ಸುಳ್ಯ:ಆರೋಹ ಫಿಲಂಸ್ ಬ್ಯಾನರ್ನ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿ ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಸಿನಿಮಾ
ಮೇ.8ರಿಂದ ಸುಳ್ಯದ ಭಾರತ್ ಸಿನಿಮಾಸ್(ಸಂತೋಷ್ ಚಿತ್ರಮಂದಿರ)ನಲ್ಲಿ ಪ್ರದರ್ಶನಗೊಳ್ಳಲಿದೆ.ಸುಳ್ಯದ ಸಿನಿಮಾ ಪ್ರಿಯರಿಗಾಗಿ ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ ಎಂದು
ಸಿನಿಮಾದ ನಿರ್ಮಾಪಕರಾದ ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಪುತ್ತೂರಿನ ಭಾರತ್ ಸಿನಿಮಾಸ್ನಲ್ಲಿ 63 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು, ಇದೀಗ ಸುಳ್ಯದ ಜನತೆಗೆ ಸಿನಿಮಾ ತಲುಪಿಸುವ ಸಲುವಾಗಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎಂದರು.ತಾರಾಗಣದಲ್ಲಿ ರಮೇಶ್ಭಟ್,ವಿದ್ಯಾಮೂರ್ತಿ ತೇಜಸ್ಕಿರಣ್,ಆರೋಹಿನೈನ, ಅನೂಷಾಕೃಷ್ಣ,ಚಂದನಾ ಅನಂತಕೃಷ್ಣ, ಸಂದೀಪ್ ರಾಜಗೋಪಾಲ್, ಸಿತಾರಾ, ಶ್ರೀನಿವಾಸಮೂರ್. ಶಮಾತ್ಮಿಕ, ವಿಭಾಡೊಂಗ್ರೆ ಮುಂತಾದವರು ನಟಿಸಿದ್ದರು.
ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಚಿತ್ರ ‘ಭಾವ ತೀರ ಯಾನ’. ಸುಂದರವಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರವನದನು , 6 ವರ್ಷದಿಂದ 60 ವರ್ಷದವರೆಗಿನ ಪ್ರತಿಯೊಬ್ಬರಿಗೂ ಆಪ್ತವೆನಿಸುವಂತಹ ರೀತಿಯಲ್ಲಿ ಮೂಡಿಬಂದಿದೆ. ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡಲು ಚಿತ್ರ ತಂಡ ಸಜ್ಜಾಗಿದೆ. ಹಲವಾರು ಭಾವನಾತ್ಮಕ ಅಂಶಗಳು ಈ ಚಿತ್ರದಲ್ಲಿ ಇರುವುದರಿಂದ ಈ ಚಿತ್ರಕ್ಕೆ ಹೊಂದುವಂತಹ ‘ಭಾವ ತೀರ ಯಾನ’ ಎಂಬ ಹೆಸರನ್ನು ಇಡಲಾಗಿದೆ. 20 ದಿನಗಳು ಚಿತ್ರೀಕರಣ ನಡೆದಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ ಚಿಕ್ಕಮಗಳೂರು, ಮಂಗಳೂರು ಅಲ್ಲದೆ ಸುಳ್ಯದ ಸುತ್ತಮುತ್ತ ಚಿತ್ರೀಕರಣ ಗೊಂಡಿದೆ.
ಈ ಚಿತ್ರಕ್ಕೆ ಶಿವಶಂಕರ್ ನೂಗಂಬಡ ಛಾಯಾಗ್ರಹಣ, ಮಯೂರ್ ಅಂಬೆಕಲ್ಲು ಸಂಗೀತ, ಸುಪ್ರೀತ್ ಸಂಕಲನ, ವಿಶಾಕ್ ನಾಗಲಪುರ ಸಂಭಾಷಣೆ, ಮಯೂರ್ ನಾಯ್ಕ ಹಾಗೂ ಭಾನುಪ್ರಕಾಶ್ ಜೋಯ್ಸ್ ಸಾಹಿತ್ಯವಿದೆ.ಈ ಚಿತ್ರವನ್ನು ‘ಶಾಖಾಹಾರಿ’ ಸಿನಿಮಾ ನಿರ್ಮಾಣ ಮಾಡಿದ ಕೀಳಂಬಿ ಮೀಡಿಯಾ ಲ್ಯಾಬ್ ಪ್ರಸ್ತುತಪಡಿಸಿದ್ದು, ಜನನಿ ಪಿಕ್ಚರ್ಸ್ ರಾಜ್ಯಾದ್ಯಂತ ವಿತರಣೆ ಮಾಡಿತ್ತು ಎಂದು ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಬಿ.ಸದಾಶಿವ, ಪಿ.ಎಸ್.ಗಂಗಾಧರ, ಶ್ರೀಹರಿ ಪೈಂದೋಡಿ, ಡಾ.ವಿದ್ಯಾಶಾರದೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.












