*ಗಣೇಶ್ ಮಾವಂಜಿ.
ಎಲ್ಲೋ ಹೊರಟ ನನಗೆ ಪರಿಚಿತರೊಬ್ಬರು ಎದುರಾದರು. ನಮಸ್ಕಾರ ವಿನಿಮಯದ ಬಳಿಕ ‘ಮತ್ತೆ ವಿಶೇಷ?’ ಎಂದೆ. ‘ವಿಶೇಷ ಏನಿಲ್ಲ.., ಎಲ್ಲಾ ನಿಮ್ಮದೇ…ನಮ್ಮದೆಂತದ್ದು ಪಾಪದವರದ್ದು?’ ಎಂದು ನಕ್ಕರು. ನಾನೇನು ಕುಬೇರನೋ ಎಂದು ಮನಸ್ಸಿಗನಿಸಿದರೂ ಮಾತನ್ನು ನನ್ನೊಳಗೇ ಬಚ್ಚಿಟ್ಟುಕೊಂಡು ನಾನೂ ನಗುತ್ತಾ ಮತ್ತೇನೋ ಮಾತು ಮುಂದುವರಿಸಿದೆ. ನನ್ನನ್ನು ಬೀಳ್ಕೊಟ್ಟು ಹೊರಡುವ ವೇಳೆ ಕಂಕುಳದಲ್ಲಿ ಇರಿಸಿದ ಪ್ಲಾಸ್ಟಿಕ್ ತೊಟ್ಟೆಯ ಬಾಯನ್ನು ಅಗಲಿಸಿ ಆಮಂತ್ರಣ ಪತ್ರಿಕೆಯೊಂದನ್ನು
ಹೊರತೆಗೆದು ಮಗನ ಮದುವೆ..,ಖಂಡಿತಾ ಬರಬೇಕು ಎಂದರು.
ನನಗೆ ಆಶ್ಚರ್ಯ ಆಯಿತು. ಮಾತಿನ ಆರಂಭದಲ್ಲಿ ವಿಶೇಷ ಏನೂ ಇಲ್ಲ ಎಂದ ಇವರೇ ಈಗ ಮಗನ ಮದುವೆಯ ಕಾಗದ ನೀಡಿ ಬರಲೇ ಬೇಕು ಎನ್ನುತ್ತಿದ್ದಾರಲ್ಲಾ ಎಂದು! ಹಾಗಿದ್ದರೆ ಮಗನ ಮದುವೆ ಇವರ ವಿಶೇಷದ ಪಟ್ಟಿಯಲ್ಲಿ ಬರುತ್ತಿಲ್ಲವೇ? ಮದುವೆಯಾಗಲು ದುರ್ಬೀನು ಇಟ್ಟು ಹುಡುಕಿದರೂ ಹುಡುಗಿ ಸಿಗದ ಈ ಕಾಲದಲ್ಲಿ ಮಗನಿಗೆ ಹುಡುಗಿ ಹುಡುಕಿ ಮದುವೆ ಫಿಕ್ಸ್ ಮಾಡಿದ್ದಾರೆ ಎಂದಾದರೆ ಅದು ವಿಶೇಷವಲ್ಲದೆ ಮತ್ತೇನು? ಹಾಗಿದ್ದರೂ ಮಾತಿನ ನಡುವೆ ‘ವಿಶೇಷ ಏನೂ ಇಲ್ಲ.., ಎಲ್ಲಾ ನಿಮ್ಮದೇ’ ಎನ್ನುವ ಮಾತು ಮಾತಿನ ಮಧ್ಯೆ ನುಸುಳಿ ಹೋಗಿರುತ್ತದೆ.

ಕಾಲೇಜಿಗೋ, ಕಚೇರಿಗೋ ಅಥವಾ ನಿತ್ಯದ ಇನ್ಯಾವುದೋ ಕೆಲಸಕ್ಕೆ ಹೊರಟವರನ್ನು ನೋಡಿ ‘ಹೊರಟದ್ದಾ?’ ಎಂದು ಯಾರಾದರೂ ಪ್ರಶ್ನಿಸುವುದು ಸರ್ವೇಸಾಮಾನ್ಯ. ಪ್ರತಿದಿನ ಹೋಗುವವರನ್ನು ನೋಡಿದಾಗ ಅವರು ಇಂತಲ್ಲಿಗೇ ಹೊರಟದ್ದು ಎಂದು ಕೇಳುವಾತನಿಗೆ ಗೊತ್ತಿದ್ದೇ ಗೊತ್ತಿರ್ತದೆ. ಹಾಗಿದ್ದರೂ ಪರಿಚಿತರನ್ನು ನೋಡಿ ನಗುಮುಖ ಹೊತ್ತು ಹೊರಟದ್ದಾ? ಎಂದು ಕೇಳುವುದು ರೂಢಿ. ಹಾಗಿದ್ದರೂ ಈ ರೂಢಿ ಮಾತುಗಳು ಕೆಲವೊಮ್ಮೆ ತಮಾಷೆಗೂ ಎಡೆಮಾಡಿಕೊಡುತ್ತದೆ.
ಮಲಗಿ ಗೊರಕೆ ಹೊಡೆಯುತ್ತಿರುವವನನ್ನು ಎಬ್ಬಿಸಿ ‘ಮಲಗಿದ್ದಾ?’ ಎಂದು ಪ್ರಶ್ನಿಸುವುದು., ಬೆಳಿಗ್ಗೆ ಚಡ್ಡಿ ಹಾಕಿ ಏದುಸಿರು ಬಿಡುತ್ತಾ
ಓಡುತ್ತಿರುವವರನ್ನು ಕಂಡು ಜಾಗಿಂಗ್ ಗೆ ಹೊರಟದ್ದಾ ಎಂದು ವಿಚಾರಿಸುವುದು, ಊಟ ಮಾಡುತ್ತಿರುವವನ್ನು ನೋಡಿ ‘ಊಟ ಮಾಡುವುದಾ?’ ಎಂದು ಕೇಳುವುದು., ಹೀಗೆಲ್ಲಾ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಒಂದು ವೇಳೆ ಎದುರಿಗೆ ಸಿಕ್ಕಿದಾಗ ಈ ರೀತಿಯ ರೂಢಿಯ ಮಾತುಗಳನ್ನಾಡದೆ ಮುಂದುವರಿದರೆ ‘ಅವರು ನೋಡಿಯೂ ಏನೂ ಮಾತನಾಡಿಸದೆ ಹೋದರಲ್ಲಾ..! ಕಾರಣ ಏನಿರಬಹುದು? ಎಂಬ ಸಣ್ಣ ಅನುಮಾನವೂ ಮನದೊಳಗೆ ನುಸುಳಿ ಬಿಡುತ್ತದೆ.
ಮಾತಿನ ಭರದಲ್ಲಿ ಮಾತುಗಳನ್ನು ಸಮರ್ಥಿಸಿಕೊಳ್ಳಲು ವಿಷಯಗಳ ವೈಭವೀಕರಣ ಮಾಡುವುದೂ ಮತ್ತೊಂದು ತಮಾಷೆಯ ಸಂಗತಿ. ಅದು ಹೇಗಂತಿರಾ? ಉದಾಹರಣೆಗೆ ಈಗ ಮಳೆಗಾಲದಲ್ಲಿ ತೋಟದಲ್ಲಿ ಅಡಿಕೆ ಮರಗಳ ಗೊನೆಗಳಿಂದ ಒಂದೆರಡು ಎಳೆ ಅಡಿಕೆ ಬೀಳುವುದು ಎಲ್ಲಾ ಕಡೆಯಲ್ಲೂ ಇದ್ದದ್ದೇ. ಕೈಗೆ ಬಂದ ಫಸಲು ಬಾಯಿಗೆ ಸಿಗದು ಎಂಬ ಆತಂಕದಲ್ಲಿ ರೈತರು ಹೇಳುವಾಗ ಮಾತ್ರ ‘ತೋಟದಲ್ಲಿ ಎಳೆ ಅಡಿಕೆ ಎಲ್ಲಾ ಉದುರಿ ಹೋದವು. ಇನ್ನು ಮದ್ದು ಬಿಟ್ಟು ಪ್ರಯೋಜನವೇ ಇಲ್ಲ ಎಂದು ಹಲುಬುತ್ತಿರುತ್ತಾರೆ. ಹಾಗಿದ್ದರೂ ಎಷ್ಟೇ ಕಷ್ಟವಾದರೂ ಮದ್ದು ಬಿಡದೆ ಇರುವುದಿಲ್ಲ ಎಂಬುದು ವಾಸ್ತವ. ಇಲ್ಲಿ ಎದುರಾಗುವ ಪ್ರಶ್ನೆ ಯಾವುದೆಂದರೆ ಎಲ್ಲಾ ಎಳೆ ಅಡಿಕೆಗಳು ಉದುರಿ ಹೋದವು ಎಂದಾದರೆ ಮದ್ದು ಬಿಡುವ ಕಾಯಕಕ್ಕೆ ಮುಂದಾಗುವ ಕೆಲಸವೇತಕೆ? ತನ್ನ ತೋಟದಲ್ಲಿ ಎಳೆ ಅಡಿಕೆ ಜಾಸ್ತಿ ಉದುರಿ ಹೋಗುತ್ತಿವೆ ಎಂಬುದನ್ನು ಇದ್ದುದಕ್ಕಿಂತ ಹೆಚ್ಚೇ ವೈಭವೀಕರಿಸಿಕೊಂಡು ಹೇಳುವ ಆಡು ಮಾತು ಇದಾಗಿದೆ.

ಅಡಿಕೆ ಕೊಯ್ಲಿನ ಸಮಯದಲ್ಲೂ ಕೆಲವೊಂದು ವೈಭವೀಕರಣದ ಮಾತುಗಳು ಕೇಳಿಬರುತ್ತವೆ. ತೋಟದಲ್ಲಿ ಈ ಸಲ ಫಸಲು ಹೇಗೆ ಎಂದು ಕೇಳಿದೊಡನೆ ‘ಈ ಬಾರಿ ಏನೂ ಇಲ್ಲ.’ ಎಂಬ ಉತ್ತರ ಸಿದ್ಧವಾಗಿರುತ್ತದೆ. ಆದರೆ ಅಡಿಕೆ ಕೊಯ್ಲಿಗೆ ಕೆಲಸಗಾರರು ಸಿಗುತ್ತಿಲ್ಲ ಎಂಬುದನ್ನು ಹೇಳುವ ಭರದಲ್ಲಿ ರೈತ ‘ತೋಟದಲ್ಲಿ ಹಣ್ಣಡಿಕೆ ಬಿದ್ದದ್ದನ್ನು ಕಾಲಲ್ಲೇ ದೂಡಿ ರಾಶಿ ಹಾಕಬಹುದು. ಅಷ್ಟೊಂದು ಬಿದ್ದಿವೆ’ ಎನ್ನುತ್ತಾನೆ. ಕಾಲಲ್ಲೇ ದೂಡಿ ರಾಶಿ ಹಾಕುವಷ್ಟು ಅಡಿಕೆ ಇದೆ ಎಂದಾದರೆ ಫಸಲು ಕಡಿಮೆ ಆಗುವುದು ಹೇಗೆ? ತಮ್ಮ ಮಾತುಗಳನ್ನು ಸಮರ್ಥಿಸಲು ವಿಷಯಗಳನ್ನು ವೈಭವೀಕರಿಸಿ ಹೇಳುವುದು ಎಂದರೆ ಇದೇ ಆಗಿದೆ.
ಯಾರಾದರೂ ಕಪ್ಪು ಮೈಬಣ್ಣ ಇರುವ ವ್ಯಕ್ತಿಯನ್ನು ಉಲ್ಲೇಖಿಸುವ ವೇಳೆ ‘ಅವನು ಎಂತದ್ದು ಮಾರ್ರೆ.., ಡಾಮರ್ ಡಬ್ಬಿಯ ಹಾಗೆ ಇದ್ದಾನೆ’ ಎಂದು ವ್ಯಂಗ್ಯವಾಗಿ ಹೇಳುವುದು ಅಥವಾ ಮದುವೆ ಮನೆಯಲ್ಲಿ ಗಡದ್ದಾಗಿ ಉಂಡು ಮದುಮಗಳ ಬಗ್ಗೆ ಹೇಳುವಾಗ ‘ಹುಡುಗಿ ಬಿಳಿ ಜಿರಳೆಯ ಹಾಗೆ ಇದ್ದಾಳೆ’ ಎಂದು ಬಣ್ಣಿಸುವುದು ಕೂಡಾ ವಿಷಯದ ವೈಭವೀಕರಣವೇ ಹೊರತು ಬೇರೇನಲ್ಲ. ಇಲ್ಲದಿದ್ದರೆ ವ್ಯಕ್ತಿಯೊಬ್ಬ ಡಾಮರ್ ಡಬ್ಬಿಯಷ್ಟು ಕಪ್ಪಗಿರಲು ಸಾಧ್ಯವೇ? ಅಥವಾ ಹೆಣ್ಣೊಬ್ಬಳ ಮೈಬಣ್ಣದ ಹೋಲಿಕೆ ಬಿಳಿ ಜಿರಳೆಗೆ ಹೇಗೆ ಸಮವಾಗುವುದು?
ಹೆಚ್ಚು ಊಟ ಮಾಡುವವರನ್ನು ಬಕಾಸುರನಿಗೆ ಹೋಲಿಸುವುದು, ಕಡಿಮೆ ಉಣ್ಣುವ ವ್ಯಕ್ತಿಯನ್ನು ಕಿಚಾಯಿಸಿ ಗಾಳಿಗೆ ಬದುಕುವವನು ಎಂದು ಗೇಲಿ ಮಾಡುವುದು, ಅಗತ್ಯಕ್ಕಿಂತ ಹೆಚ್ಚು ಆಭರಣ ಧರಿಸಿದ ಮಹಿಳೆಯನ್ನು ನೋಡಿ ‘ಆಕೆ ಕೆಜಿಗಟ್ಟಲೆ ಬಂಗಾರ ಹಾಕೋತಾಳೆ’ ಎಂದು ಹೇಳುವ ಮಾತುಗಳನ್ನು ಮಸಾಲೆ ಬೆರೆಸಿ ಹೇಳುವುದು ಎನ್ನುತ್ತಾರೆ. ನಿಜವಾಗಿ ಹೇಳಬೇಕೆಂದರೆ ಇಂತಹ ವಿಷಯಗಳಲ್ಲಿ ಅತ್ಯಲ್ಪ ಮಾತ್ರ ನಿಜ ವಿಷಯವಾಗಿದ್ದು ಉಳಿದವುಗಳು ಮಾತುಗಳ ಸಮರ್ಥನೆಗಾಗಿ ಹೇಳಿಬಿಡುವ ವಿಚಾರಗಳಷ್ಟೇನ
ಈ ರೀತಿಯ ವರ್ಣನೆ, ಬಣ್ಣನೆ ಕೇವಲ ನಮ್ಮೂರಿನಲ್ಲಿ ಮಾತ್ರ ಇರುವುದಲ್ಲ. ಇದಕ್ಕೆ ಭಾಷೆಯ ಹಂಗಿಲ್ಲ., ದೇಶದ ಎಲ್ಲೆ ಇಲ್ಲ. ಈ ರೀತಿಯ ಮಾತುಗಳು ಎಲ್ಲಾ ಭಾಷೆಗಳಲ್ಲೂ, ಎಲ್ಲಾ ದೇಶಗಳಲ್ಲೂ ಇದ್ದೇ ಇದೆ. ಆದರೆ ಮಾತಿನ ಧಾಟಿಯಲ್ಲಿ, ಉಲ್ಲೇಖಿಸುವ ವಿಷಯಗಳಲ್ಲಿ ಭಿನ್ನತೆ ಇರಬಹುದಷ್ಟೇ. ಗಂಭೀರವಾದ ವಿಷಯಗಳನ್ನು ಮಾತ್ರ ಮಾತನಾಡುವ ಜನರಾಗಲೀ, ದೇಶವಾಗಲೀ ಇರಲು ಸಾಧ್ಯವೇ ಇಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತ ಹಾಗು ಅಂಕಣಕಾರರು)














