ಬಟುಮಿ(ಜಾರ್ಜಿಯಾ): ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಮಹಿಳಾ ವಿಶ್ವಕಪ್ ಕಿರೀಟ ಗೆದ್ದು ಕೊಂಡಿದ್ದಾರೆ. ಭಾರತದವರೇ ಆದ ಕೋನೇರು ಹಂಪಿ ಅವರನ್ನು ಸೋಲಿಸಿ ಫಿಡೆ ಚೆಸ್ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಅವರು ‘ಗ್ರ್ಯಾಂಡ್ಮಾಸ್ಟರ್’ ಬಿರುದಿಗೂ ಪಾತ್ರರಾದರು.
ಈ ಪ್ರತಿಷ್ಠಿತ ಟೂರ್ನಿಯ ಫೈನಲ್ಗೆ ಮೊದಲ ಬಾರಿ ಭಾರತದ ಆಟಗಾರ್ತಿಯರು ತಲುಪಿದ್ದೇ ಚಾರಿತ್ರಿಕ ಸಂದರ್ಭವಾಗಿತ್ತು. 19 ವರ್ಷ ವಯಸ್ಸಿನ ದಿವ್ಯಾ ಟೈಬ್ರೇಕರ್ನ ಎರಡನೇ ರ್ಯಾಪಿಡ್ ಆಟದಲ್ಲಿ
ಗ್ರ್ಯಾಂಡ್ಮಾಸ್ಟರ್ ಹಂಪಿ ಅವರನ್ನು ಸೋಲಿಸಿ ಫೈನಲ್ ಪಂದ್ಯವನ್ನು 2.5–1.5 ರಿಂದ ಗೆದ್ದರು. ಟೂರ್ನಿಗೆ ಅವರ ಬಳಿ ಒಂದೂ ಗ್ರ್ಯಾಂಡ್ಮಾಸ್ಟರ್ ನಾರ್ಮ್ ಇರಲಿಲ್ಲ. ಫಿಡೆ ನಿಯಮಗಳ ಪ್ರಕಾರ ಟೂರ್ನಿ ಗೆದ್ದ ಆಟಗಾರ್ತಿ, ಯಾವುದೇ ಪ್ರಕ್ರಿಯೆಯ ಅಗತ್ಯವಿಲ್ಲದೇ ನೇರವಾಗಿ ಜಿಎಂ ಬಿರುದು ಪಡೆಯುತ್ತಾರೆ.ಉತ್ತಮ ಲಯದಲ್ಲಿದ್ದ 19 ವರ್ಷ ವಯಸ್ಸಿನ ದಿವ್ಯಾ, ಇಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾದರು. ಟ್ರೋಫಿಯ ಜೊತೆಗೆ 43.30 ಲಕ್ಷ ನಗದು ಬಹುಮಾನ ಅವರ ಪಾಲಾಯಿತು.
ದಿವ್ಯಾ ಈ ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದರು.
ಫೈನಲ್ನ ಮೊದಲ ಎರಡು ಕ್ಲಾಸಿಕಲ್ ಆಟಗಳು (ಶನಿವಾರ ಮತ್ತು ಭಾನುವಾರ) ಡ್ರಾ ಆಗಿದ್ದವು. ಹೀಗಾಗಿ ವಿಜೇತರ ನಿರ್ಧಾರಕ್ಕೆ ಟೈಬ್ರೇಕ್ ಪಂದ್ಯಗಳನ್ನು ಆಡಿಸಲಾಯಿತು.ಸೋಮವಾರ ನಡೆದ ಎರಡೂ ರ್ಯಾಪಿಡ್ ಆಟಗಳು ಹೋರಾಟದಿಂದ ಕೂಡಿದ್ದವು. ದಿವ್ಯಾ ಮತ್ತು ಹಂಪಿ ತಮ್ಮ ರೇಟಿಂಗ್ ಸಾಮರ್ಥ್ಯಕ್ಕಿಂತ ಮೇಲಿನ ಮಟ್ಟದಲ್ಲಿ ಆಡಿದರು.














