ಮುಕ್ಕೂರು: ಕಾನಾವಿನ ಮದಕ ಕರ್ನಾಟಕದ ಒಂದು ಪಠ್ಯಪುಸ್ತಕದಲ್ಲಿ ಸೇರಲು ಬೇಕಾದ ಎಲ್ಲ ಅರ್ಹತೆಯನ್ನು ಹೊಂದಿದೆ ಎಂದು ಜಲತಜ್ಞ ಶ್ರೀಪಡ್ರೆ ಹೇಳಿದರು.ಕಾನಾವು ನಿವಾಸದಲ್ಲಿ ಮೇ 6 ರಂದು ಕಾನಾವು ಗೋಪಾಲಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ಅಕ್ಷರ ದೀಪವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮೂವತ್ತೈದು ಎಕರೆ ಅಡಿಕೆ ತೋಟಕ್ಕೆ ಬಿಡುನೀರು ಕೊಡುವ ವ್ಯವಸ್ಥೆ ಕಾನಾವಿನಲ್ಲಿ ಹೊರತುಪಡಿಸಿ ಬಹುಶಃ ದಕ್ಷಿಣ ಕನ್ನಡದಲ್ಲಿ ಬೇರೆಲ್ಲೂ ಸಿಗದು. ಹಾಗಾಗಿ
ಈ ಮದಕ ಬಗ್ಗೆ ಇನ್ನಷ್ಟು ದಾಖಲೀಕರಣ ಮಾಡುವ ಅಗತ್ಯ ಇದೆ ಎಂದರು.
ಈಗಾಗಲೇ ತೋಡಿದ ಕೊಳವೆಬಾವಿಗಳ ಸಂಖ್ಯೆಗೆ ಲೆಕ್ಕವಿಲ್ಲ. ನಾವು ಇನ್ನಷ್ಟು ಕೊಳವೆಬಾವಿಯನ್ನು ಕೊರೆದು ನಮ್ಮ ಮುಂದಿನ ಪೀಳಿಗೆಗೆ ಇರುವ ನೀರನ್ನು ಬಳಸಿಕೊಂಡು ಮತ್ತೆ ಮುಖಬಾಡಿಸಿಕೊಳ್ಳುವ ಬದಲು ನಮ್ಮಲ್ಲಿ ಇರುವ ಪಾರಂಪರಿಕ ಜಲಸಂರಕ್ಷಣೆಯ ಆಯ್ಕೆಗಳನ್ನು ಬಳಸಿಕೊಳ್ಳೋಣ. 3600 ಮಿ.ಮೀ.ನಷ್ಟು ಮಳೆ ಬೀಳುವ ದಕ್ಷಿಣ ಕನ್ನಡದಲ್ಲಿ ಕೊಳವೆಬಾವಿ ತೆಗೆದೇ ನೀರು ಬಳಸಿಕೊಳ್ಳಬೇಕು ಎಂದಾದರೆ, ಇಲ್ಲಿನ ಬಾವಿಗಳು ನೀರಿಲ್ಲದೆ ಬರಡಾದರೆ ಈ ದೇಶದಲ್ಲಿ ಎಲ್ಲೂ ನೀರು ಇರಲು ಸಾಧ್ಯವಿಲ್ಲ ಎಂದ ಅವರು, ಮಳೆ ನೀರು ಸಂರಕ್ಷಿಸುವ, ಇಂಗಿಸುವ ನಿಟ್ಟಿನಲ್ಲಿ ನಾವು ಹೆಚ್ಚು ಆದ್ಯತೆ ನೀಡಬೇಕು ಎಂದು ಶ್ರೀಪಡ್ರೆ ಅಭಿಪ್ರಾಯಪಟ್ಟರು.
ಸಾವಿರಾರು ಇಂಗುಗುಂಡಿಗಳು ಮಾಡುವ ಕೆಲಸವನ್ನು ಒಂದು ಮದಕ ಮಾಡಬಹುದು. ಇಂತಹ ಮದಕಗಳ ಅದ್ಭುತ ಸಂಪತ್ತು ಕಾಸರಗೋಡು, ದ.ಕ.ಉಡುಪಿಯಲ್ಲಿ ಹೇರಳವಾಗಿ ಇವೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಇದನ್ನು ಅರ್ಥಮಾಡಿಕೊಂಡಿಲ್ಲ ಎಂದ ಅವರು ಮದಕದಲ್ಲಿ ಜಲ, ಒರತೆ ಇರಲೆಬೇಕಿಲ್ಲ. ಅದು ಮಳೆಗಾಲದ ನೀರನ್ನು ಒಂದೆಡೆ ನಿಲ್ಲಿಸಿ ಸುತ್ತಲಿನ ಪ್ರದೇಶದ ಜಲಮಟ್ಟವನ್ನು ಏರಿಸಿ ಊರಿಡೀ ನೆಮ್ಮದಿ ನೀಡುವಂತಹದು ಎಂದರು.
ನಾವು ನೀರಿಗಾಗಿ ಮಾಡುವ ಕೆಲಸ ಜಲಮಟ್ಟವನ್ನು ಕಸಿದು ಊರಿಗೆ ತೊಂದರೆ ಉಂಟು ಮಾಡುವಂತಹದಾ ಅಥವಾ ಜಲಮಟ್ಟವನ್ನು ಏರಿಸಿಕೊಂಡು ಸುತ್ತಲೂ ಪ್ರಯೋಜನ ಆಗುವಂತಹದಾ ಎಂದು ಯೋಚನೆ ಮಾಡಬೇಕು. ಏಕೆಂದರೆ ನೀರು ಇಡೀ ಊರನ್ನು ಒಗ್ಗೂಡಿಸುವ ಅಂಟು. ನೀರ ನೆಮ್ಮದಿ ಇದ್ದರೆ ಮಾತ್ರ ಆ ಕುಟುಂಬದಲ್ಲಿ ನೆಮ್ಮದಿ ಇರಲು ಸಾಧ್ಯ ಎಂದು ಶ್ರೀಪಡ್ರೆ ವಿಶ್ಲೇಷಿಸಿದರು.
ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ಆಕೃತಿ ಪ್ರಿಂಟರ್ಸ್ನ ನಾಗೇಶ ಕಲ್ಲೂರ ಮಾತನಾಡಿದರು.
ಕುಲಪುರೋಹಿತ ಕಿಳಿಂಗಾರು ಕುಮಾರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ, ಸಾಹಿತಿ ಡಾ. ಮಹೇಶ್ವರಿ ಉಳ್ಳೋಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಂಕರಿ ಗೋಪಾಲಕೃಷ್ಣ ಭಟ್ ಕಾನಾವು, ಡಾ.ವಿಶ್ವನಾಥ ಭಟ್ ಕಾನಾವು ಉಪಸ್ಥಿತರಿದ್ದರು. ಸಾರ್ವಜನಿಕರ ಪರವಾಗಿ ಗಣೇಶ ಶೆಟ್ಟಿ ಕುಂಜಾಡಿ ಅನಿಸಿಕೆ ವ್ಯಕ್ತಪಡಿಸಿದರು. ಗೋಪಾಲಕೃಷ್ಣ ಭಟ್ ಮನವಳಿಕೆ ಕವನದ ಮೂಲಕ ಅಕ್ಷರ ನಮನ ಸಲ್ಲಿಸಿದರು.
ಡಾ.ನರಸಿಂಹ ಶರ್ಮಾ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ವಿದ್ಯಾಶಾರದ ವಂದಿಸಿದರು. ಡಾ.ಶ್ರೀಕೃಷ್ಣ ಬಿ.ಎನ್ ಹಾಗೂ ಡಾ.ವಿಜಯ ಸರಸ್ವತಿ ಬಿ ನಿರೂಪಿಸಿದರು. ಸೌಮ್ಯಲಕ್ಷ್ಮಿ ಕಾನಾವು ಮತ್ತು ಮನೆಯವರು ಸಹಕರಿಸಿದರು.