ಸುಳ್ಯ:ಮಕ್ಕಳು ಕ್ರಿಯಾತ್ಮಕವಾಗಿ ಮತ್ತು ಸ್ವತಂತ್ರವಾಗಿ ಯೋಚಿಸುವಂತಾಗಬೇಕು. ಅದಕ್ಕೆ ಮಕ್ಕಳನ್ನು ಭಯ ಮುಕ್ತ ವಾತಾವರಣದಲ್ಲಿ ಬೆಳೆಸಬೇಕು ಎಂದು ಸಂಸದ ಕ್ಯಾಪ್ಡನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ ಹಾಗೂ ಸುಂದರ ಭಾರತ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ ಯುವಜನರಿಗೆ ಉದ್ಯೋಗ- ಉದ್ದಿಮೆಯ ಅವಕಾಶ- ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡುವ “ಯುವ್ವಿಕಾಸ ” ಎಂಬ ಯುವ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ
ಅವರು ಮಾತನಾಡಿದರು.ಮಕ್ಕಳು, ಯುವ ಜನಾಂಗ ವಿಕಸಿತ ಭಾರತಕ್ಕೆ ಅಡಿಗಲ್ಲು ಎಂದ ಅವರು ತಂದೆ ತಾಯಿ ಮಕ್ಕಳ ಬಗ್ಗೆ ಹೆಮ್ಮೆ ಪಡುವುದೇ ಮಕ್ಕಳು ಅವರಿಗೆ ನೀಡಬಹುದಾದ ದೊಡ್ಡ ಕೊಡುಗೆ. ಮಕ್ಕಳು ಸಾಧನೆಯ ಶೈಂಗವನ್ನು ಏರಲು ಮಕ್ಕಳಿಗೆ ಕನಸು ಕಾಣಲು ಮತ್ತು ಅದನ್ನು ಸಾಕಾರ ಮಾಡಲು ಪ್ರೇರೇಪಣೆ ನೀಡಬೇಕು ಎಂದು ಹೇಳಿದರು. ಯುವ ಶಕ್ತಿಯನ್ನು ಜಾಗೃತಿಗೊಳಿಸಲು, ಯುವ ಜನಾಂಗಕ್ಕೆ ಶಕ್ತಿ ತುಂಬಲು ‘ಯುವ್ವಿಕಾಸ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶ ಅಮೃತ ಕಾಲದಲ್ಲಿದ್ದು, ದೇಶ ವಿಕಸಿತ ಭಾರತವಾಗಲು ವಿಶ್ವಕ್ಕೆ ಮಾದರಿಯಾಗಿ

ಬೆಳೆಯಲು ಯುವ ಶಕ್ತಿ ಗಟ್ಟಿಯಾಗಿ ಬೆಳೆಯಬೇಕು. ಅದಕ್ಕೆ ಅವರಿಗೆ ಧೈರ್ಯ, ಪ್ರೋತ್ಸಾಹ ನೀಡಬೇಕು, ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿ ಮಾಡಬೇಕು ಎಂದು ಕ್ಯಾಪ್ಟನ್ ಚೌಟ ಹೇಳಿದರು. ಮಕ್ಕಳ ಸಂಕಲ್ಪವನ್ನು ಪೋಷಿಸಿ ಗಟ್ಟಿಗೊಳಿಸುವ ಮೂಲಕ ಜಾಗೃತ ಯುವ ಸಮಾಜವನ್ನು ಸೃಷ್ಠಿಸಿ ಸಮೃದ್ಧ ಕರ್ನಾಟಕ, ಸುಂದರ ಭಾರತ ನಿರ್ಮಾಣ ನಮ್ಮಕನಸು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಅವಕಾಶಗಳ ಸಾಗರ, ಸ್ಟಾರ್ಟ್ ಅಫ್ಗಳಿಗೆ, ಉದ್ಯಮಶೀಲತೆಗೆ ವಿಫುಲ ಅವಕಾಶಗಳು ಇದೆ.
ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಉದ್ಯಮಗಳು ಬೆಳೆಯಬೇಕು, ಸ್ಟಾರ್ಟ್ ಅಪ್ಗಳು ಆರಂಭ ಆಗಬೇಕು. ಉದ್ಯಮ ಶೀಲತೆಯನ್ನು ಬೆಳೆಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಗಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಭಾಗವಹಿಸಿದ್ದರು.
ಸುಂದರ ಭಾರತ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಂದರ ಭಾರತ ಟ್ರಸ್ಟ್ ವತಿಯಿಂದ ಸರಕಾರಿ ಶಾಲೆಗಳಿಗೆ ನೋಟ್ ಬುಕ್ ವಿತರಣರ ಮಾಡಲಾಯಿತು.
ಮಾಹಿತಿ ಕಾರ್ಯಾಗಾರ:
ಕಾರ್ಯಕ್ರಮದಲ್ಲಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳು, ಹೊಸ ಉದ್ದಿಮೆ, ಸ್ಟಾರ್ಟಪ್ , ಪ್ರಾರಂಭಿಸುವುದು, ಎಐ ಯುಗದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಗಳು, ಇಂಜಿನಿಯರಿಂಗ್ ಕಲಿಯದವರಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳು ಇತ್ಯಾದಿ ವಿಚಾರಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಕ್ಷೇತ್ರದ ಪರಿಣತರಾಗಿರುವ ಮಹಂತೇಶ್ ಕಟಗೇರಿ, ಬಿಪಿಓ ಕ್ಷೇತ್ರದ ಕುರಿತು ಪ್ರಸನ್ನ ಕೃಷ್ಣಯ್ಯ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹರೀಶ್ ಕುಮಾರ್, ಎಐ ಉದ್ಯೋಗಕಾಶಗಳ ಭಾರತೀಯ ಆಡಳಿತ ಫೆಲೋ ಹಾಗೂ ಸುಂದರ ಭಾರತ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ ಮಾಹಿತಿ ನೀಡಿದರು.