ಲಂಡನ್: ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಅಲ್ಪ ಮುನ್ನಡೆ ಗಳಿಸಿದೆ.ಭಾರತದ 224 ರನ್ಗಳಿಗೆ ಉತ್ತರ ನೀಡಿದ ಆಂಗ್ಲರ ಪಡೆ 247 ರನ್ಗೆ ಆಲ್ ಔಟ್ ಆಗಿದೆ. ಆ ಮೂಲಕ ಮೊದಲ ಇನಿಂಗ್ಸ್ನಲ್ಲಿ
23 ರನ್ಗಳ ಮುನ್ನಡೆ ಗಳಿಸಿದೆ. ಇತ್ತೀಚಿನ ವರದಿ ಬಂದಾಗ ಭಾರತ ಎರಡನೇ ಇನ್ನೀಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.
ಇಂಗ್ಲೆಂಡ್ಗೆ ಓಪನರ್ಗಳಾದ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಬಿರುಸಿನ ಆರಂಭವೊದಗಿಸಿದರು.
ಕ್ರಾಲಿ ಹಾಗೂ ಡಕೆಟ್ ಮೊದಲ ವಿಕೆಟ್ಗೆ 12.5 ಓವರ್ಗಳಲ್ಲಿ 92 ರನ್ಗಳ ಜೊತೆಯಾಟ ಕಟ್ಟಿದರು. ಡಕೆಟ್ 38 ಎಸೆತಗಳಲ್ಲಿ 43 ರನ್ ಗಳಿಸಿ (5 ಬೌಂಡರಿ, 2 ಸಿಕ್ಸರ್) ಔಟ್ ಆದರು.14.4 ಓವರ್ಗಳಲ್ಲೇ ಇಂಗ್ಲೆಂಡ್ ತಂಡದ ಮೊತ್ತ 100ರ ಗಡಿ ದಾಟಿತು. ಜಾಕ್ ಕ್ರಾಲಿ 64 ರನ್ ಗಳಿಸಿ ನಿರ್ಗಮಿಸಿದರು.
ಈ ನಡುವೆ ಆಂಗ್ಲರ ಪಡೆಗೆ ತಿರುಗೇಟು ನೀಡುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾದರು. ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ನಿಖರ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು. ಪ್ರಸಿದ್ಧ ಹಾಗೂ ಸಿರಾಜ್ ತಲಾ 4 ವಿಕೆಟ್ಗಳನ್ನು ಗಳಿಸಿದರು.ನಾಯಕ ಓಲಿ ಪೋಪ್ 22, ಜೋ ರೂಟ್ 29, ಜೇಕಬ್ ಬೆಥೆಲ್ 6, ಜೇಮಿ ಸ್ಮಿತ್ 8, ಜೇಮಿ ಓವರ್ಟನ್ ಶೂನ್ಯ ಹಾಗೂ ಗಸ್ ಅಟ್ಕಿನ್ಸನ್ 11 ರನ್ ಗಳಿಸಿ ಔಟ್ ಆದರು. ಹ್ಯಾರಿ ಬ್ರೂಕ್ 53 ರನ್ ಗಳಿಸಿದರು.ಈ ಮೊದಲು ಮೊದಲ ಇನಿಂಗ್ಸ್ನಲ್ಲಿ ಭಾರತ ಕೇವಲ 224 ರನ್ಗಳಿಗೆ ಆಲೌಟ್ ಆಗಿತ್ತು.
ಮೊದಲ ದಿನದಂತ್ಯಕ್ಕೆ ಭಾರತ ಆರು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತ್ತು. ಇಂದು ದಿನದಾಟದ ಆರಂಭದಲ್ಲೇ ಭಾರತ ದಿಢೀರ್ ಕುಸಿತ ಕಂಡಿತು.ನಿನ್ನೆಯ ಮೊತ್ತಕ್ಕೆ 20 ರನ್ ಪೇರಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಕರುಣ್ ನಾಯರ್ 57 ಹಾಗೂ ವಾಷಿಂಗ್ಟನ್ ಸುಂದರ್ 26 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.ಇನ್ನುಳಿದಂತೆ ಮೊಹಮ್ಮದ್ ಸಿರಾಜ್ (0) ಹಾಗೂ ಪ್ರಸಿದ್ಧ ಕೃಷ್ಣ (0) ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ 33 ರನ್ ತೆತ್ತು ಐದು ವಿಕೆಟ್ ಗಳಿಸಿದರು. ಜೋಶ್ ಟಂಗ್ ಮೂರು ಹಾಗೂ ಕ್ರಿಸ್ ವೋಕ್ಸ್ ಒಂದು ವಿಕೆಟ್ ಗಳಿಸಿದರು.














