ಮಂಗಳೂರು: ಅಡಿಕೆ ಬೆಳೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದಾಗಿ ಕೃಷಿ ನಾಶವಾಗಿ ತೊಂದರೆಗೊಳಗಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನೆಡೆದ ಸಭೆಯಲ್ಲಿ ಮಾತನಾಡಿದ
ಅವರು ಅಡಿಕೆ ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಕೃಷಿ ನಾಶವಾಗಿ ಹಲವು ಮಂದಿ ಕೃಷಿಕರು ನಷ್ಟ ಅನುಭವಿಸಿದ್ದಾರೆ. ಆದರೆ ಅವರಿಗೆ ಯಾವುದೇ ಸೂಕ್ತ ಪರಿಹಾರ ದೊರಕಿಲ್ಲ. ಆದುದರಿಂದ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯುತ್ ಸ್ಪರ್ಶದಿಂದ ಬಲಿಯಾದ ಯುವತಿಯ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ ಹೆಚ್ಚಿನ ಪರಿಹಾರದ ನೆರವು ನೀಡಬೇಕು ಮತ್ತು ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಸದರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ತನಿಖೆ ನೆಡೆಸಿ ಹತ್ತು ದಿನಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.