ಚೆನ್ನೈ: ತಿಲಕ್ ವರ್ಮಾ ಆಕರ್ಚಕ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿತು.ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಜೋಸ್ ಬಟ್ಲರ್ ( 45; 30ಎ, 4X2, 6X3) ಅವರ ಆಟದಿಂದಾಗಿ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 165 ರನ್ ಗಳಿಸಿತು. ಏಕಾಂಗಿ ಹೋರಾಟ
ನಡೆಸಿದ ವರ್ಮಾ (ಔಟಾಗದೇ 72; 55ಎಸೆತ, 4X4, 6X5) ಅವರ ಬಲದಿಂದ ತಂಡವು 19.2 ಓವರ್ಗಳಲ್ಲಿ 8 ವಿಕೆಟ್ಗಳಿಗೆ 166 ರನ್ ಗಳಿಸಿ ಜಯಿಸಿತು.ಗುರಿ ಬೆನ್ನಟ್ಟಿದ ಆತಿಥೇಯ ಬಳಗದ ಹಾದಿಯನ್ನು ಇಂಗ್ಲೆಂಡ್ ಬೌಲರ್ಗಳು ಕಠಿಣಗೊಳಿಸಿದರು. ಇನಿಂಗ್ಸ್ನ ಎರಡನೇ ಓವರ್ನಲ್ಲಿಯೇ ಅಭಿಷೇಕ್ ಶರ್ಮಾ ಅವರನ್ನು ಮಾರ್ಕ್ ವುಡ್ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರದ ಓವರ್ನಲ್ಲಿ ಜೋಫ್ರಾ ಆರ್ಚರ್ ಅವರು ಸಂಜು ಸ್ಯಾಮ್ಸನ್ ವಿಕೆಟ್ ಗಳಿಸಿದರು. ಬಲಗೈ ವೇಗಿ ಬ್ರೈಡನ್ 29ಕ್ಕೆ3) ಅವರು ಮಧ್ಯಮ ಕ್ರಮಾಂಕ್ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಸೂರ್ಯಕುಮಾರ್ ಯಾದವ್, ಧ್ರುವ ಜುರೇಲ್ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆದರೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ವರ್ಮಾ ಅವರು ಸಮಚಿತ್ತದಿಂದ ಆಡಿದರು. ಅಗತ್ಯವಿದ್ದಾಗಲಷ್ಟೇ ಬೀಸಾಟವಾಡಿದರು. ಒಂದು ಬದಿಯಲ್ಲಿ ವಿಕೆಟ್ ಉರುಳಿದರೂ ಎದೆಗುಂದದ ವರ್ಮಾ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.
ವರ್ಮಾ ಅವರು ಇಂಗ್ಲೆಂಡ್ ಬೌಲರ್ಗಳ ಪಾಲಿಗೆ ಕಗ್ಗಂಟಾದರು. ತಂಡವು 17 ಓವರ್ಗಳಲ್ಲಿ 146 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಾಗ ಆತಿಥೇಯ ಪಾಳೆಯದಲ್ಲಿ ಆತಂಕ ಕವಿದಿತ್ತು. ಅದನ್ನು ನಿವಾರಿಸಲು ವರ್ಮಾ ಅವರೊಂದಿಗೆ ರವಿ ಬಿಷ್ಣೋಯಿ (ಅಜೇಯ 9) ಕೂಡ ಕೈಜೋಡಿಸಿದರು.