ಪ್ಯಾರೀಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್ನಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ.
‘ಎಕ್ಸ್’ನಲ್ಲಿ ನಿವೃತ್ತಿ ಘೋಷಿಸಿ ಭಾವನಾತ್ಮಕ ಫೋಸ್ಟ್ ಮಾಡಿರುವ ಅವರು, ‘ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ. ನಿಮ್ಮ ಕನಸು ಮತ್ತು
ನನ್ನ ಧೈರ್ಯ ನುಚ್ಚುನೂರಾಗಿದೆ. ಈಗ ನನಗೆ ಹೆಚ್ಚಿನ ಶಕ್ತಿ ಇಲ್ಲ.ಎಂದು ಹೇಳಿದ್ದಾರೆ. ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಸೆಮಿಫೈನಲ್ನಲ್ಲಿ ವಿನೇಶಾ ಅವರು ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು. ಅಂದುಕೊಂಡಂತೆ ನಡೆದಿದ್ದರೆ ಬುಧವಾರ ರಾತ್ರಿ ಫೈನಲ್ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರ ಎದುರು ವಿನೇಶಾ ಸೆಣಸಬೇಕಿತ್ತು. ಆದರೆ ನಿಗದಿಯ ದೇಹ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ ಕಾರಣ ಅವರು ಪಂದ್ಯದಿಂದಲೇ ಅನರ್ಹಗೊಳ್ಳಬೇಕಾಯಿತು.
ವಿನೇಶ್ ಅವರನ್ನು 50 ಕೆ.ಜಿ ತೂಕದ ವ್ಯಾಪ್ತಿಗೆ ತರಲು ಸಕಲ ಪ್ರಯತ್ನಗಳನ್ನೂ ಮಾಡಿತ್ತು. ವಿನೇಶ್ ಅವರ ತಲೆಗೂದಲನ್ನೂ ಕತ್ತರಿಸಲಾಗಿತ್ತು. ವಿನೇಶ್ ಸಹ ದೇಹವನ್ನು ದಂಡಿಸಿದ್ದರು. ಆದರೂ ತೂಕವನ್ನು ನಿಗದಿತ ಮಿತಿಗೆ ತರಲು ಸಾಧ್ಯವಾಗಲಿಲ್ಲ