ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದೆ. ಕಲೆಯ ಮೂಲಕ
ಭಾಷೆ ಬೆಳೆಯಬೇಕು ಎಂಬ ದೃಷ್ಠಿಯಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ವಿ. ದಾಮೋದರ ಗೌಡ
ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ”ಹಿಂಗಾರ ”ವನ್ನು ಬಿಡುಗಡೆ ಮಾಡಿ ಮಾತನಾಡಿ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು, ಭಾಷೆ ಸಹೋದರತೆ, ಸಮನ್ವಯತೆ, ಸಮಾನತೆಗಳನ್ನು ಉದ್ದೀಪನಗೊಳಿಸಬೇಕು ಎಂದು ಹೇಳಿದರು.

ಕಲಾವಿದ ಜಬ್ಬಾರ್ ಸಮೋ ಮತ್ತು ಭಾಗವತಿಕೆ ಪ್ರತಿಭೆ ಭವ್ಯಶ್ರೀ ಕುಲ್ಕುಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಪ್ರೊ. ದಾಮೋದರ ಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಡಾ. ಜ್ಞಾನೇಶ್.ಎನ್.ಎ, ಚಂದ್ರಾವತಿ ಬಡ್ಡಡ್ಕ, ತೇಜಕುಮಾರ್ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಲೋಕೇಶ್ ಊರುಬೈಲು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಹಾಗು ಭಾಗವತರಾದ ಭವ್ಯಶ್ರೀ ಮಂಡೆಕೋಲು ಅವರು ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರದಲ್ಲಿ ಅರೆಭಾಷೆಯಲ್ಲಿ ,ಕಥಾ ಶೈಲಿ, ಪಾತ್ರ ಪ್ರವೇಶ, ಮಾತಾಡುವ ಶೈಲಿ,ತಾಳ ಜ್ಞಾನ, ಪುರಾಣದ ಪಾತ್ರಗಳ ಅರೆಭಾಷೆಗೆ ಹೊಂದಿಸುವ ಕಲೆಗಾರಿಕೆ ಮಯಂತಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.














