ಚೆನ್ನೈ:ತಮಿಳನಾಡಿನಲ್ಲಿ ನೂತನ ಸರ್ಕಾರ ರಚಿಸಲು ಕಸರತ್ತು ಮುಂದುವರಿದಿದ್ದು, ಗುರುವಾರವೂ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್, ನೂತನ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದ್ದಾರೆ.ಆದರೆ ಟಿವಿಕೆಗೆ ಸಂಖ್ಯಾಬಲದ
ಕೊರತೆಯಿದ್ದು, ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲ ಎಂದು ವಿಜಯ್ ಅವರಿಗೆ ಅರ್ಲೇಕರ್ ವಿವರಿಸಿದ್ದಾರೆ ಎಂದು ವರದಿಯಾಗಿದೆ.ಬುಧವಾರ ರಾಜ್ಯಪಾಲ ಅರ್ಲೆಕರ್ ಅವರನ್ನು ಭೇಟಿಯಾಗಿದ್ದ ವಿಜಯ್, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಆದರೆ ಸಂಖ್ಯಾಬಲದ ದಾಖಲೆಯನ್ನು ಕೇಳಿದ ರಾಜ್ಯಪಾಲರು ಗುರುವಾರ ಎರಡನೇ ಬಾರಿಗೆ ಮಾತುಕತೆಗಾಗಿ ಆಹ್ವಾನಿಸಿದರು.ಮಾತುಕತೆಯ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಬಹುಮತ ಇಲ್ಲ ಎಂದು ರಾಜ್ಯಪಾಲರು ವಿವರಿಸಿದ್ದಾರೆ ಎಂದು ಲೋಕಭವನದ ಪ್ರಕಟಣೆ ತಿಳಿಸಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಗೆದ್ದಿರುವ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ನ ಐವರು ಶಾಸಕರ ಬೆಂಬಲದ ಹೊರತಾಗಿಯೂ ಬಹುಮತಕ್ಕೆ ಬೇಕಾಗಿರುವ ಅಧಿಕೃತ ಸಂಖ್ಯಾಬಲದ ಕೊರತೆ ಕಾಡುತ್ತಿದೆ.











