ಸಂಪಾಜೆ: ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹೋಪಾತ್ರ ಸಂಪಾಜೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದರು. ಮಳೆಹಾನಿ ಸಂಭವಿಸಿರುವುದು, ಭೂಕುಸಿತ ಸಾಧ್ಯತೆ, ರಸ್ತೆ, ಸೇತುವೆ ಹಾನಿಗಳನ್ನು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೂನಡ್ಕ ಪೇರಡ್ಕ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ದರ್ಕಾಸ್ ಮುಳುಗು ಸೇತುವೆ ಮಳೆಗಾಲದಲ್ಲಿ ಪಯಸ್ವಿನಿ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಆಗಾಗ ಮುಳುಗಡೆಯಗುತ್ತಿದೆ. ಈ ರಸ್ತೆಯಲ್ಲಿ
ನೂರಾರು ಶಾಲಾ ವಿದ್ಯಾರ್ಥಿಗಳು,ಸಾರ್ವಜನಿಕರು ನಿತ್ಯ ಸಂಚಾರ ಮಾಡುತ್ತಿದ್ದು ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ.ಮಂದಿರ ಮಸೀದಿ ಶಾಲಾ ವಿದ್ಯಾರ್ಥಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಗಾಲದಲ್ಲಿ ಪದೇ ಪದೇ ಮುಳುಗಡೆಯಗುತ್ತಿದೆ. ಈ ಬಗ್ಗೆ ಹೊಸ ಸೇತುವೆ ನಿರ್ಮಾಣ ಹಾಗೂ ಬದಲಿ ರಸ್ತೆಯಲ್ಲಿ ಸಂಚಾರ ಮಾಡಲು ಸೂಕ್ತ
ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪ್ರಾಕೃತಿಕ ವಿಕೋಪದಿಂದ ಹಾಳಾದ ಗ್ರಾಮದ ರಸ್ತೆಗಳಿಗೆ ಅನುದಾನ ದೊರಕಿಸಿಕೊಡಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅವರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದರು. ಸಹಾಯಕ ಕಮಿಷನರ್ ಅವರು ಸ್ಥಳ ಪರಿಶೀಲನೆ ನಡೆಸಿ ಸರಕಾರದ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಸ್ಥಳದಲ್ಲಿ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಯಿತು. ಭೂಕುಸಿತ ಪ್ರದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಗ್ರಾ.ಪಂ ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ, ಭೂ ಗಣಿ ಇಲಾಖೆಯ ಅಧಿಕಾರಿ ವಸುದಾ, ಸಹಾಯಕ ಕಮಿಷನರ್ ಆಪ್ತ ಕಾರ್ಯದರ್ಶಿ ನಿತೀನ್. ಕಂದಾಯ ಅಧಿಕಾರಿ ಅವಿನ್ ರಂಗತ್ಮಲೆ,ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು