ಸುಳ್ಯ: ಸುಳ್ಯ ತಾಲೂಕಿನ ಪ್ರತಿಷ್ಠಿತ ಸಂಗೀತ ಸಭಾ ಹಾಗೂ ಸಂಗೀತ ಅಧ್ಯಯನ ಕೇಂದ್ರವಾದ ಎಲಿಮಲೆಯ ರಂಜನಿ ಸಂಗೀತ ಸಭಾದ 15ನೇ ವರ್ಷದ ಸಂಗೀತ ಸಂಭ್ರಮ ಕಾರ್ಯಕ್ರಮ ಏ. 19ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಿತು. ಸಂಗೀತ ಸಂಭ್ರಮದ ವಿಶೇಷ ಕಾರ್ಯಕ್ರಮವಾಗಿ ಡಿವೈನ್ ಬ್ಲಾಕ್ ಬಸ್ಟರ್ ಚಲನಚಿತ್ರ ‘ಕಾಂತಾರ’ದ ಹಿಟ್ ಹಾಡು ‘ವರಾಹರೂಪಂ’ ಹಾಡಿದ
ವಿದ್ವಾನ್ ಸಾಯಿ ವಿಘ್ನೇಶ್ ಚೆನ್ನೈ ಅವರ ಹಾಡುಗಾರಿಕೆ ನಡೆಯಿತು. ಚಲನಚಿತ್ರ ಹಿನ್ನಲೆ ಗಾಯಕರು ಹಾಗೂ ಶಾಸ್ತ್ರೀಯ ಸಂಗೀತಗಾರರಾದ ವಿದ್ವಾನ್ ಸಾಯಿ ವಿಘ್ನೇಶ್ ಚೆನ್ನೈ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನೆರೆದ ಸಂಗೀತಾಸಕ್ತರ ಮನಸೂರೆಗೊಂಡಿತು. ಜನಪ್ರಿಯ ಕೀರ್ತನೆಗಳನ್ನು ಹಾಡಿ ಮೋಡಿ ಮಾಡಿದ ಸಾಯಿ ವಿಘ್ನೇಶ್ ನೆರೆದ ಪ್ರೇಕ್ಷಕರ ಮನಗೆದ್ದರು. ಹಿಮ್ಮೇಳ ವಾದನದಲ್ಲಿ

ವಯಲಿನ್ನಲ್ಲಿ ವಿದ್ವಾನ್ ಕೇಶವ್ ಮೋಹನ್ ಕುಮಾರ್ ಮೈಸೂರು,ಮೃದಂಗದಲ್ಲಿ ವಿದ್ವಾನ್ ಬಿ.ಎಸ್.ಪ್ರಶಾಂತ್ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಶ್ರೀಹರ್ಷ ಉಡುಪ ಬೆಂಗಳೂರು ಸಹಕರಿಸಿದರು.
ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಸಂಗೀತ ಸಂಭ್ರಮವನ್ನು ಉದ್ಘಾಟಿಸಿದರು.ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಮಹಾಬಲೇಶ್ವರ ಭಟ್, ದೇವಳದ

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸಿಎ ಗಣೇಶ್ ಭಟ್ ಪಿ, ಗಣೇಶ್ ಪ್ರಸಾದ್ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
ರಂಜನಿ ಸಂಗೀತ ಸಭಾದ ನಿರ್ದೇಶಕರಾದ ಸತ್ಯನಾರಾಯಣ ಹೊನ್ನಾಡಿ, ನಿರ್ದೇಶಕರು ಹಾಗೂ ಸಂಗೀತ ಗುರುಗಳಾದ ರೇಖಾ ರೇವತಿ ಹೊನ್ನಾಡಿ ಕಲಾವಿಸರು ಹಾಗು ಸಂಗೀತಾಸಕ್ತರನ್ನು ಸ್ವಾಗತಿಸಿದರು.
















