ಮಂಗಳೂರು:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದ ಬಳಿಕ ಜಿಲ್ಲೆಗೆ ಆಗಮಿಸಿದ ಅವರು ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯದಲ್ಲಿ
ಸುಮಾರು 900ರಷ್ಟು ವೈದ್ಯರ ಹುದ್ದೆಗಳು ಖಾಲಿ ಇದ್ದು ಎಂಬಿಬಿಎಸ್ ಆದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಸಿದ್ಧರಿದ್ದರೆ ವಾರದೊಳಗೆ
ನೇಮಕಾತಿ ಮಾಡಲಾಗುವುದು.ಖಾಯಂ ವೈದ್ಯರ ನೇಮಕೆ ಆಗುವವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಹಂತ ಹಂತವಾಗಿ ಸರ್ಕಾರಿ ಆಸ್ಪತ್ರೆಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡುವುದಾಗಿ ತಿಳಿಸಿದರು.ಎಂಬಿಬಿಎಸ್ ಆದವರು ಸೇವೆ ಸಲ್ಲಿಸಲು ಬಂದರೆ ಅವರಿಗೆ ಡಿಎಚ್ಒಗಳು ಒಂದು ವಾರದೊಳಗೆ ತಾತ್ಕಾಲಿಕ
ನೇಮಕಾತಿಯ ಆದೇಶ ಪತ್ರ ನೀಡಬೇಕು.ನೇಮಕ ಆದವರಿಗೆ 60 ಸಾವಿರ ವೇತನ ನೀಡಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇನೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಇದೇ ರೀತಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಭೇಟಿ ನೀಟಿ ಪರಿಶೀಲಿಸಲು ಸೂಚಿಸುವುದಾಗಿ ಅವರು ತಿಳಿಸಿದರು. ಜಿಲ್ಲೆಗೆ ಆಗಮಿಸಿದ ಸಚಿವರಿಗೆ ಕಾರ್ಯಕರ್ತರು ಹಾಗು ಮುಖಂಡರು ಅದ್ದೂರಿ ಸ್ವಾಗತ ನೀಡಿದರು.













