ತುಮಕೂರು: ಯಕ್ಷಗಾನದ ಅಸ್ತಿತ್ವ ಉಳಿದಿರುವುದು ಅದರ ಸೃಜನಶೀಲತೆಯಿಂದ. ಆದ್ದರಿಂದಲೇ ಅದಕ್ಕೆ ಮನಸ್ಸು ಮತ್ತು ಹೃದಯಗಳನ್ನು ಅರಳಿಸುವ ಶಕ್ತಿಯಿದೆ ಎಂದು ಶಿಕ್ಷಣತಜ್ಞ ಡಾ. ಚಂದ್ರಶೇಖರ ದಾಮ್ಲೆ ಅಭಿಪ್ರಾಯಪಟ್ಟರು.ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ಯಕ್ಷದೀವಿಗೆಯು ಹಮ್ಮಿಕೊಂಡಿದ್ದ ಎರಡು ದಿನಗಳ
ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾನಾಸಕ್ತರ ಸಂಪರ್ಕ, ಪುರಾಣ ಜ್ಞಾನ, ಸಂವಹನ ಸಾಮರ್ಥ್ಯ ಹಾಗು ಸಂಸ್ಕಾರವನ್ನು ಕಲೆ ಬೆಳೆಸುತ್ತದೆ. ಕಲೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅದು ಬದುಕನ್ನು ಬೆಳಗಿಸುತ್ತದೆ. ಶಾಲಾ ಪಠ್ಯಕ್ರಮದಲ್ಲಿ ಕಲಾ ಶಿಕ್ಷಣವೂ ಸೇರಬೇಕು ಎಂದರು.
ಪುರಾಣ ಮೌಲ್ಯಗಳ ಆಳವಾದ ಅಧ್ಯಯನ ವ್ಯಕ್ತಿತ್ವವಿಕಸನಕ್ಕೆ

ಪೂರಕವಾಗಿದೆ. ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಪ್ರತ್ಯುತ್ಪನ್ನಮತಿತ್ವ ಬೆಳೆಯುತ್ತದೆ. ವ್ಯಕ್ತಿ ಕಲೆಯೊಂದಿಗೆ ಬೆಳೆಯುತ್ತಾ ಹೊಸ ಚಿಂತನೆಗಳನ್ನು ಸೃಜನಶೀಲವಾಗಿ ವ್ಯಕ್ತಪಡಿಸುವುದಕ್ಕೆ ಶಕ್ತನಾಗುತ್ತಾನೆ ಎಂದರು.
ಯಕ್ಷಗಾನವು ತನ್ನ ಸಂವಹನ ಸಾಮರ್ಥ್ಯದಿಂದ ಬೇರೆ ಕಲೆಗಳಿಗಿಂತ ಭಿನ್ನವಾಗಿದೆ. ಯಕ್ಷಗಾನದಲ್ಲಿ ಬಣ್ಣಗಾರಿಕೆಯು ಪ್ರಮುಖವಾಗಿದ್ದು, ಕಲಾವಿದ ಮುಖದ ಮೇಲೆ ಪ್ರತಿಯೊಂದು ರೇಖೆ ಎಳೆಯುವಾಗಲೂ ಆತನ ಮನಸ್ಸಿನಲ್ಲಿ ಹೊಸ ಭಾವನೆಗಳು ಮೂಡುತ್ತವೆ. ಇದು ಕಲಾವಿದನನ್ನು ಪರಕಾಯ ಪ್ರವೇಶಕ್ಕೆ ಸಿದ್ಧಗೊಳಿಸುತ್ತದೆ ಎಂದರು.
ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ,ದಕ್ಷಿಣ ಕನ್ನಡ ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ ಕೆಂಜೂರುಮನೆ, ಕಾರ್ಯದರ್ಶಿ ವೆಂಕಟೇಶ ಎಂ.ಎಸ್. ಕಾರಂತ, ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲಕೃಷ್ಣ ಭಟ್ ನಿಡುವಜೆ, ಪಾರ್ಥಸಾರಥಿ, ಯಕ್ಷದೀವಿಗೆ ಕೋಶಾಧಿಕಾರಿ ಸಿಬಂತಿ ಪದ್ಮನಾಭ ಉಪಸ್ಥಿತರಿದ್ದರು. ಸಂಜೆ ಕಾವ್ಯಶ್ರೀ ಆಜೇರು, ಕೃಷ್ಣಪ್ರಕಾಶ ಉಳಿತ್ತಾಯ, ಅವಿನಾಶ್ ಬೈಪಾಡಿತ್ತಾಯ ಹಿಮ್ಮೇಳದೊಂದಿಗೆ ಚಂದ್ರಶೇಖರ ದಾಮ್ಲೆ ವಿರಚಿತ ‘ಏಕಲವ್ಯ’ ಯಕ್ಷಗಾನ ತಾಳಮದ್ದಳೆ ನಡೆಯಿತು.