ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಮೊದಲ ದಿನದ ಆಟಕ್ಕೆ ಮಳೆ ಅಡಚಣೆಯಾಗಿದೆ.ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಮಳೆಯಿಂದಾಗಿ ದಿನದ ಬಹುತೇಕ ಆಟ ಸ್ಧಗಿತಗೊಂಡಿತು.ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ
13.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ (19) ಮತ್ತು ನೇಥನ್ ಮೆಕ್ಸ್ವೀನಿ (4) ಕ್ರೀಸಿನಲ್ಲಿದ್ದಾರೆ.ದಿನದಾಟದ ಮೊದಲ ಅವಧಿಯಲ್ಲೇ ಸುರಿದ ಸತತ ಮಳೆಯಿಂದಾಗಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಎರಡನೇ ಅವಧಿಯಲ್ಲೂ ಪಂದ್ಯ ನಡೆಯಲಿಲ್ಲ. ಅಂತಿಮವಾಗಿ ಟೀ ವಿರಾಮದ ಬಳಿಕ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರಿಗಾಗಿ ಹರ್ಷೀತ್ ರಾಣಾ ಮತ್ತು ರವಿಚಂದ್ರನ್ ಅಶ್ವಿನ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡಕ್ಕೆ ಜೋಶ್ ಹ್ಯಾಜಲ್ವುಡ್ ಸೇರ್ಪಡೆಯಾಗಿದ್ದು, ಸ್ಕಾಟ್ ಬೋಲ್ಯಾಂಡ್ ಅವಕಾಶ ವಂಚಿತರಾಗಿದ್ದಾರೆ.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು 1-1ರಲ್ಲಿ ಸಮಬಲಗೊಂಡಿದೆ. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 295 ರನ್ ಅಂತರದ ಜಯ ಗಳಿಸಿದ್ದರೆ ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.