ಸುಬ್ರಹ್ಮಣ್ಯ: ಕಲಿತ ಶಿಕ್ಷಣ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಬೇಕೇ ವಿನಃ ಅಂಕ ಗಳಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವ ಯಾಂತ್ರಿಕ ಶಿಕ್ಷಣವಾಗಬಾರದು ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ಕರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಹಮ್ಮಿಕೊಂಡ ಯುವ ರೆಡ್ ಕ್ರಾಸ್ ಘಟಕದ 2024-25 ನೇ ಸಾಲಿನ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ನಂತಹ ಸಂಸ್ಥೆಗಳಲ್ಲಿ ಸೇರಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದರೊಂದಿಗೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ ಪಿ. ಟಿ. ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಲತಾ.ಬಿ.ಟಿ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ವನಿತಾ ಮತ್ತು ಸ್ವಾತಿ ಹಾಗೂ ಘಟಕದ ನಾಯಕರಾದ ಸಂಜನ.ಎನ್.ಎಸ್ ಮತ್ತು ವಿಳಾಸ್.ಎನ್.ಕೆ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಶೃಜನ್ ಮುಂಡೋಡಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರೀಕ್ಷ ಅತಿಥಿಗಳನ್ನು ಪರಿಚಯಿಸಿ, ಅಶ್ವಿತಾ. ಕೆ ವಂದಿಸಿದರು. ಸಂಜನ.ಎನ್.ಎಸ್ ನಿರೂಪಿಸಿದರು.