*ಗಣೇಶ್ ಮಾವಂಜಿ.
‘ಅವರಿಗೆ ತುಂಬಾ ಮಾತಾಡ್ಬೇಕು. ಆದ್ರೆ ಇವರು ಹಾಗಲ್ಲ. ಎಷ್ಟು ಬೇಕೋ ಅಷ್ಟೇ. ಒಮ್ಮೊಮ್ಮೆ ಮಾತಾಡಿದಾಗ ಹೂಂಗುಟ್ಟಲೂ ಪುರ್ಸೊತು ಇರದ ಹಾಗೆ ಮಾಡ್ತಾರೆ.ಅವರಲ್ಲಿ ಇನ್ನೊಬ್ರು ಇದ್ದಾರೆ.ಮಾತಾಡ್ಲಿಕ್ಕೆ ತುಂಬಾ ಮಾತಾಡ್ತಾರೆ.ಆದರೆ ಅವರು ಹೇಳಿದ್ದೇ ಆಗ್ಬೇಕು. ನಾವೇನಾದರೂ ಹೇಳಿದರೆ ಅದನ್ನು ಒಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಅದರಲ್ಲಿ ಮಾತಾಡ್ಲಿಕ್ಕೆ ಖುಷಿ ಆಗುವುದು ಮತ್ತೊಬ್ಬರಲ್ಲಿ. ಅವರು ಕಲ್ಲನ್ನೂ ಮಾತಾಡಿಸ್ತಾರೆ.ಅವರ ಜೊತೆ ಮಾತಾಡಿದ್ರೆ ಹೊತ್ತು ಹೋಗೋದೇ ಗೊತ್ತಾಗುವುದಿಲ್ಲ’…..
ಒಡನಾಡುವ ಒಡನಾಡಿಗಳ ಬಗ್ಗೆ ಹರಿದಾಡುವ ಮಾತುಗಳಿವು.ಒಬ್ಬೊಬ್ಬರದು ಒಂದೊಂದು ರೀತಿ.ಮಾತಿಗೆ ಎಷ್ಟೊಂದು
ಅದ್ಭುತ ಶಕ್ತಿ ಇದೆ ಎಂದರೆ ಮಾತು ನಮ್ಮನ್ನು ಮತ್ತೊಬ್ಬರಿಗೆ ಪರಿಚಯಿಸುವುದರೊಂದಿಗೆ ಒಂದೊಳ್ಳೆಯ ಬಾಂಧವ್ಯ ಬೆಸೆಯಲೂ ಸಹಕರಿಸುತ್ತದೆ. ಆದರೆ ಬಾಂಧವ್ಯ ಬೆಸೆಯುವ ಮಾತು ನಾವು ಹೇಗೆ ಮಾತನಾಡುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಗಂಭೀರ ವಿಷಯವಾದರೂ ಮಾತಿನ ನಡುವೆ ಕೊಂಚ ಹಾಸ್ಯ ಬೆರೆತರೆ ಕೇಳಿಸಿಕೊಳ್ಳುವವರ ಕಿವಿ ನೆಟ್ಟಗಾಗುತ್ತದೆ.ಮಾತ್ರವಲ್ಲ, ಹೇಳುವವರ ಮಾತಿಗೆ ಕಿವಿಯಾಗುವ ತವಕವೂ ಹೆಚ್ಚುತ್ತದೆ.
ಕೆಲವು ಮಾತುಗಾರರಿರುತ್ತಾರೆ. ಅವರಿಗೆ ತಮ್ಮ ಕುರಿತಾದ ವಿಷಯಗಳನ್ನು ಹೇಳಿಕೊಳ್ಳುವ ಆತುರ ಇರುತ್ತದೆಯೇ ಹೊರತು ಅದಕ್ಕೆ ಎದುರಿಗಿದ್ದರ ಪ್ರತಿಕ್ರಿಯೆ ಹೇಗಿದೆ ಎಂದು ಅರಿಯುವ ವ್ಯವಧಾನ ಇರುವುದೇ ಇಲ್ಲ. ತನಗೆ ಗೊತ್ತಿರುವ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಕೊರೆಯುವ ಅವರು ಅವರ ಮಾತುಗಳನ್ನು ಕೇಳುಗರು ಮನಸಾರೆ ಕೇಳುತ್ತಿದ್ದಾರೋ ಅಥವಾ ಕಾಟಾಚಾರಕ್ಕಾಗಿ ಕೇಳುವಂತೆ ನಟಿಸುತ್ತಿದ್ದಾರೋ ಎಂದು ಅರಿಯುವ ಗೋಜಿಗೆ ಹೋಗುವುದೇ ಇಲ್ಲ.
ಮತ್ತೆ ಕೆಲವು ಮಾತುಗಾರರಿರುತ್ತಾರೆ. ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವುದಷ್ಟೇ ಅವರ ಉದ್ದೇಶವಾಗಿರುತ್ತದೆ.ಅದು ತಪ್ಪೆಂಬ ಅರಿವು ಹೇಳುವವರಿಗಿದ್ದರೂ ಎದುರಿಗಿದ್ದವರು ಕೇಳಿಸಿಕೊಳ್ಳಲೇಬೇಕೆಂಬ ಅಹಂ ಅವರಲ್ಲಿರುತ್ತದೆ. ಹೀಗಿದ್ದಾಗ ಹೇಳುವವರು, ಕೇಳುವವರ ಮಧ್ಯೆ ಸರಿಯಾದ ಸಂವಹನ ಏರ್ಪಡುವುದೇ ಇಲ್ಲ.ಅಭಿಪ್ರಾಯ ಹೇರಿಕೆಯ ಮಾತುಗಳಲ್ಲಿ ಪ್ರೀತಿಯ ಮಾತುಗಳಿಗಾಗಿ ಭೂತಕನ್ನಡಿ ಇರಿಸಿ ಹುಡುಕಿದರೂ ಅದರ ಸುಳಿವಿರದು.

ಮತ್ತೊಂದು ವರ್ಗದ ಜನರಿರುತ್ತಾರೆ.ಅಂತವರು ಯಾವುದಾದರೂ ಒಂದು ವಿಷಯವನ್ನು ಹೇಳಲು ಹೊರಟರೆಂದರೆ ಅದಕ್ಕೊಂದು ಪೀಠಿಕೆ ಇದ್ದೇ ಇರುತ್ತದೆ. ಯಾವುದಾದರೊಂದು ಘಟನೆಯನ್ನು ವಿವರಿಸುತ್ತಾರೆ ಎಂದಾದರೆ ಆ ವೇಳೆ ಜರುಗಿದ ಪ್ರತಿಯೊಂದು ವಿಷಯವನ್ನೂ ಅವರು ಹೇಳುತ್ತಾರೆ. ಮಧ್ಯದಲ್ಲಿ ನಾಯಿ ಬೊಗಳಿದ್ದನ್ನೂ ತಿಳಿಸುತ್ತಾರೆ., ಇನ್ಯಾರೋ ಕೆಮ್ಮಿದ್ದನ್ನೂ ಪ್ರಸ್ತಾಪಿಸುತ್ತಾರೆ., ಮೊಬೈಲ್ ರಿಂಗಿಣಿಸಿದ್ದೂ ಕೂಡಾ ಅವರ ಮಾತುಗಳಲ್ಲಿ ಬಂದು ಹೋಗುತ್ತದೆ. ಆದರೆ ಅವರು ಹೇಳಬೇಕಾದ ವಿಚಾರ ಎಲ್ಲೋ ಮಾತಿನ ಕೊನೆಯಲ್ಲಿ ಇರುತ್ತದೆಯಷ್ಟೇ.ಊಟ ಆಯ್ತಾ? ಎಂದಾಗ ಮುಂಡಾಸು ಮೂವತ್ತು ಮೋಳ ಎಂದು ಮಾತು ಪ್ರಾರಂಭಿಸುವ ಜನರಿರುತ್ತಾರಲ್ಲಾ….ಅಂತಹ ಮಾತುಗಾರರು ಈ ಸಾಲಿಗೆ ಸೇರುತ್ತಾರೆ.
ಇನ್ನು ಕೆಲವರಿರುತ್ತಾರೆ. ಹೇಳುವ ಪ್ರತಿಯೊಂದು ಮಾತುಗಳನ್ನೂ ಆಸಕ್ತಿಯಿಂದ ಕೇಳುತ್ತಾರೆ.ಆದರೆ ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗುವುದೇ ಇಲ್ಲ. ಉದಾಹರಣೆಗೆ ಪರಿಚಿತರೊಬ್ಬರಿಗೆ ಅಪಘಾತವಾಗಿ ಮಾರಣಾಂತಿಕ ಗಾಯಗಳಾಗಿರುತ್ತವೆ ಎಂದಿಟ್ಟುಕೊಳ್ಳೋಣ. ಆ ವಿಷಯ ಪ್ರಸ್ತಾಪಗೊಂಡರೆ ಅದು ಹೇಗಾಯ್ತು? ಏನಾಯ್ತು? ಎಂದು ಕಾತರದಿಂದ ಪ್ರಶ್ನಿಸುತ್ತಾರೆ ಎಂದುಕೊಂಡರೆ ಅವರಿಂದ ಶೂನ್ಯ ಪ್ರತಿಕ್ರಿಯೆ. ಜೀವದ ಗೆಳೆಯನೊಬ್ಬನಿಗೆ ಸರಕಾರಿ ಉದ್ಯೋಗ ಸಿಕ್ಕಿದೆ ಎಂದಿಟ್ಟುಕೊಳ್ಳೋಣ. ಆ ವಿಷಯವನ್ನು ಹೇಳಿದಾಗಲೂ ಇಂತವರ ಭಾವನೆಗಳಲ್ಲಿ ಏನೂ ವ್ಯತ್ಯಾಸ ಕಂಡುಬರುವುದಿಲ್ಲ. ಇಂತವರ ನಡುವೆ ಮಾತು ಅರ್ಥ ಕಳೆದುಕೊಳ್ಳುತ್ತದೆ.
ಕೆಲವೊಂದು ದುಃಖ, ದುಮ್ಮಾನಗಳ ಭಾರವನ್ನು ಇಳಿಸಲು ಕೇಳುವ ಕಿವಿಯೊಂದು ಇರಲೇಬೇಕಾಗುತ್ತದೆ. ಆದರೆ ಆ ಕಥೆ, ವ್ಯಥೆಗಳನ್ನು ಹಂಚಿಕೊಳ್ಳಲು ಕೇವಲ ಕೇಳುವ ಕಿವಿ ಇದ್ದರೆ ಮಾತ್ರ ಸಾಲದು. ಕೇಳಿಸಿಕೊಳ್ಳುವ ಹೃದಯವೂ ಇರಬೇಕಾಗುತ್ತದೆ. ಅಕ್ಕರೆ ತೋರುವ ಅಮ್ಮ, ಮಮತೆಯಿಂದ ಮಾತನಾಡಿಸುವ ಅಪ್ಪ, ಕಾಳಜಿ ತೋರುವ ಗೆಳೆಯ, ಸದಾ ಆರೋಗ್ಯ ವಿಚಾರಿಸುವ ಜೀವದ ಗೆಳತಿ…..,ಹೀಗೆ ಪ್ರೀತಿಸುವ ಹೃದಯಕ್ಕೆ ಸಂತೋಷದ ವಿಷಯವೇ ಆಗಲಿ, ಸಂಕಷ್ಟದ ಸಂಗತಿಯೇ ಆಗಲಿ.., ಹಂಚಿಕೊಳ್ಳಲು ಮತ್ತೊಂದು ಹೃದಯ ಬೇಕೇ ಬೇಕು. ಹೀಗೆ ಹಂಚಿಕೊಂಡಾಗಲಷ್ಟೇ ಆ ಹೃದಯದ ಭಾರ ಇಳಿದಂತಾಗುತ್ತದೆ. ಆದರೆ ಹೇಳುವ ಮನಸ್ಸಿದ್ದು ಕೇಳುವ ಕಿವಿ ಇಲ್ಲದಿದ್ದರೆ ಮನಸ್ಸು ಚಡಪಡಿಸುತ್ತದೆ. ಕಣ್ಣೀರೊರೆಸುವ ಕೈ ಕಾಣದಾದಾಗ ದುಃಖ ಉಮ್ಮಳಿಸಿ ಬರುತ್ತದೆ. ಭಾರ ಹೊರುವ ಹೆಗಲು ಆಸರೆ ಒದಗಿಸಲು ಒಪ್ಪದಿದ್ದಾಗ ಮಾತುಗಳು ಮೌನವಾಗಿ ಕಣ್ಣೀರ ಕೋಡಿ ಹರಿಯುವಂತಾಗುತ್ತದೆ.

ಇಲ್ಲಿ ಮತ್ತೊಂದು ಸಾಧ್ಯತೆಯೂ ಇಲ್ಲದಿಲ್ಲ. ಕೇಳುವ ಕಿವಿಗಳಿದ್ದಾಗ ಹೇಳುವ ಮನಸ್ಸು ಕೂಡಾ ಕೆಲವೊಮ್ಮೆ ಮೂಕವಾಗುತ್ತದೆ. ಹೇಳಲೋ, ಬೇಡವೋ ಎಂಬ ದ್ವಂದ್ವದಲ್ಲಿ ಮಾತು ಮೌನಕ್ಕೆ ಶರಣಾಗುತ್ತದೆ. ಕೇಳುವ ಕಿವಿಗಳು ಪ್ರೀತಿಸುವ ಇನ್ನೊಂದು ಹೃದಯದ ತೊಳಲಾಟವನ್ನು ಅರಿಯುವ ಪ್ರಯತ್ನವನ್ನು ಮಾಡಬಹುದೇ ಹೊರತು ಬಲವಂತದಿಂದ ಹೇಳಿಸುವಂತಿಲ್ಲ. ಒಂದು ವೇಳೆ ಬಲವಂತ ಮುಂದುವರಿದರೆ ಎರಡು ಹೃದಯಗಳ ನಡುವೆ ಬಿರುಕು ಮೂಡುವ ಅಪಾಯವೂ ಇಲ್ಲದಿಲ್ಲ.
ಮಾತುಗಳು ಸಂಬಂಧ ಬೆಸೆಯುತ್ತವೆ. ಹೃದಯಗಳ ಸಂವೇದನೆ ಮಾತಿನ ಮೂಲಕ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಮೌನವು ಕೂಡಾ ಮಾತು ಸಾಧಿಸುವ ಸಾಧನೆ ಮಾಡಿ ಬಿಡುತ್ತದೆ.
ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು ಕೇಳುಗರಿಗೆ ಕಿರಿಕಿರಿ ಅನಿಸಬಹುದೇ ಹೊರತು ಅದರಿಂದ ಹಾನಿ ಏನೂ ಇರದು. ಆದರೆ ಪರರನ್ನು ನೋಯಿಸವ ಮಾತುಗಳಿಗೆ ಮಾತ್ರ ಮನಸ್ಸನ್ನು ಘಾಸಿಗೊಳಿಸುವ ಸಾಮರ್ಥ್ಯ ಇರುತ್ತದೆ ಮೃದು ಮಾತುಗಳು ಒಲವು ಸ್ಫುರಿಸಿದರೆ ಗಡಸು ಮಾತುಗಳು ಹೃದಯಗಳ ನಡುವೆ ಕಂದಕ ಏರ್ಪಡಲು ಕಾರಣವಾಗುತ್ತವೆ. ಜಗತ್ತಿನ ಒಳಿತು ಪ್ರೀತಿಯ ಮೇಲೆಯೇ ನಿಂತರುವುದರಿಂದ ಹೃದಯ ತುಂಬಾ ಪ್ರೀತಿಯ ಮಾತುಗಳಿಗಷ್ಟೇ ಜಾಗವಿರಲಿ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು)














