ಬ್ರಿಸ್ಬೇನ್: ಕೆ.ಎಲ್. ರಾಹುಲ್ (84), ರವೀಂದ್ರ ಜಡೇಜ (77) ಮತ್ತು ಕೊನೆಯಲ್ಲಿ ಆಕಾಶ್ ದೀಪ್ (27) ದಿಟ್ಟ ಹೋರಾಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ.ಸತತವಾಗಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಯಾದರೂ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 74.5 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ.ಫಾಲೋ ಆನ್ ತಪ್ಪಿಸಿಕೊಳ್ಳಲು ಭಾರತಕ್ಕೆ 245 ರನ್ಗಳ ಅವಶ್ಯಕತೆಯಿತ್ತು. ಆದರೆ
ಮುರಿಯದ 10ನೇ ವಿಕೆಟ್ಗೆ 39 ರನ್ಗಳ ಜೊತೆಯಾಟ ಕಟ್ಟಿದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬೂಮ್ರಾ, ಎದುರಾಳಿ ತಂಡ ಫಾಲೋ ಆನ್ ಹೇರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ಮಂದ ಬೆಳಕಿನಿಂದಾಗಿ ದಿನದಾಟ ಅಂತ್ಯಗೊಳಿಸಿದಾಗ ಆಕಾಶ್ ದೀಪ್ 27 (2 ಬೌಂಡರಿ, 1 ಸಿಕ್ಸರ್) ಮತ್ತು ಜಸ್ಪ್ರೀತ್ ಬೂಮ್ರಾ 10* ರನ್ (1 ಬೌಂಡರಿ) ಗಳಿಸಿ ಕ್ರೀಸಿನಲ್ಲಿದ್ದಾರೆ. ಪಂದ್ಯದಲ್ಲಿ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಭಾರತ ಈಗಲೂ 193 ರನ್ಗಳ ಹಿನ್ನೆಡೆಯಲ್ಲಿದೆ. ಅಲ್ಲದೆ ಕೊನೆಯ ದಿನದಾಟದಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಕನಿಷ್ಠ ಪಂದ್ಯ ಡ್ರಾಗೊಳಿಸಲು ಪ್ರಯತ್ನಿಸಬೇಕಿದೆ.
ಮೂರನೇ ದಿನದಂತೆ ನಾಲ್ಕನೇ ದಿನದಾಟದಲ್ಲೂ ಮಳೆ ನಿರಂತರವಾಗಿ ಅಡ್ಡಿಪಡಿಸಿತು. ಈ ನಡುವೆ ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜ ದಿಟ್ಟ ಹೋರಾಟ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಾಲ್ಕು ವಿಕೆಟ್ ನಷ್ಟಕ್ಕೆ 51 ರನ್ ಎಂಬ ಸ್ಕೋರ್ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ನಷ್ಟವಾಯಿತು. ಮಗದೊಮ್ಮೆ ವೈಫಲ್ಯ ಅನುಭವಿಸಿದ ರೋಹಿತ್ ಕೇವಲ 10 ರನ್ ಗಳಿಸಿ ಔಟ್ ಆದರು.ಈ ನಡುವೆ ಜಡೇಜ ಅವರೊಂದಿಗೆ ಜತೆಗೂಡಿದ ರಾಹುಲ್ ಆರನೇ ವಿಕೆಟ್ಗೆ 67 ರನ್ಗಳ ಜೊತೆಯಾಟದಲ್ಲಿ ರಾಹುಲ್ 81 ರನ್ ಗಳಿಸಿದರು. 139 ಎಸೆತಗಳ ಕಲಾತ್ಮಕ ಇನಿಂಗ್ಸ್ನಲ್ಲಿ ಎಂಟು ಬೌಂಡರಿಗಳು ಸೇರಿದ್ದವು.
ಮತ್ತೊಂದೆಡೆ ರವೀಂದ್ರ ಜಡೇಜ ಕೂಡ ಅರ್ಧಶತಕ ಗಳಿಸಿ ಗಮನ ಸೆಳೆದರು. ಈ ನಡುವೆ ಉತ್ತಮವಾಗಿ ಮೂಡಿ ಬಂದಿದ್ದ ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಜಡೇಜ 123 ಎಸೆತಗಳಲ್ಲಿ 77 ರನ್ ಗಳಿಸಿದರು.ಉನ್ನುಳಿದಂತೆ ಮೊಹಮ್ಮದ್ ಸಿರಾಜ್ 1 ರನ್ ಗಳಿಸಿ ಔಟ್ ಆದರು.
ಆಸ್ಟ್ರೇಲಿಯಾದ ಪರ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕು ಮತ್ತು ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಗಳಿಸಿದರು.
ಮೂರನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ (4), ಶುಭಮನ್ ಗಿಲ್ (1), ವಿರಾಟ್ ಕೊಹ್ಲಿ (3) ಹಾಗೂ ರಿಷಭ್ ಪಂತ್ (9) ವೈಫಲ್ಯ ಅನುಭವಿಸಿದ್ದರು.ಟ್ರಾವಿಸ್ ಹೆಡ್ (152) ಹಾಗೂ ಸ್ಟೀವ್ ಸ್ಮಿತ್ (101) ಅಮೋಘ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 445 ರನ್ ಪೇರಿಸಿತ್ತು. ಭಾರತದ ಪರ ಜಸ್ಪ್ರೀತ್ ಬೂಮ್ರಾ ಆರು ವಿಕೆಟ್ ಗಳಿಸಿದ್ದರು.