ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜಯ ಗಳಿಸುವುದು ಬಿಜೆಪಿಯ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಮಂಗಳೂರಿಗೆ ಆಗಮಿಸಿದ ಅವರು ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ
ವಿಫಲವಾಗಿದೆ. ರಾಜ್ಯದಲ್ಲಿ ಬರ ನಿರ್ವಹಣೆಯ ಬಗ್ಗೆ ಚರ್ಚಿಸಬೇಕಾದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಚಿವರು ಮುಂದಿನ ಲೋಕಸಭಾ ಚುನಾವಣೆ, ನಿಗಮ ಮಂಡಳಿ ನೇಮಕಾತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಸರಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಈ ಎಲ್ಲ ವಿಚಾರವಾಗಿ ಮುಂದಿನ ಅಧಿವೇಶನದಲ್ಲಿ ಸರಕಾರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು
ಬಿಜೆಪಿಯಿಂದ ಯಾರು ಹೊರ ಹೋಗುವುದಿಲ್ಲ. ಬಿಜೆಪಿ ತೊರೆದು ಹೋಗಿರುವವರನ್ನು ಮರಳಿ ಪಕ್ಷ ಕ್ಕೆ ಕರೆತರಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ ಪ್ರತಾಪ್ ಸಿಂಹ ನಾಯಕ್, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ವಿಭಾಗದ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ವಿಜಯೇಂದ್ರ ಅವರು ಮಂಗಳೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯದ ಬಿಜೆಪಿ ಮುಖಂಡರು ಭಾಗವಹಿಸಿದ್ದರು.