಹುಡುಗಿ ಸಿಗದೆ ಮದುವೆ ಮರೀಚಿಕೆ ಎಂಬಂತಹ ಪರಿಸ್ಥಿತಿ ಬಂದೊದಗಿದೆ.
ಕಾಲ ಎಷ್ಟೊಂದು ಬದಲಾವಣೆ ಆಗಿದೆ ನೋಡಿ. ಹಿಂದೆಲ್ಲಾ ‘ಹುಡುಗಿ ಆಗಬಹುದು. ಆದರೆ ನಮಗೆ ಭರ್ತಿ ಹತ್ತು-ಹತ್ತು ಸಿಗಬೇಕು. ಏಕೆಂದರೆ ನಾವು ನಮ್ಮ ಮನೆಯಿಂದ ಕೊಡುವಾಗ ಅದಕ್ಕಿಂತಲೂ ಹೆಚ್ಚು ಕೊಟ್ಟು ಕಳುಹಿಸಿದ್ದೇವೆ’ ಎನ್ನುವ ಮಾತು ಬರುತ್ತಿತ್ತು. ಇಲ್ಲಿ ಹತ್ತು, ಹತ್ತು ಎಂದರೆ ಹತ್ತು ಪವನ್ ಚಿನ್ನ, ಹತ್ತು ಸಾವಿರ ರೂಪಾಯಿ ವರದಕ್ಷಿಣೆ ಹಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆಗಿತ್ತು. ಹೆಣ್ಣಿನ ಕಡೆಯವರು ಅಷ್ಟೊಂದು ಅನುಕೂಲಸ್ಥರಾಗಿಲ್ಲದಿದ್ದರೆ ‘ಅದಾಗದ ಮಾತು’ ಎಂದು ಕೈ ಚೆಲ್ಲಿ ಕನ್ಯಾದಾನ ಮಾಡುವುದರಿಂದ ಹಿಂದೆ ಸರಿಯುತ್ತಿದ್ದರು.
ಹುಡುಗಿಯ ಹಲ್ಲುಬ್ಬಾಗಿದ್ದರೆ, ಬಣ್ಣ ಕಪ್ಪಾಗಿ, ಪ್ರಾಯ ಹೆಚ್ಚಾಗಿದ್ದರೆ, ಕುಟುಂಬದ ಬಗ್ಗೆ ಸದಭಿಪ್ರಾಯ ಇಲ್ಲದಿದ್ದರೆ ಹುಡುಗಿ ನೋಡಲು ಬಂದವರ ಪೈಕಿ ಹಿರಿಯವರೊಬ್ಬರು ಏಕಾಏಕಿ ‘ ಹುಡುಗಿ ಆಗಬಹುದು. ಆದರೆ ಸಿಗುವುದು ಮಾತ್ರ ಇಪ್ಪತ್ತೈದು, ಇಪ್ಪತ್ತೈದು ಸಿಗಬೇಕು’ ಎಂದು ಸಬೂಬು ಹೇಳುತ್ತಿದ್ದರು. ಅಲ್ಲಿಗೆ ಹೆಣ್ಣು ಹೆತ್ತವರು ಕಂಗಾಲಾಗಿ ‘ಅಷ್ಟಾಗದು. ಕೈಲಿದ್ದದ್ದು ಕೊಡುತ್ತೇವೆ. ನಮ್ಮ ಹುಡುಗಿಗೆಂದು ಒಂದಷ್ಟು ಚಿನ್ನ, ಬಣ್ಣ ಮಾಡಿಟ್ಟಿದ್ದೇವೆ. ಅವಷ್ಟನ್ನು ಹಾಕ್ತೇವೆ’ ಎಂದು ದಯನೀಯವಾಗಿ ಬೇಡಿಕೊಂಡರೂ ಹುಡುಗನ ಕಡೆಯವರು ಮಾಡಿಟ್ಟ ಗಮ್ಮತ್ತಿನ ಪರಿಮಳ ಮೂಗಿಗೆ ಬಡಿಯುತ್ತಿದ್ದರೂ ಕಾಲಿಗೆ ಚಪ್ಪಲಿ ಏರಿಸಿ ನಡೆದೇ ಬಿಡುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಉಲ್ಟಾ ತಿರುಗಿದೆ. ಹೆಣ್ಣು ಹೆತ್ತವರ ಗೋಳಿನ ಕಥೆ ಕಾಣದ ಆ ದೇವರಿಗೆ ತಲುಪಿದ ಫಲವೋ ಗೊತ್ತಿಲ್ಲ. ಈಗ ಹಲ್ಲುಬ್ಬಾದರೂ ಪರವಾಗಿಲ್ಲ, ಕಣ್ಣು ಕೋಸಾಗಿದ್ದರೂ ತೊಂದರೆ ಇಲ್ಲ. ಬಣ್ಣ ಕಪ್ಪಾದರೇನಂತೆ ಅವರು ಕೂಡಾ ಮನುಷ್ಯರಲ್ಲವೇ.? ಎಂದು ಗಂಡಿನ ಕಡೆಯವರು ವೇದಾಂತ ಮಾತಾಡುವಷ್ಟು ಪರಿಸ್ಥಿತಿ ಬದಲಾಗಿದೆ. ಅಷ್ಟರ ಮಟ್ಟಿಗೆ ಮದುವೆಗೆ ಹುಡುಗಿಯ ಬರ ಎದ್ದು ಕಾಣತೊಡಗಿದೆ.
ಈಗ ಮದುವೆ ಕಾರ್ಯಕ್ರಮ ಇರಲಿ.., ದೈವ ಕೋಲವೇ ಇರಲಿ., ಜಾತ್ರೆ, ಆಟ ಅಥವಾ ಇನ್ಯಾವುದೇ ಸಭೆ ಸಮಾರಂಭಗಳಿರಲಿ..ಪರಿಚಯಸ್ಥರೋ, ಸಂಬಂಧಿಕರೋ ಯಾರೇ ಸಿಗಲಿ…ಕುಶಲೋಪರಿ ಮಾತುಕತೆಯ ಬಳಿಕ ಮಾತು ಹೊರಳುವುದೇ ‘ ನಿಮ್ಮ ಕಡೆ ಹುಡುಗಿ ಉಂಟಾ? ನಮ್ಮ ಒಬ್ಬ ಹುಡುಗನಿಗೆ ಹುಡುಗಿ ಆಗಬೇಕಿತ್ತು..’ ಎಂಬ ಸಂಭಾಷಣೆಯೊಂದಿಗೆ. ಆಗ ಆಚೆ ಕಡೆಯಿಂದಲೂ ಪ್ರತ್ಯುತ್ತರವಾಗಿ ‘ ಇದ್ದರೆ ನೀವೇ ಹೇಳಬೇಕು. ನಮ್ಮಲ್ಲಿಯೂ ಮದುವೆಯಾಗದ ನಾಲ್ಕೈದು ಹುಡುಗರಿದ್ದಾರೆ. ನಿಮ್ಮೂರಲ್ಲಿ ಇದ್ದರೆ ತಿಳಿಸಿ..’ ಎಂದು ಹೇಳಿದಾಗ ಎರಡೂ ಕಡೆಯಿಂದಲೂ ಪರಸ್ಪರ ಗಹಗಹಿಸುವ ನಗು ವಿನಿಮಯವಾಗುವುದರೊಂದಿಗೆ ಸಂಭಾಷಣೆ ಕೊನೆಗೊಳ್ಳುತ್ತದೆ.
ಸಂಭಾಷಣೆ ಮತ್ತೂ ಕೂಡಾ ಮುಂದುವರಿಯುತ್ತದೆ ಎಂದಾದರೆ ಮಾತು ಈಗಿನ ಹುಡುಗಿಯರ ಗುಣಾವಗುಣಗಳ ಬಗ್ಗೆ ವಿಶ್ಲೇಷಣೆ ವಿನಿಮಯವಾಗುತ್ತದೆ. ‘ಈಗಿನ ಹುಡುಗಿಯರು ಹೈಸ್ಕೂಲ್ ಬಿಟ್ಟು ಕಾಲೇಜಿಗೆ ಸೇರಿದಾಗಲೇ ಲೌ ಸ್ಟಾರ್ಟ್ ಆಗ್ತದೆ. ಮತ್ತೆ ಖಾಲಿ ಬಿದ್ದ ಹುಡುಗರ ಕೈ ಹಿಡಿಯುವವರು ಯಾರಿದ್ದಾರೆ ಹೇಳಿ?’ ಎಂದು ಈಚೆ ಕಡೆಯವರು ಹೇಳಿದರೆ ಆಚೆ ಕಡೆಯವರು ತಮಗೂ ಅದರ ಬಗ್ಗೆ ಪಿಹೆಚ್ಡಿ ಮಾಡುವಷ್ಟು ಜ್ಞಾನ ಇದೆ ಎಂಬಂತೆ ‘ಈಗಿನ ಹುಡುಗಿಯರಿಗೆ ಅಹಂಕಾರ ತುಂಬಿ ಕಣ್ಣೇ ಕಾಣುವುದಿಲ್ಲ. ತಮ್ಮ ಮನೆಯಲ್ಲಿ ಉಪ್ಪು ತರಲು ಕಾಸಿಲ್ಲದಿದ್ದರೂ ಕಟ್ಟಿಕೊಳ್ಳುವವನು ಮಾತ್ರ ದುಡ್ಡಿನ ಮೂಟೆ ಹೊರುವವನೇ ಆಗಬೇಕೆಂದು ಬಯಸುತ್ತಾರೆ. ಹೀಗಾದರೆ ಕೃಷಿಯನ್ನೇ ನಂಬಿದ ಮೂವತ್ತು ಕಳೆದ ಯುವಕರ ಗತಿ ಏನು? ಎಂದು ಲೆಕ್ಚರ್ ಬಿಡುತ್ತಾರೆ.
ಇಲ್ಲಿ ಯಾರನ್ನು ದೂರಬೇಕೆಂದು ಗೊತ್ತಾಗುವುದಿಲ್ಲ. ಏಕೆಂದರೆ ಎರಡು ದಶಕಗಳ ಹಿಂದೆ ಹೆಣ್ಣು ಹೆತ್ತವರು ಇದೇ ಗೋಳನ್ನು ಅನುಭವಿಸಿದ್ದರು. ಕೈ ಹಿಡಿಯುವಾತ ಕಪ್ಪಗಿದ್ದರೂ, ಕುಳ್ಳನಾಗಿದ್ದರೂ, ಮುಖ ಸೊಟ್ಟಗಿದ್ದರೂ ಪರವಾಗಿಲ್ಲ, ಮನೆ ಮಗಳು ವಯಸ್ಸು ಮೀರುವುದರೊಳಗಾಗಿ ಮನೆಯ ಹೊಸ್ತಿಲು ದಾಟಿಸಲು ಹರಸಾಹಸ ಪಡುತ್ತಿದ್ದರು. ಗಂಡನ ಮನೆ ತಲುಪಿದ ಮಗಳು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂಬಂತಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಪರಿಸ್ಥಿತಿ ಎಣಿಕೆಗೆ ಸಿಗದಷ್ಟು ಬದಲಾದ್ದರಿಂದ ಇತ್ತೀಚೆಗೆ ಹುಡುಗಿಗೆ ಬರ ಕಾಣಿಸತೊಡಗಿದೆ. ಹೀಗಾಗಿ ಪ್ರತೀ ಊರಲ್ಲೂ ಮದುವೆಯಾಗದ ಹುಡುಗರ ಸಂಖ್ಯೆ ಸಂಘ ಕಟ್ಟಿಕೊಳ್ಳುವಷ್ಟು ವೃದ್ಧಿಯಾಗಿದೆ.
2019 ರಲ್ಲಿ ಕೊರೋನಾ ವಕ್ಕರಿಸಿದಾಗ ಊರಲ್ಲೇ ಇರುವ ಹುಡುಗರ ದೆಸೆ ಬದಲಾಗುತ್ತದೆ ಎಂದೇ ನಂಬಲಾಯಿತು. ಅದರಲ್ಲೂ ಪ್ರತಿಷ್ಠಿತ ಕಂಪೆನಿಯವರು ತಮ್ಮ ಕೆಲಸಗಾರರ ಸಂಖ್ಯೆಗೆ ಕತ್ತರಿ ಪ್ರಯೋಗ ಮಾಡಿದಾಗ ಪಟ್ಟಣ ಸೇರಿದ್ದ ಬಹುತೇಕ ಮಂದಿ ಊರಿಗೆ ಮರಳಿ ಸೆಟ್ಲ್ ಆಗುವತ್ತ ಮನ ಮಾಡಿದ್ದರು. ಆದರೆ ಕೊರೊನಾ ಗುಮ್ಮ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಯಥಾ ಸ್ಥಿತಿಗೆ ಬಂದು ನಿಂತಿದೆ. ಅಂದರೆ ಹಳ್ಳಿಗರಿಗೆ ಮತ್ತೆ ಪೇಟೆಯ ಮೋಹ ಹೆಚ್ಚಾಗತೊಡಗಿದೆ. ಈಗಿನ ಹೆಣ್ಮಕ್ಕಳಂತೂ ಕೃಷಿಕರಾಗಿ ಮನೆಯಲ್ಲೇ ಇರುವ ಯುವಕರತ್ತ, ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಊರಲ್ಲೇ ಇರುವವರತ್ತ ಕಣ್ಣೆತ್ತಿಯೂ ನೋಡುವುದಿಲ್ಲ.
ಹಾಗಿದ್ದರೂ ಸ್ವ ಉದ್ಯೋಗ ಹೊಂದಿದ, ಉತ್ತಮ ಚಾರಿತ್ರ್ಯ ಹೊಂದಿದ ಸನ್ನಡತೆಯ ಯುವಕರಿಗೆ ಬೇಡಿಕೆ ಇದ್ದೇ ಇದೆ. ತೀರಾ ಮುಂದುವರಿದ ಈ ತಾಂತ್ರಿಕ ಯುಗದಲ್ಲಿ ಯುವಕರ ಗುಣಾವಗುಣಗಳು ಕ್ಷಣಮಾತ್ರದಲ್ಲಿ ಹೆಣ್ಣು ಹೆತ್ತವರಿಗೆ ತಲುಪಿಬಿಡುತ್ತವೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡಿಬಿಡುವ ಆ ಕಾಲದಿಂದ ನಾವೆಷ್ಟೋ ದೂರ ಕ್ರಮಿಸಿ ಬಂದಿದ್ದೇವೆ. ಆದುದರಿಂದ ದುಶ್ಚಟಗಳಿಂದ ದೂರವಿದ್ದು, ಸನ್ನಡತೆಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುವಂತಿದ್ದರೆ ಸಂಗಾತಿಯ ಹುಡುಕಾಟದಲ್ಲಿ ಸೋಲು ಕಾಣದು.

(ಗಣೇಶ್ ಮಾವಂಜಿ ಪತ್ರಕರ್ತರು, ಲೇಖಕರು)