ದುಬೈ: ಆಲ್ರೌಂಡ್ ಆಟವಾಡಿದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಭಾನುವಾರ 72 ರನ್ಗಳಿಂದ ಶ್ರೀಲಂಕಾ ಪಡೆಯನ್ನು ಮಣಿಸಿತು. ಅದರೊಂದಿಗೆ ದಾಖಲೆಯ ಎಂಟನೇ ಬಾರಿಗೆ ಮಹಿಳೆಯರ ಏಷ್ಯಾಕಪ್ ಕಿರೀಟ ಗೆದ್ದುಕೊಂಡಿತು.ಆದರೆ
ಹರ್ಮನ್ ಪಡೆಯು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ನಕ್ವಿ ಅವರು ಟ್ರೋಫಿ ಪ್ರದಾನ ವೇದಿಕೆಗೆ ಬಂದಿದ್ದರು. ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಅವರು ರನ್ನರ್ಸ್ಅಪ್ ಟ್ರೋಫಿಯನ್ನು ನಕ್ವಿ ಅವರಿಂದ ಸ್ವೀಕರಿಸಿದರು. ಆದರೆ, ಭಾರತ ತಂಡ ವೇದಿಕೆಯತ್ತ ಬರಲಿಲ್ಲ.
ಕಳೆದ ವರ್ಷ, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಪುರುಷರ ತಂಡವು ಏಷ್ಯಾಕಪ್ ಗೆದ್ದಾಗಲೂ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ ದಾಖಲೆಯ 129 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 183 ರನ್ ಗಳಿಸಿತು.
ಕಠಿಣ ಗುರಿ ಬೆನ್ನಟ್ಟಿದ ಚಾಮರಿ ಅಟಪಟ್ಟು ನಾಯಕತ್ವದ ಶ್ರೀಲಂಕಾ ತಂಡಕ್ಕೆ ದೀಪ್ತಿ ಶರ್ಮಾ (19ಕ್ಕೆ3) ಹಾಗೂ ಶ್ರೀಚರಣಿ (20ಕ್ಕೆ4) ಆಘಾತ ನೀಡಿದರು. ಕಳೆದ ಬಾರಿಯ ಚಾಂಪಿಯನ್ ತಂಡವು 20 ಓವರ್ಗಳಲ್ಲಿ 111 ರನ್ಗಳಿಗೆ ಸರ್ವಪತನವಾಯಿತು.
ನಾಯಕಿ ಚಾಮರಿ (36; 32ಎ), ವಿಶ್ಮಿ ಗುಣರತ್ನೆ (20; 22ಎ) ಮತ್ತು ನೀಲಾಕ್ಷಿಕಾ ಸಿಲ್ವ (22; 16ಎ) ಹೊರತುಪಡಿಸಿ, ಉಳಿದ ಬ್ಯಾಟರ್ಗಳು ಒಂದಂಕಿ ದಾಟಲಿಲ್ಲ. ಭಾರತದ ಪರ ನಾಯಕಿ ಹರ್ಮನ್ಪ್ರೀತ್ (14; 14ಎ) ಮತ್ತು ರಿಚಾ ಘೋಷ್ (17; 13ಎ) ಉಪಯುಕ್ತ ಕಾಣಿಕೆ ನೀಡಿದರು.ಕೊನೆಯ ಹಂತದಲ್ಲಿ ಜಿ. ಕಮಲಿನಿ 5 ಎಸೆತಗಳಲ್ಲಿ 15 ರನ್ ಸೂರೆ ಮಾಡಿದರು. ಒಂದು ಬೌಂಡರಿ ಮತ್ತು ಸಿಕ್ಸರ್ ಹೊಡೆದು ತಂಡದ ಮೊತ್ತವನ್ನು ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 5ಕ್ಕೆ183 (ಸ್ಮೃತಿ ಮಂದಾನ 59, ಶಫಾಲಿ ವರ್ಮಾ 68, ರಿಚಾ ಘೋಷ್ 17, ಜಿ. ಕಮಲಿನಿ ಔಟಾಗದೆ 15, ಮಿಥಾಲಿ ಅಯೋಧ್ಯಾ 33ಕ್ಕೆ1, ಚಾಮರಿ ಅಟಪಟ್ಟು 34ಕ್ಕೆ1, ಚಾಮುಡಿ ಪ್ರಬೋಧಾ 40ಕ್ಕೆ1). ಶ್ರೀಲಂಕಾ: 20 ಓವರ್ಗಳಲ್ಲಿ 111 (ಚಾಮರಿ ಅಟಪಟ್ಟು 36, ವಿಶ್ಮಿ ಗುಣರತ್ನೆ 20, ನೀಲಾಕ್ಷಿಕಾ ಸಿಲ್ವ 22; ದೀಪ್ತಿ ಶರ್ಮಾ 19ಕ್ಕೆ3, ಶ್ರೀಚರಣಿ 20ಕ್ಕೆ4.











