*ಗಣೇಶ್ ಮಾವಂಜಿ.
ದೇವರಿದ್ದಾನೆ ಎಂದು ನಂಬುವವರನ್ನು ಆಸ್ತಿಕರೆಂದೂ, ದೇವರ ಅಸ್ತಿತ್ವವನ್ನು ಅಲ್ಲಗಳೆಯುವವರನ್ನು ನಾಸ್ತಿಕರೆಂದೂ ಕರೆಯುತ್ತಾರೆ. ಕೆಲವರು ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯುವವರಿರುತ್ತಾರೆ. ಅಂತವರು ಸಂಕಷ್ಟ ಬಂದಾಗ ಮಾತ್ರ ದೇವರಿಗೆ ಕೈ ಮುಗಿಯುತ್ತಾರೆ. ಸುಖದಲ್ಲಿದ್ದಾಗ ಅವರಿಗೆ ದೇವರ ನೆನಪೇ ಇರುವುದಿಲ್ಲ. ಮತ್ತೆ ಕೆಲವರು ಸುಖ, ದುಃಖಗಳೆಂಬ ಬೇಧವಿಲ್ಲದೆ ಅನವರತ ದೇವರನ್ನು ಭಜಿಸುವುದರಲ್ಲಿ ತೊಡಗಿರುತ್ತಾರೆ. ಮತ್ತೆ ಕೆಲವರು ಯಾವುದೇ
ವೃತಾಚರಣೆ ಮಾಡದೆ ಕಾಣದ ಶಕ್ತಿಗೆ ಮನಸ್ಸಿನಲ್ಲೇ ವಂದಿಸುತ್ತಾ ಅತ್ತ ನಾಸ್ತಿಕರೂ ಅಲ್ಲದೆ ಇತ್ತ ಆಸ್ತಿಕರೂ ಅಲ್ಲದ ಗುಂಪಿಗೆ ಸೇರಿದವರಿರುತ್ತಾರೆ. ಅದೇನೇ ಇರಲಿ., ದೇವರನ್ನು ನಂಬುವ ಆಸ್ತಿಕರಲ್ಲೂ, ದೇವರನ್ನು ನಂಬದ ನಾಸ್ತಿಕರಲ್ಲೂ ‘ಮೇಲೊಬ್ಬ ಕುಳಿತಿದ್ದಾನೆ. ಅವನ ಕಣ್ಣನ್ನು ಮುಚ್ಚಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ನ್ಯಾಯ ಮಾರ್ಗದಲ್ಲೇ ನಡೆ’ ಎಂದು ಸದಾ ಎಚ್ಚರಿಸುವ ಮನವೊಂದು ಇದ್ದೇ ಇರುತ್ತದೆ.
ಈ ಜಗತ್ತಿನಲ್ಲಿ ಪ್ರತ್ಯಕ್ಷವಾಗಿ ನ್ಯಾಯಾಲಯ, ಪೋಲಿಸ್ ಸ್ಟೇಷನ್ ಮಾಡುವ ಕೆಲಸವನ್ನು ಪರೋಕ್ಷವಾಗಿ ದೇವರ ಮೇಲಿನ ಭಯ ಮಾಡುತ್ತದೆ.
ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಹೋದರೂ ಮೇಲೊಬ್ಬ ಕುಳಿತವನ ಮೇಲೆ ಭರವಸೆ ಇರಿಸಿದರೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಹೆಚ್ಚಿನವರಲ್ಲಿ ಇರುತ್ತದೆ. ಆ ನಂಬಿಕೆಯೇ ಅವರಿಗೆ ಧೈರ್ಯದಿಂದ ಜೀವನ ಸಾಗಿಸಲು ಪ್ರೇರೇಪಿಸುತ್ತದೆ. ತಪ್ಪು ಮಾಡಿದವನಿಗೂ ದೇವರ ಭಯವಿದ್ದೇ ಇರುತ್ತದೆ. ಆ ಭಯದಲ್ಲೇ ಆತ ತಪ್ಪಾಗದಂತೆ ಎಚ್ಚರಿಕೆ ವಹಿಸುತ್ತಾನೆ.
ಕೊಟ್ಟವನು ಕೋಡಂಗಿ, ಇಟ್ಟುಕೊಂಡವನು ಈರಭದ್ರ ಎನ್ನುವ ಗಾದೆ ಮಾತೊಂದಿದೆ. ಸಾಲ ಪಡೆದುಕೊಂಡು ಕೊಟ್ಟವನಿಗೆ ಕೊಡದೆ ವಂಚಿಸಿದಾಗ ಕೊಟ್ಟವ ಮಂಗನಾದಂತೆ., ಪಡೆದುಕೊಂಡು ವಂಚಿಸಿದಾತ ಮೀಸೆ ತಿರುಗಿಸುವ ವೀರ ಎಂಬುದು ಈ ಮಾತಿನ ತಾತ್ಪರ್ಯ. ಯಾವುದೇ ದಾಖಲೆಗಳ ಹಂಗಿಲ್ಲದೆ ವಿಶ್ವಾಸದಲ್ಲಿ ಸಾಲ ಕೊಟ್ಟು ಪಡೆದುಕೊಂಡವ ಕೊಡದಿದ್ದಾಗ ಕೊಟ್ಟವನು ಪೋಲಿಸ್ ಠಾಣೆಗೋ, ನ್ಯಾಯಾಲಯಕ್ಕೋ ಅಲೆದಾಡಿ ಏನೂ ಪ್ರಯೋಜನವಿಲ್ಲ. ಏಕೆಂದರೆ ನ್ಯಾಯಾಲಯ ನ್ಯಾಯ ನೀಡುವುದು ಸಾಕ್ಷಿ, ದಾಖಲೆಗಳ ಮೇಲೆ ಮಾತ್ರ. ಹೀಗಿದ್ದಾಗ ವಂಚಿಸಿದವ ಮೀಸೆ ತಿರುವದೆ ಇರುತ್ತಾನೆಯೇ?. ಹಾಗಿದ್ದರೂ ನಿನ್ನನ್ನು ಆ ದೇವರು ನೋಡಿಕೊಳ್ಳಲಿ ಎಂದೋ ಅಥವಾ ಯಾವುದೋ ಧಾರ್ಮಿಕ ಪುಣ್ಯಕ್ಷೇತ್ರದ ಹೆಸರನ್ನೆತ್ತಿ ಆ ದೇವರು ನೋಡಿದ ಹಾಗಿರಲಿ ಎಂದೊಡನೆ ಕೊಡದೆ ವಂಚಿಸಿದಾತನ ದರ್ಪ ಕರಗಿ ಪಡೆದ ಸಾಲವನ್ನು ಮರುಪಾವತಿ ಮಾಡಿದ ಅದೆಷ್ಟೋ ಉದಾಹರಣೆಗಳಿರುವುದು ಸುಳ್ಳಲ್ಲ. ಇದು ದೇವರ ಮೇಲಿನ ಭಯದ ಚಿಕ್ಕ ಸ್ಯಾಂಪಲ್ ಅಷ್ಟೇ.
ನನ್ನ ಮನಸ್ಸಿಗೆ ಆಗಾಗ ಅನಿಸುವುದುಂಟು. ದೇವರ ಮೇಲಿನ ನಂಬಿಕೆ ಇಲ್ಲದೇ ಇರುತ್ತಿದ್ದರೆ ಈ ಜಗತ್ತು ಹೇಗೆ ನಡೆಯುತ್ತಿತ್ತು? ಮಂದಿರ, ಮಸೀದಿ, ಚರ್ಚ್, ಬಸದಿ ಅಥವಾ ಜಗತ್ತಿನ ಇನ್ನಿತರ ಧರ್ಮಗಳ ಶ್ರದ್ಧಾ ಕೇಂದ್ರಗಳು ಇಲ್ಲದಿರುತ್ತಿದ್ದರೆ ಜಗತ್ತು ಈಗ ನಡೆಯುವ ಹಾಗೆ ನಡೆಯುತ್ತಿತ್ತೇ? ಖಂಡಿತಾ ಇಲ್ಲ. ಈ ರೀತಿಯ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇರುವೆಡೆ ಭಕ್ತರು ಸೇರುತ್ತಾರೆ ಎಂಬ ಕಾರಣಕ್ಕಾಗಿಯೇ ಅಂಗಡಿ, ಮುಂಗಟ್ಟುಗಳು ತಲೆ ಎತ್ತುತ್ತವೆ. ಇದರಿಂದಾಗಿ ಅಂಗಡಿಯವರಿಗೆ ವ್ಯಾಪಾರ ಆದಂತಾಗುತ್ತದೆ.
ಇತ್ತೀಚಿನ ಕೆಲ ವರ್ಷಗಳಿಂದ ಕರಾವಳಿಯಲ್ಲಿ ದೈವಗಳ ಮೇಲಿನ ನಂಬಿಕೆ ತುಸು ಹೆಚ್ಚಾದಂತಿದೆ. ಅದೇ ಕಾರಣಕ್ಕಾಗಿ ಅದೆಷ್ಟೋ ಪಾಳು ಬಿದ್ದ ದೈವಸ್ಥಾನಗಳು ಎದ್ದು ನಿಲ್ಲುವಂತಾಗಿವೆ. ಪುನರ್ ಪ್ರತಿಷ್ಠೆಗೊಂಡು ನೇಮೋತ್ಸವೂ ಜರುಗಿದ ಪರಿಣಾಮ ದೂರದಲ್ಲಿದ್ದ ಕುಟುಂಬಸ್ಥರು ಆ ನೆಪದಲ್ಲಾದರೂ ಊರಿಗೆ ಮರಳುವಂತಾಗಿದೆ. ಮುನಿಸಿಕೊಂಡು ಹೆತ್ತವರಿಂದ ದೂರಾದ ಮನೆ ಮಕ್ಕಳೂ ದೈವ ಚಾವಡಿಯಲ್ಲಿ ಒಂದುಗೂಡುವಂತಾಗಿದೆ. ಉದ್ಯೋಗ ಸಿಕ್ಕ ಕೂಡಲೇ ದೂರದಲ್ಲೆಲ್ಲೋ ಗೂಡು ಕಟ್ಟಿಕೊಂಡ ಮಗನ ಸಂಸಾರ ವರ್ಷದಲ್ಲೊಮ್ಮೆಯಾದರೂ ದೈವ ತಂಬಿಲ, ದೈವ ನೇಮದ ಕಾರಣದಿಂದ ಕಣ್ಣೆದುರು ಬಂದು ಹೆತ್ತವರ ಆರೋಗ್ಯ ವಿಚಾರಿಸುವಂತಾಗಿದೆ. ವಿದೇಶದಲ್ಲಿ ದುಡಿದರೆ ಹೆಚ್ಚು ಆದಾಯ ಸಿಗುತ್ತದೆ ಎಂದು ತನ್ನವರನ್ನೆಲ್ಲಾ ಬಿಟ್ಟು ಕಡಲಾಚೆ ಹಾರಿ ಕೆಲಸ ಮಾಡುವ ಮಂದಿಯೂ ದೈವ ನೇಮದ ಸಂದರ್ಭದಲ್ಲಿ ದೈವಸ್ಥಾನದ ಕೊಡಿಯಡಿಯಲ್ಲಿ ನಿಲ್ಲುವಂತಾಗಿದೆ. ಕೊಟ್ಡ ಹೆಣ್ಣು ಕುಲದಿಂದ ಹೊರಗೆ ಎಂಬ ಮಾತಿದ್ದರೂ ಗಂಡನ ಮನೆ ಸೇರಿದ ಮಗಳು ತವರಿನ ದೈವ ನೇಮದ ಸಂದರ್ಭದಲ್ಲಿ ಕಂಕುಳಲ್ಲಿ ಮಗುವನ್ನಿರಿಸಿಕೊಂಡಾದರೂ ದೈವದ ಪ್ರಸಾದ ಪಡೆಯಲು ತವರ ಹಾದಿ ತುಳಿಯುತ್ತಾಳೆ. ‘ನೇಮದ ಸಂದರ್ಭದಲ್ಲಿ ಎಲ್ಲಿದ್ದರೂ ಬರಲೇಬೇಕು.., ಇಲ್ಲದಿದ್ದರೆ ದೈವ ಮುನಿದು ಹಿಡಿದ ಕೆಲಸ ಯಾವುದೂ ಸಾಗುವುದಿಲ್ಲ..’ ಎಂಬ ದೇವರ ಮೇಲಿನ ನಂಬಿಕೆಯೇ ಇದಕ್ಕೆಲ್ಲಾ ಕಾರಣ.
ದೇವರಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ದೈವ, ದೇವರ ಹೆಸರಿನಲ್ಲಿ ಅದೆಷ್ಟೋ ಮುದುಡಿದ ಮನಸ್ಸುಗಳು ಮತ್ತೆ ಅರಳುವಂತಾಗಿದೆ. ಅಜ್ಜ, ಮುತ್ತಜ್ಜನ ಕಾಲದಿಂದ ಅದ್ಯಾವುದೋ ಕಾರಣಕ್ಕಾಗಿ ಮುನಿಸಿಕೊಂಡು ದೂರವಾಗಿದ್ದ ಕುಟುಂಬಗಳು ಮತ್ತೆ ಒಂದುಗೂಡುವಂತಾಗಿದೆ. ಹಿಂದೆಲ್ಲಾ ಗದ್ದೆ ಬೇಸಾಯದ ಸಂದರ್ಭದಲ್ಲಿ ನೆರೆಮನೆಯ ದನಗಳು ಬೆಳೆದು ನಿಂತ ಪೈರಿಗೆ ಬಾಯಿ ಹಾಕಿ ನಾಶಮಾಡಿತೆಂಬ ಕಾರಣಕ್ಕೋ, ಬೆಳೆದ ತರಕಾರಿ ಗಿಡಗಳ ಬುಡವನ್ನು ಆಚೆ ಮನೆಯ ಕೋಳಿಗಳು ಹಾಳು ಮಾಡಿದವೆಂದೋ, ಜಾಗದ ಗಡಿಗುರುತು ದಾಟಿ ಸೊಪ್ಪು ಹೆರೆದಿದ್ದಾರೆ ಎಂಬ ಕಾರಣಕ್ಕೋ ಅಥವಾ ಒಟ್ಟಿಗೆ ಸೇರಿ ಆಟವಾಡುತ್ತಿದ್ದ ಮಕ್ಕಳು ಗಲಾಟೆ ಮಾಡಿಕೊಂಡ ಬಳಿಕ ತಮ್ಮ ಮಕ್ಕಳ ಪರವಾಗಿ ಹಿರಿಯರು ವಾದ ಮಾಡಿದರೆಂಬ ಕಾರಣಕ್ಕೋ ಮುನಿಸಿಕೊಂಡ ಕುಟುಂಬಗಳು ಮಾತುಬಿಟ್ಟ ಪ್ರಸಂಗಗಳು ಅವೆಷ್ಟೋ. ಹಿರಿಯರ ಕಾಲದಲ್ಲಿ ದೂರವಾದ ಕುಟುಂಬಗಳು ಮಕ್ಕಳ ಕಾಲಕ್ಕೂ ಪರಸ್ಪರ ಮಾತನಾಡದೆ ದೂರ ಉಳಿದುಕೊಂಡಿರುತ್ತಿದ್ದವು. ಆದರೆ ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಅದೇನೇ ಕಾರಣಗಳಿದ್ದರೂ ಪರಿಹಾರ ಸೂಚಿಸಿ ಎರಡು ಕುಟುಂಬಗಳ ಮುನಿಸು ಮರೆಯುವಂತೆ ಮಾಡಿದ್ದು ಕೂಡಾ ದೇವರ ಮೇಲಿನ ನಂಬಿಕೆಯಲ್ಲದೆ ಮತ್ತೇನೂ ಅಲ್ಲ.
ಬಂಧು, ಬಳಗವನ್ನು ಬರಸೆಳೆದು ಒಂದುಗೂಡುವಂತೆ ಮಾಡುವ ಸಾಮರ್ಥ್ಯ ದೇವರ ಮೇಲಿನ ನಂಬಿಕೆಗೆ ಮಾತ್ರವಲ್ಲದೆ ಅನಾದಿಕಾಲದಿಂದಲೂ ಆಚರಿಸಿಕೊಂಡು ಬಂದ ರೂಢಿ, ಸಂಪ್ರದಾಯಗಳಿಗೂ ಇವೆ. ತುಳು ತಿಂಗಳ ಆಟಿಯಲ್ಲಿ ಮದುವೆಯಾಗಿ ಹೋದ ಮಗಳು ತವರಿಗೆ ಬಂದು ತಂಗುವ ಸಂಪ್ರದಾಯ ಇದೆ. ಈ ಆಧುನಿಕ ಕಾಲಘಟ್ಟದಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದ್ದು ಆಟಿ ತಿಂಗಳಲ್ಲಿ ಕೆಲದಿನಗಳಾದರೂ ಹೊಸ ಮದುಮಗಳನ್ನು ತವರಿಗೆ ಕಳುಹಿಸಿ ತಂಗುವಂತೆ ಮಾಡುವುದು ರೂಢಿ. ಗದ್ದೆ ಬೇಸಾಯದ ಸಂದರ್ಭದಲ್ಲಿ ಭತ್ತ ಕಟಾವು ಮಾಡಿದ ಬಳಿಕ ಹೊಸ ಅಕ್ಕಿಯನ್ನು ಬೇಯಿಸಿ ಮನೆಮಂದಿಯ ಜೊತೆಗೆ ಕುಟುಂಬಿಕರೆಲ್ಲರೂ ಒಟ್ಟುಗೂಡಿ ಹೊಸಕ್ಕಿ ಊಟ (ಪುದ್ವಾರ್) ಮಾಡುವ ಕ್ರಮವಿತ್ತು. ಗದ್ದೆಯ ಜಾಗದಲ್ಲಿ ವಾಣಿಜ್ಯ ಬೆಳೆಗಳು ಎಂಟ್ರಿ ಕೊಟ್ಟರೂ ಈಗಲೂ ಕೆಲ ತರವಾಡು ಮನೆಗಳಲ್ಲಿ ಹೊಸಕ್ಕಿ ಊಟ ಮಾಡುವ ಸಂಪ್ರದಾಯವಿದೆ. ಈ ರೀತಿಯ ರೂಢಿ, ಸಂಪ್ರದಾಯಗಳಿಗೂ ಚದುರಿದ ಮನೆಮಕ್ಕಳನ್ನು ಬರಸೆಳೆದು ಹತ್ತಿರಕ್ಕೆಳೆಯುವ ಸಾಮರ್ಥ್ಯ ಇರುವುದು ಸುಳ್ಳಲ್ಲ.
ಹೀಗೆ ದೇವರ ಮೇಲಿನ ನಂಬಿಕೆ ಹಾಗೂ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುವ ರೂಢಿ ಸಂಪ್ರದಾಯ, ಸಂಸ್ಕೃತಿಗಳಿಗೆ ಸರ್ವರನ್ನೂ ಒಂದುಗೂಡಿಸುವ ಶಕ್ತಿ, ಸಾಮರ್ಥವಿದೆ. ಕೆಲ ಆಚರಣೆಗಳು ಮೇಲ್ನೋಟಕ್ಕೆ ಮೂಢ ನಂಬಿಕೆಗಳೆನಿಸಿದರೂ ಅವುಗಳ ಆಚರಣೆಯ ಕಾರಣದಿಂದಾದರೂ ಬಂಧು, ಬಳಗ ಒಂದುಗೂಡುವಂತಾಗುತ್ತದೆ. ಸದಾ ಕೆಲಸದೊತ್ತಡದಿಂದ ಬಳಲುವ ಮೈಮನಗಳಿಗೆ ಕೊಂಚವಾದರೂ ರಿಲೀಫ್ ದೊರೆಯುವಂತಾಗುತ್ತದೆ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)














