ತಿರುವನಂತಪುರ: ಕೇರಳಂನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ಭಾನುವಾರ ಘೋಷಿಸುವ ಸಾಧ್ಯತೆ ಇದೆ. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ತಮ್ಮ ಅಭಿಪ್ರಾಯಗಳನ್ನು ಎಐಸಿಸಿ ವೀಕ್ಷಕರಿಗೆ ತಿಳಿಸಿದ್ದಾರೆ. ಯುಡಿಎಫ್ನ ಇತರ ಪಕ್ಷಗಳ ಮುಖಂಡರ ಜೊತೆ
ಚರ್ಚೆ ನಡೆಸಿ ಎಐಸಿಸಿ ವೀಕ್ಷಕರು ಬಳಿಕ ವರದಿ ಸಲ್ಲಿಸಲಿದ್ದಾರೆ. ಬಳಿಕ ಹೈಕಮಾಂಡ್ ಸಭೆ ನಡೆಸಿ,ಮುಖ್ಯಮಂತ್ರಿ ಆಕಾಂಕ್ಷಿಗಳಾದ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮವಾಗಿ ಸಿಎಂ ಘೋಷಿಸಲಾಗುವುದು. ಒಟ್ಟಿನಲ್ಲಿ ಕೇರಳಂನಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಭಾನುವಾರದೊಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ.ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಪ್ರಚಂಡ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ 63 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ನ ಶಾಸಕರು ನೂತನ ಸಿಎಂ ಆಯ್ಕೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಎಐಸಿಸಿ ವೀಕ್ಷಕರಿಗೆ ಮಂಡಿಸಿದ್ದಾರೆ.
ಇದಕ್ಕೂ ಮೊದಲು ನಡೆದ ಸಿಎಲ್ಪಿ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಪಕ್ಷದ ಹೈಕಮಾಂಡ್ಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಲಾಯಿತು.
ಸಿಎಂ ಗಾದಿಯಲ್ಲಿ ಮುಂಚೂಣಿಯಲ್ಲಿರುವ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ವಿ.ಡಿ. ಸತೀಶನ್ ತಮ್ಮ ಅಭಿಪ್ರಾಯಗಳನ್ನು ವೀಕ್ಷಕರ ಮುಂದೆ ಮಂಡಿಸಿದ್ದಾರೆ. ಆದರೆ ವೀಕ್ಷಕರ ಭೇಟಿಯ ಬಳಿಕ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಮಧ್ಯೆ ವಿಧಾನಸಭೆಯಲ್ಲಿ ಸ್ಪರ್ಧಿಸದಿದ್ದರೂ ಸಂಸದ ಕೆ.ಸಿ. ವೇಣುಗೋಪಾಲ್ ಅವರಿಗೆ ಬಹುತೇಕ ಶಾಸಕರು ಬೆಂಬಲಿಸುತ್ತಿದ್ದಾರೆ ಎಂದು ವರದಿಗಳು ಹೇಳಿದೆ. ಪ್ರಮುಖವಾಗಿ ವಿ.ಡಿ.ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.











