ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತಿದೆ. ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 4ಕ್ಕೆ ಕೊನೆಯ ಹಂತದ ಮತದಾನ ಆರಂಭಗೊಂಡಿದೆ. ಇದು ಬುಧವಾರ ಬೆಳಿಗ್ಗೆ 4.30ಕ್ಕೆ ಕೊನೆಗೊಳ್ಳಲಿದೆ. ಬುಧವಾರ 11.30ಕ್ಕೆ ಕೊನೆಯ ಹಂತದ ಮತದಾನ ಪೂರ್ಣಗೊಳ್ಳಲಿದೆ.ಈ ಹಿಂದೆ ನಡೆದಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ನಡೆದ ದಿನ ರಾತ್ರಿ ಅಥವಾ ಮರುದಿನ ಬೆಳಿಗ್ಗೆ ವಿಜೇತ ಅಭ್ಯರ್ಥಿಯ
ಹೆಸರು ಘೋಷಣೆಯಾಗಿತ್ತು. ಆದರೆ ಈ ಬಾರಿ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ನಡೆದಿರುವ ಕಾರಣ, ಮತ ಎಣಿಕೆ ಪ್ರಕ್ರಿಯೆ ತುಸು ವಿಳಂಬವಾಗುವ ಹಾಗೂ ಗೆಲುವಿನ ಅಂತರ ತೀರಾ ಕಡಿಮೆಯಾದಲ್ಲಿ ಮರು ಎಣಿಕೆಯ ಸಾಧ್ಯತೆಯೂ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.2020ರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿಜೇತ ಎಂದು ಘೋಷಿಸಲು ನಾಲ್ಕು ದಿನ ತೆಗೆದುಕೊಳ್ಳಲಾಗಿತ್ತು. ಪೆನ್ಸಿಲ್ವೇನಿಯಾದ ಫಲಿತಾಂಶ ಅಂತಿಮಗೊಂಡ ನಂತರವಷ್ಟೇ ಅಂತಿಮ ಫಲಿತಾಂಶ ಘೋಷಣೆಯಾಗಿತ್ತು.2016ರಲ್ಲಿ ಮತದಾನ ಪೂರ್ಣಗೊಂಡ ನಂತರ ಮಧ್ಯಾಹ್ನ 1.30 ರೊಳಗಾಗಿ (ಭಾರತೀಯ ಕಾಲಮಾನ) ವಿಜೇತ
ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೆಸರು ಘೋಷಣೆಯಾಗಿತ್ತು.
2012ರಲ್ಲಿ ಬರಾಕ್ ಒಬಾಮಾ ಅವರು ಎರಡನೇ ಬಾರಿಗೆ ಅಧ್ಯಕ್ಷರಾದ ಸಂದರ್ಭದಲ್ಲಿ ಚುನಾವಣೆ ನಡೆದ ದಿನ ಮಧ್ಯರಾತ್ರಿ ಘೋಷಣೆಯಾಗಿತ್ತು.
ಅಮೆರಿಕದ ಚುನಾವಣೆಯಲ್ಲಿ ಮತದಾನದ ಅಂತಿಮ ದಿನ ನಡೆಯುವ ಮತಗಳ ಎಣಿಕೆ ಮೊದಲು ನಡೆಯುತ್ತದೆ. ನಂತರ ಆರಂಭದ ದಿನದಲ್ಲಿ ನಡೆದ ಮತಗಳ ಎಣಿಕೆ, ಅಂಚೆ ಮತಗಳು, ಪ್ರಶ್ನಿಸಲಾದ ಮತಗಳು, ಸಾಗರೋತ್ತರ ಹಾಗೂ ಸೇನಾ ಮತಗಳ ಎಣಿಕೆ ನಡೆಯುತ್ತದೆ.ಕ್ಯಾನ್ವಾಸಿಂಗ್ ಎಂದು ಕರೆಯಲಾಗುವ ಮತ ಎಣಿಕೆಯಲ್ಲಿ ಕೆಲವೊಮ್ಮೆ ನೇಮಕಗೊಳ್ಳುವ ಅಥವಾ ಆಯ್ಕೆಯಾಗುವ ಸ್ಥಳೀಯ ಚುನಾವಣಾಧಿಕಾರಿ ಪ್ರತಿಯೊಂದು ಮತಗಳನ್ನು ಪರಿಶೀಲಿಸಿ ಅದನ್ನು ದಾಖಲಿಸುತ್ತಾರೆ.