ಎಜ್ಬಾಸ್ಟನ್: ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ ಅಮೋಘ ಶತಕದ ಬೆಂಬಲದೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಪ್ರವಾಸಿ ಭಾರತ ತಂಡಕ್ಕೆ ತಿರುಗೇಟು ನೀಡಿದೆ.ಬ್ರೂಕ್ ಹಾಗೂ ಸ್ಮಿತ್ ಆರನೇ ವಿಕೆಟ್ಗೆ ತ್ರಿಶತಕದ ಜೊತೆಯಾಟದಲ್ಲಿ ಭಾಗಿಯಾದರು. ಮೊದಲ ಇನ್ನೀಂಗ್ಸ್ನಲ್ಲಿ 407 ರನ್ಗಳಿಗೆ ಆಲ್ ಔಟ್ ಆಗಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ
ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಮೊದಲ ಇನ್ನೀಂಗ್ಸ್ನಲ್ಲಿ 180 ರನ್ ಮುನ್ನಡೆ ಪಡೆದ ಭಾರತ ಒಟ್ಟಾರೆ 244 ರನ್ ಮುನ್ನಡೆಯಲ್ಲಿದೆ.
ಎರಡನೇ ದಿನದಂತ್ಯಕ್ಕೆ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. ಇಂದಿನ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಗಳಿಸುವ ಮೂಲಕ ಆತಿಥೇಯರಿಗೆ ಬಲವಾದ ಹೊಡೆತ ನೀಡಿದರು.
ಜೋ ರೂಟ್ 22 ರನ್ ಗಳಿಸಿ ಔಟ್ ಆದರು. ಇದಾದ ಬೆನ್ನಲ್ಲೇ ನಾಯಕ ಬೆನ್ ಸ್ಟೋಕ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್ಗೆ ಮರಳಿದರು. ಪರಿಣಾಮ ಇಂಗ್ಲೆಂಡ್ 21.4 ಓವರ್ಗಳಲ್ಲಿ 84 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಗೂಡಿದ ಹ್ಯಾರಿ ಬ್ರೂಕ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ತಂಡವನ್ನು ಮುನ್ನಡೆಸಿದರು. ಅವರಿಬ್ಬರು ಆಕ್ರಮಣಕಾರಿಯಾಗಿ ಆಡುವ ಮೂಲಕ ಭಾರತೀಯ ಬೌಲರ್ಗಳನ್ನು ಕಾಡಿದರು.ಈ ಪೈಕಿ ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿದ ಸ್ಮಿತ್, ಕೇವಲ 80 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.
ಅತ್ತ ಹ್ಯಾರಿ ಬ್ರೂಕ್ ಸಹ ಶತಕ ಗಳಿಸಿ ಅಬ್ಬರಿಸಿದ್ದಾರೆ. ಅವರಿಬ್ಬರ ನಡುವೆ 303 ರನ್ಗಳ ಜೊತೆಯಾಟ ದಾಖಲಾಯಿತು. ಕೊನೆಗೂ 158 ರನ್ ಗಳಿಸಿದ ಬ್ರೂಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಆಕಾಶ್ ದೀಪ್ ಯಶಸ್ವಿಯಾಗಿದ್ದಾರೆ. ಅತ್ತ ಜೇಮಿ ಸ್ಮಿತ್ 184 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 6 ಆಕಾಶ್ ದೀಪ್ ನಾಲ್ಕು ಹಾಗೂ ವಿಕೆಟ್ ಪಡೆದರು.
ಭಾರತದ ಎರಡನೇ ಇನ್ನೀಂಗ್ಸ್ನಲ್ಲಿ 28 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಔಟ್ ಆದರು. 28 ರನ್ ಗಳಿಸಿದ ಕೆ.ಎಲ್.ರಾಹುಲ್ ಹಾಗೂ 7 ರನ್ ಗಳಿಸಿದ ಕರುಣ್ ನಾಯರ್ ಕ್ರೀಸಿನಲ್ಲಿದ್ದಾರೆ.