*ಗಣೇಶ್ ಮಾವಂಜಿ.
ನನಗೆ ಆಗಾಗ ಸೆಲ್ಫಿ ತೆಗೆದೋ ಅಥವಾ ಸಂಬಂಧಿಕರೋ, ಗೆಳೆಯರೋ, ಸಹಪಾಠಿಗಳೋ, ಪರಿಚಿತರೋ ಎಲ್ಲಾದರೂ ಸಿಕ್ಕಿದಾಗ ಪಕ್ಕನೆ ಮೊಬೈಲ್ ಕ್ಯಾಮರಾಕ್ಕೆ ಕೆಲಸ ಕೊಟ್ಟು ಅದಕ್ಕೆ ಸೂಕ್ತವಾದ ಕ್ಯಾಪ್ಶನ್ ಬರೆದು ವಾಟ್ಸ್ಯಾಪ್ ಸ್ಟೇಟಸ್ಗೆ ದಾಟಿಸಿಬಿಡುವ ಹುಚ್ಚು.ಈ ಹುಚ್ಚು, ಕ್ಯಾಮರಾ ಮೊಬೈಲ್ ಕೈಗೆ ಬಂದ ಮೇಲಷ್ಟೇ ಆರಂಭವಾದ ಹುಚ್ಚಲ್ಲ. ಕಂಡದ್ದನ್ನು ಕಂಡ ಹಾಗೆಯೇ ತೋರಿಸುವ ಕನ್ನಡಿ ನೋಡಿದ ಬಳಿಕ ಶುರುವಾದ ಹುಚ್ಚು. ಕನ್ನಡಿಯಾದರೆ ನಾವು ನೋಡಿದಾಗ ಮಾತ್ರ ನಮ್ಮನ್ನು
ತೋರಿಸುತ್ತದೆ.ಆದರೆ ಫೊಟೋ ಹಾಗಲ್ಲವಲ್ಲ.ಒಮ್ಮೆ ಕ್ಲಿಕ್ಕಿಸಿದ ಫೊಟೋವನ್ನು ಜತನವಾಗಿ ಕಾಪಾಡಿಕೊಂಡರೆ ಆ ಕ್ಷಣದ ನೆನಪನ್ನು ಅದು ಅಳಿಯುವವರೆಗೂ ತನ್ನಲ್ಲಿರಿಸಿಕೊಳ್ಳುತ್ತದೆ.ಕೇವಲ ಇಂದಿಗೆ ಮಾತ್ರವಲ್ಲ.. ಮುಂದೆಂದಿಗೂ ಭಾವನೆಗಳನ್ನು ಅರಳಿಸಿ, ಆ ಭಾವದ ಕಂಪನ್ನು ಮನದ ತುಂಬಾ ವ್ಯಾಪಿಸುವ ಕೆಲಸವನ್ನು ಈ ಭಾವಚಿತ್ರಗಳು ಪ್ರಾಮಾಣಿಕವಾಗಿ ಮಾಡುತ್ತವೆ.
ಮೊನ್ನೆ ಹೀಗೆಯೇ ವಾಟ್ಸ್ಯಾಪ್ ಸ್ಟೇಟಸ್ಗೆ ಫೊಟೊವೊಂದನ್ನು ಹಾಕಿದ್ದೆ. ಫೊಟೋ ನೋಡಿದ ಕಾಲೇಜು ಸಹಪಾಠಿಯೊಬ್ಬರು ನಿನಗೆ ಫೊಟೋ ಮರ್ಲ್ (ಹುಚ್ಚು) ಜೋರು ಉಂಟಲ್ವಾ? ಎಂದು ಆತ್ಮೀಯವಾಗಿ ಪ್ರಶ್ನಿಸಿ ಮೆಸೇಜ್ ಮಾಡಿದ್ರು.ಹೌದು ಆ ಮರ್ಲ್ ಜೋರು ಉಂಟೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡೆ.ಜೊತೆಗೆ ಅದೊಂದು ರೀತಿಯ ಮರ್ಲ್ ಹೌದಾದರೂ ಆ ಮರ್ಲ್ಗೆ ಮನಸ್ಸನ್ನು ಪೊರ್ಲು (ಚಂದ) ಮಾಡುವ ಧಂ ಇದೆ.,ತಾಕತ್ ಇದೆ ಎಂದು ಮರು ಮೆಸೇಜ್ ಮಾಡಿದೆ. ನಗುವ ಸ್ಮೈಲಿ ಇಮೇಜೊಂದನ್ನು ನನಗವರು ದಾಟಿಸಿದ್ರು.

ಒಮ್ಮೆ ಯೋಚಿಸಿ ನೋಡಿ. ಈ ಫೊಟೊ ಎಂಬ ಮಾಯಾವಿಗೆ ಎಷ್ಟೊಂದು ಶಕ್ತಿ, ಸಾಮರ್ಥ್ಯ ಇದೆ! ಎಲ್ಲೋ,ಯಾವಾಗಲೋ ಘಟಿಸಿದ ಘಟನೆಯನ್ನು ಮತ್ತೊಮ್ಮೆ ಮರು ನೆನಪಿಸಿಕೊಡುವ ತಾಕತ್ತು ಈ ಫೊಟೊಗೆ ಇದೆ. ಪ್ರತಿಯೊಬ್ಬರೂ ಪುಟ್ಟ ಪಾಪುವಾಗಿ ಅಪ್ಪನ ಹೆಗಲೇರಿರುತ್ತಾರೆ, ಅಮ್ಮನ ಮಡಿಲು ಸೇರಿ ಕಿಲಕಿಲ ನಗು ಚೆಲ್ಲಿರುತ್ತಾರೆ. ಒಡಹುಟ್ಟಿದವರೊಂದಿಗೆ ಒಡನಾಡುತ್ತಾ ಬಾಲಚೇಷ್ಟೆಗಳನ್ನಾಡಿಯೇ ಬೆಳೆದಿರುತ್ತಾರೆ. ಆ ಕ್ಷಣಗಳನ್ನು ಆ ಸಮಯದಲ್ಲಿ ಸೆರೆಹಿಡಿದು ಅದಕ್ಕೊಂದು ಸುಂದರವಾದ ಫ್ರೇಮ್ ಹಾಕಿ ಈಗ ನಮಗೆ ಯಾರಾದರೂ ಉಡುಗೊರೆ ಕೊಟ್ಟರೆಂದಾದರೆ ಅದಕ್ಕಿಂತ ಮಿಗಿಲಾದ ಗಿಫ್ಟ್ ಬೇರೆ ಇರದು. ಏಕೆಂದರೆ ಮಗುವಾಗಿದ್ದಾಗ ನಾವು ಹೇಗಿದ್ದೆವು ಎಂಬುದನ್ನು ನೋಡುವ ಕುತೂಹಲ, ತವಕ ಎಲ್ಲರಲ್ಲೂ ಇದ್ದೇ ಇರುತ್ತದೆ.
ತಾಂತ್ರಿಕವಾಗಿ ಮುಂದುವರಿದ ಈ ದಿನಗಳಲ್ಲಿ ಈಗೀಗ ಮತ್ತೊಂದು ಫ್ಯಾಷನ್ ಆರಂಭವಾಗಿದೆ. ಯಾವುದಾದರೊಂದು ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿ ಗತಿಸಿದರೆ ಅವರೊಂದಿಗೆ ನಿಂತು ಫೊಟೋ ತೆಗೆದದ್ದು ಇದ್ದರೆ ಆ ಫೊಟೋ ಜಾಲತಾಣದಲ್ಲಿ ಮೈಲೇಜ್ ಪಡೆದುಕೊಳ್ಳುತ್ತದೆ.ಯಾರೋ ಒಬ್ಬರು ಚಲನಚಿತ್ರ ನಟನಟಿಯರು ಇಹಲೋಕ ತ್ಯಜಿಸಿದಾಗ ಅವರೊಂದಿಗೆ ತೆಗೆದ ಫೊಟೋ ಹಾಕಿ ‘ಓಂ ಶಾಂತಿ ‘ ಎಂದು ಶ್ರದ್ಧಾಂಜಲಿ ಅರ್ಪಿಸಿ ಅವರ ನೆನಪುಗಳನ್ನು ಮೆಲುಕು ಹಾಕುವುದು ಇತ್ತೀಚೆಗಿನ ಟ್ರೆಂಡ್.ಇದು ತಪ್ಪಲ್ಲ.ಏಕೆಂದರೆ ಆ ಫೊಟೋ ನೋಡಿದಾಗೆಲ್ಲಾ ಅವರೊಂದಿಗಿನ ಒಡನಾಟ ಮತ್ತೆ ಕಣ್ಮುಂದೆ ಬಂದಂತಾಗುತ್ತದೆ.ಅವರ ಮಾತುಗಳು ಕಿವಿಯಲ್ಲಿ ಅನುರಣಿಸಿದಂತಾಗುತ್ತದೆ. ಎಂದೋ,ಯಾವಾಗಲೋ ನಕ್ಕ ಅವರ ನಗು ಮತ್ತೆ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅಂತಹ ಶಕ್ತಿ ಆ ಪೋಟೋದಲ್ಲಿರುತ್ತದೆ.
ತುಂಬಾ ಪ್ರೀತಿಸುವ ಅಮ್ಮನದ್ದೋ, ಒಲುಮೆ ತೋರುವ ಅಪ್ಪನದ್ದೋ, ಮಮಕಾರ ತೋರುವ ಮಡದಿಯದ್ದೋ ಅಥವಾ ತೊದಲು ನುಡಿಯುವ ಮಕ್ಕಳ ಫೊಟೋ ಹೆಚ್ಚಿನವರ ಪರ್ಸ್ ನಲ್ಲಿ ಸ್ಥಾನ ಪಡೆದಿರುತ್ತದೆ. ಅವರು ಸನಿಹ ಇಲ್ಲದಿದ್ದರೂ ಆ ಫೊಟೋವನ್ನು ನೋಡಿದಾಗ ಅವರ ನೆನಪು ಸದಾ ಸ್ಮೃತಿ ಪಟಲದಲ್ಲಿ ತೇಲಿ ಬರುತ್ತದೆ. ಅಂತಹದ್ದೊಂದು ಅದ್ಭುತ ತಾಕತ್ತು ಆ ಪೊಟೋದಲ್ಲಿರುತ್ತದೆ. ಕಣ್ಣೆದುರು ಇಲ್ಲದವರನ್ನು ಕಣ್ಣೆದುರಿಗೆ ಎಳೆದು ತಂದು ಅವರ ನಗುಮುಖವನ್ನು ತಂದಿರಿಸುವ ಶಕ್ತಿ,ಸಾಮರ್ಥ್ಯ ಆ ಫೊಟೋ ದಲ್ಲಿ ಅಡಕವಾಗಿರುತ್ತದೆ.

ಯಾವುದೋ ಮದುವೆ ಸಂದರ್ಭದಲ್ಲೋ ಅಥವಾ ಇನ್ಯಾವುದೋ ಕಾರ್ಯಕ್ರಮದಲ್ಲಿ ಪರಿಚಿತರೆಲ್ಲರೂ ಒಟ್ಟಾದಾಗ ಮೊಬೈಲ್ ಹಿಡಿದು ಗುಂಪಿನಲ್ಲಿ ಇದ್ದವರೊಬ್ಬರು ಕ್ಯಾಮರಾ ತೆಗೆದು ಫೊಟೋ ತೆಗೆಯಲು ಹೊರಟರೆ ‘ಎಷ್ಟೊಂದು ಫೊಟೋ ತೆಗೆಯುತ್ತೀರಪ್ಪಾ…. ಫೊಟೋ ಯಾವುದೂ ಬೇಡ’ ಎಂದು ಯಾರಾದರೊಬ್ಬರು ಕ್ಯಾತೆ ತೆಗೆದೇ ತೆಗೆಯುತ್ತಾರೆ. ಆದರೆ ಅವರ ಮನದ ಮೂಲೆಯಲ್ಲೂ ತನ್ನ ಫೊಟೋ ಚಂದ ಬರಬೇಕು ಎಂಬ ನಿರೀಕ್ಷೆ ಇದ್ದೇ ಇರುತ್ತದೆ.ಅದಕ್ಕಾಗಿಯೇ ಬೋಳು ಮಂಡೆಯವರೂ ನೆತ್ತಿಯ ಮೇಲಿನ ನಾಲ್ಕು ಕೂದಲನ್ನು ಬಾಚಿ ಸರಿಪಡಿಸಿಕೊಳ್ಳುತ್ತಾರೆ, ಉಬ್ಬು ಹಲ್ಲಿನವರು ಎಷ್ಟು ಬೇಕೋ ಅಷ್ಟು ನಗುವನ್ನು ತಂದುಕೊಂಡು ಉಬ್ಬು ಹಲ್ಲಿನ ದರ್ಶನವಾಗದಂತೆ ಎಚ್ಚರಿಕೆ ವಹಿಸುತ್ತಾರೆ.ಯಾವಾಗಲೂ ಮುಖ ಗಂಟಿಕ್ಕಿಕೊಂಡೇ ಇರುವವರೂ ಕೂಡಾ ಕ್ಯಾಮರಾ ಕಂಡ ಕೂಡಲೇ ನಗುವ ಪ್ರಯತ್ನ ಮಾಡಿಯೇ ಮಾಡುತ್ತಾರೆ. ಕುಳ್ಳಗಿದ್ದವರು ತುದಿಗಾಲಲ್ಲಿ ನಿಂತಾದರೂ ಉದ್ದ ಮೈಂಟೈನ್ ಮಾಡಿದರೆ ಹೆಚ್ಚು ಉದ್ದ ಇದ್ದವರು ಇನ್ನೊಬ್ಬರ ಹತ್ತಿರ ಬಾಗಿ ಫೊಟೋಗೆ ಪೋಸು ಕೊಡುತ್ತಾರೆ.ಗ್ರೂಪ್ ಫೊಟೋ ಕ್ಲಿಕ್ಕಿಸಿದ ಬಳಿಕ ಅಷ್ಟೂ ಜನರಿದ್ದರೂ ಎಲ್ಲರೂ ಮೊದಲಾಗಿ ಝೂಮ್ ಮಾಡಿ ನೋಡುವುದು ಮಾತ್ರ ಅವರವರ ಫೊಟೋ ವನ್ನು ಮಾತ್ರ.
ಕೈಯಲ್ಲೇ ಕ್ಯಾಮರಾ ಇರುವ ಈಗಿನ ಕಾಲದಲ್ಲೂ ಫೊಟೋ ಕ್ಲಿಕ್ಕಿಸಿ ಅದು ಹೇಗೆ ಬಂದಿದೆ ಎಂದು ಕಾತರಿಸಿ ನೋಡುವ ತವಕ ಆಗಿನ ಕಾಲದಿಂದಲೂ ಈಗಿನ ಕಾಲದಲ್ಲೇ ಅಧಿಕ ಎನ್ನಬಹುದು. ಹಿಂದಿನ ಕಾಲದಲ್ಲಿ ಈಗಿನಂತೆ ಫೊಟೋ ತೆಗೆದು ಆಗಿಂದಾಗ್ಗೆ ವಾಟ್ಸ್ಯಾಪ್ ಗೆ ದಾಟಿಸುವ ವ್ಯವಸ್ಥೆ ಇದ್ದಿರಲಿಲ್ಲ.ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ ಮೆಟ್ಟಿಲೇರುವ ಮೊದಲೊಮ್ಮೆ ಅಕ್ಷರ ಕಲಿತ ಶಾಲೆಯಿಂದ ಬೀಳ್ಕೊಡುಗೆಯಾಗುವಾಗ ಫೊಟೋ ತೆಗೆಯುವ ಪರಿಪಾಠವಿತ್ತು.ಆ ಫೊಟೋ ತೆಗೆಸಿಕೊಳ್ಳುವ ಗೌಜಿ, ಗಮ್ಮತ್ ಎಷ್ಟಿತ್ತೆಂದರೆ ಅದನ್ನು ನೆನೆಸಿಕೊಂಡಾಗ ಈಗಲೂ ನಗು ಬರುತ್ತದೆ.ಗ್ರೂಪ್ ಫೊಟೋ ಇಂತಹ ದಿನ ತೆಗೆಯುವುದು ಎಂದು ನಿರ್ಧಾರ ಆಗುವಾಗಲೇ ಯಾವ ಡ್ರೆಸ್ ಹಾಕುವುದು ಎಂಬ ಎಣಿಕೆ ಆರಂಭವಾಗುತ್ತಿತ್ತು. ಇದ್ದ ಒಂದೆರಡು ಡ್ರೆಸ್ ನಲ್ಲಿ ಯಾವುದು ಚಂದವೋ ಅದನ್ನು ಒಗೆದು, ಬುತ್ತಿ ಪಾತ್ರಕ್ಕೆ ಕೆಂಡ ತುರುಕಿ ಇಸ್ತ್ರಿ ಹಾಕಿ ರೆಡಿಯಾಗುತ್ತಿದ್ದ ನೆನಪು. ಹುಡುಗಿಯರಾದರೆ ಮುಡಿ ತುಂಬಾ
ಕನಕಾಂಬರ ಮುಡಿದು, ಮುಖ ತುಂಬಾ ಪೌಡರ್ ಲೇಪಿಸಿ ಫೊಟೋ ತೆಗೆಸಿಕೊಳ್ಳಲು ಸನ್ನದ್ಧರಾಗುತ್ತಿದ್ದರು. ಕೈಗೊಂದು ಅಪ್ಪನದ್ದೋ ಅಥವಾ ಇನ್ಯಾರದ್ದೋ ವಾಚನ್ನು ಎರವಲು ಪಡೆದುಕೊಂಡು ಅದಕ್ಕೊಂದು ರಬ್ಬರ್ ಬ್ಯಾಂಡ್ ಸಿಕ್ಕಿಸಿ ಅದರ ಸೈಜನ್ನು ಚಿಕ್ಕದು ಮಾಡಲಾಗುತ್ತಿತ್ತು. ಇಷ್ಟೆಲ್ಲಾ ರೆಡಿಯಾಗಿ ಶಾಲೆಗೆ ಹೋಗುತ್ತಿದ್ದದ್ದು ಬೆಳಿಗ್ಗೆ.ಆದರೆ ಫೊಟೋ ತೆಗೆಯುತ್ತಿದ್ದದ್ದು ಮಾತ್ರ ಸೂರ್ಯ ಕಂತಿದ ಬಳಿಕವಷ್ಟೇ. ಏಕೆಂದರೆ ಫೊಟೋ ಚಂದ ಬರಬೇಕೆಂದರೆ ಬಿಸಿಲು ಇರಕೂಡದೆಂದು ಆಗ

ಫೊಟೊಗ್ರಾಫರ್ ಹೇಳುತ್ತಿದ್ದರು.ಅಲ್ಲಿಯವರೆಗೆ ಶಾಲಾ ಮೈದಾನದಲ್ಲಿ ಮನಸೋ ಇಚ್ಚೆ ಆಡಿಯಾಗುತ್ತಿತ್ತು. ಅಷ್ಟಾಗುವಾಗ ಒಗೆದು ಇಸ್ತ್ರಿ ಹಾಕಿದ ಅಂಗಿ, ಚಡ್ಡಿ ಕೊಳಕಾಗುತ್ತಿತ್ತು. ಮುಖಕ್ಕೆ ಹಾಕಿದ ಪೌಡರ್ ಬೆವರಿನಿಂದ ತೊಪ್ಪೆಯಾಗಿ ಹೋಗುತ್ತಿತ್ತು. ಕೊನೆಗೆ ಕಪ್ಪು ಬಟ್ಟೆಯಿಂದ ಮುಚ್ಚಿದ ಕ್ಯಾಮರಾದ ಮುಸುಕು ಸರಿಸಿ ಫೊಟೋ ತೆಗೆದಾಗ ಉಸ್ಸಪ್ಪಾ ಅನ್ನುವಂತಾಗುತ್ತಿತ್ತು. ಹಾಗಿದ್ದರೂ ಆ ಫೊಟೋ ಕೈಗೆ ಸಿಗಬೇಕೆಂದರೆ ಕನಿಷ್ಠ ಹದಿನೈದು ದಿನವಾದರೂ ಕಾಯಲೇ ಬೇಕಾಗಿತ್ತು.
ಶಾಲೆಯಲ್ಲಿ ತೆಗೆದ ಗ್ರೂಪ್ ಫೊಟೋದತ್ತ ಈಗೊಮ್ಮೆ ಕಣ್ಣಾಡಿಸಿ ನೋಡಿಬಿಡಿ. ಕಲಿಯಲು ಜಾಣನಾಗಿದ್ದವನ ಹೆಸರು,ಕೀಟಲೆ ಕೊಟ್ಟು ಸದಾ ಮೇಷ್ಟ್ರಿಂದ ಬೈಸಿಕೊಳ್ಳುತ್ತಿದ್ದ ಸಹಪಾಠಿಯ ನಾಮಧೇಯ, ಆಟೋಟಗಳಲ್ಲಿ ಮುಂದಿದ್ದ ಹುಡುಗ,ಹುಡುಗಿಯರ ಹೆಸರು.., ಹೀಗೆ ಎಲ್ಲರ ಹೆಸರು ಮನಸ್ಸಿನೊಳಗೆ ಬಂದುಬಿಡುತ್ತದೆ.ಅದೆಷ್ಟು ವರ್ಷಗಳು ಸಂದರೂ ಬಾಲ್ಯದ ನೆನಪುಗಳನ್ನು ಕಟ್ಟಿಕೊಡುವ ತಾಕತ್ತು ಆ ಫೋಟೊದಲ್ಲಿರುತ್ತದೆ.
ಫೊಟೋ ಎಂಬುದು ಕೇವಲ ಆ ಕ್ಷಣಕ್ಕೆ ಮಾತ್ರ ಖುಷಿ ಕೊಡುವ ವಸ್ತುವಲ್ಲ. ಬದಲಾಗಿ ಉಸಿರು ಇರುವವರೆಗೂ ಆ ಕ್ಷಣದ ನೆನಪನ್ನು ಸಾಗಿಸುವಲ್ಲಿ ಸಹಾಯ ಮಾಡುವ ಅದ್ಭುತ ಮಾಯಾವಿ ಎಂದೇ ಹೇಳಬಹುದು. ಹೆಚ್ಚಿನ ಫೊಟೊಗಳು ಆ ಸಂದರ್ಭದಲ್ಲಿ ಚಂದ ಕಾಣದಿದ್ದರೂ ಹಲವು ವರ್ಷಗಳ ಬಳಿಕ ನೋಡಿದಾಗ ಚಂದ ಕಾಣಿಸುತ್ತದೆ. ‘ಆಗ ನಾನು ಹೀಗಿದ್ದೇನೋ?! ಎಂದು ಕಣ್ಣರಳಿಸುವಷ್ಟು ಅಂದವಾಗಿರುತ್ತದೆ. ಸಾಧ್ಯವಾದರೆ ನಿಮ್ಮ ಹಳೆಯ ಫೊಟೋಗಳೆಲ್ಲವನ್ನೂ ಈಗಿನಿಂದಲೇ ಕಲೆಹಾಕಿ, ಪೆನ್ ಡ್ರೈವ್ ಅಥವಾ ಗೂಗಲ್ ಡ್ರೈವ್ ನಲ್ಲೋ ಸೇವ್ ಮಾಡಿಡಿ. ಒಂದು ಹತ್ತು, ಹದಿನೈದು ವರ್ಷಗಳ ಬಳಿಕ ಅದರತ್ತ ಒಮ್ಮೆ ಕಣ್ಣಾಡಿಸಿ ನೋಡಿದರೆ ನಿಮಗಾಗುವ ಸಂತಸವನ್ನು ಪದಗಳಲ್ಲಿ ವರ್ಣಿಸಲು ಖಂಡಿತಾ ಸಾಧ್ಯವಾಗದು. ಇದು ಮಾತ್ರ ಖಂಡಿತಾ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರರು)














