*ಎಂ.ನಾ.ಚಂಬಲ್ತಿಮಾರ್.
ಕಾಸರಗೋಡು: ವಾಡಿಕೆ ತಪ್ಪಲಿಲ್ಲ.ಈ ಬಾರಿಯೂ ಕಾಸರಗೋಡು ಜಿಲ್ಲೆಯ ಇಡಯಿಲಕ್ಕಾಡ್ ದ್ವೀಪದ ಮಂಗಗಳೆಲ್ಲ ಜತೆಗೂಡಿ, ಸರದಿ ಸಾಲಲ್ಲಿ ಕುಳಿತು ಭರ್ಜರಿ ಓಣಂ ಔತಣ ಸವಿದು ಧನ್ಯತೆಯಿಂದ ಟಿಟ್ಟಿರಿಗುಟ್ಟಿ ಹಲ್ಲುಮಸೆದು ನಕ್ಕವು. ತಿಂದು ತೇಗಿ ಕುಣಿದು ಕುಪ್ಫಳಿಸಿ ಓಣಂ ಆಚರಿಸಿಕೊಂಡವು…!!
ಓಣಂ ಹಬ್ಬದ ಹಿನ್ನೆಲೆಯಲ್ಲಿ ದ್ವೀಪದಲ್ಲಿರುವ ವಾನರಗಳಿಗೂ ಸಮೃದ್ಧಿಯ ಔತಣ ಬಡಿಸುವ ಸಹಜೀವಿ ಸ್ಪಂದನದ ಮಾನವಿಕ ಕತೆಯಿರುವುದು ಕಾಸರಗೋಡು ಜಿಲ್ಲೆಯ ತ್ರಿಕರಿಪುರದಲ್ಲಿ ತ್ರಿಕರಿಪುರ ಬಳಿಯ
ಇಡಯಿಲಕ್ಕಾಡ್ ದ್ವೀಪದಲ್ಲಿ ಇಂಥದ್ದೊಂದು ಆಚರಣೆ ದಶಕಗಳಿಂದ ನಡೆಯುತ್ತಿದೆ. ಈ ದ್ವೀಪದಲ್ಲಿ ಚಾಲಿಲ್ ಮಾಣಿಕ್ಯಂ ಎಂಬ ಅಜ್ಜಿಯೊಬ್ಬರಿದ್ದಾರೆ. ಅವರಿಗೆ ಇಲ್ಲಿನ ವಾನರಗಳೇ ಸಂಗಾತಿ, ಖಗ,ಮೃಗ,ಪಕ್ಷಿಗಳೇ ಒಡನಾಡಿ.
ಅವರು ವರ್ಷಂಪ್ರತಿ ಓಣಂ ಆಚರಿಸಿ ಉಣ್ಣುವಾಗ ಈ ಮಂಗಗಳಿಗೂ ನೀಡಲಾರಂಭಿಸಿದರು. ಬಳಿಕ ಅದೊಂದು ವಾಡಿಕೆಯಾಗಿ ಜನಪ್ರಿಯತೆ ಪಡೆಯಿತು.ಈಗ ಅಜ್ಜಿಗೆ ವಯಸ್ಸಾಗಿದೆ. ಮುಪ್ಪು ಕಾಡುತ್ತಿದೆ. ಪರಿಣಾಮ ವಾನರಗಳಿಗೆ ಔತಣ ನೀಡುವ ಕಾಯಕವನ್ನು ಪ್ರದೇಶದ ನವೋದಯ ಗ್ರಂಥಾಲಯ ಕೈಗೆತ್ತಿದೆ. ಗ್ರಂಥಾಲಯದ ಆಶ್ರಯದಲ್ಲಿರುವ ಬಾಲವೇದಿಕೆಯ ಚಿಣ್ಣರ ಮೂಲಕ ಈ ಕೈಂಕರ್ಯ ಮುಂದುವರಿಯುತ್ತಿದೆ. ಇದಕ್ಕೆ ಸ್ಥಳೀಯಾಡಳಿತ ಸಹಿತ ನಾಗರಿಕ ಬೆಂಬಲವಿದೆ.
ಈ ಬಾರಿಯ ವಾನರ ಔತಣ ಇಂದು(ಸೆ.16) ಇಡಯಿಲಕ್ಕಾಡ್ ದ್ವೀಪದ ಬನಕ್ಕೆ ಹೋಗುವ ದಾರಿಯಲ್ಲಿ ನಡೆಯಿತು. ಔತಣಕೂಟಕ್ಕೆಂದು ಮೊದಲೇ ಟೇಬಲ್ ಇರಿಸಲಾಗಿತ್ತು. ಅಲ್ಲಿಗೆ ಮಂಗಗಳನ್ನು ಆಹ್ವಾನಿಸದೇ ಅವುಗಳಾಗಿಯೇ ಕಾಡಿಳಿದು ಬಂದುವು. ಬಡಿಸಿದ್ದೇನೂ ಕಾಣದಿದ್ದಾಗ ನೆರೆದವರನ್ನು ನೋಡಿ ಚೇಷ್ಠೆ, ಕೋಂಗಿ ಮಾಡಿದುವು. ಈ ಬಾರಿ ಚಾಲಿಲ್ ಮಾಣಿಕ್ಯಜ್ಜಿಗೆ ಬರಲಾಗದಿದ್ದರೂ ಬಾಲವೇದಿಕೆಯ ಮಕ್ಕಳು ಅವರನ್ನ ಮರೆಯಲಿಲ್ಲ. ಅವರಿಂದಲೇ ಉಪ್ಪುಹಾಕದ ಅನ್ನ ಪಡೆದರು. 17ಬಗೆಯ ಹಣ್ಣುಹಂಪಲು, ತರಕಾರಿಗಳನ್ನು ಅಜ್ಜಿ ಮನೆಯಂಗಳದಲ್ಲೇ ತುಂಡರಿಸಿದರು. ಬಳಿಕ ಓಣಪ್ಪಾಟ್ ಹಾಡುತ್ತಾ ಬನದ ಬಳಿಬಂದು ಟೇಬಲಿನಲ್ಲಿಟ್ಟ ಬಾಳೆಎಲೆಗೆ ಬಡಿಸಿದರು.
ಆಗ ನೋಡಬೇಕಿತ್ತು ಕಾದುಕುಳಿತಿದ್ದ ಮಂಗಗಳ ಸಂಭ್ರಮ!!
ಯಾವುದನ್ನು ತಿನ್ನುವುದೆಂದರಿಯದೇ ಒಂದೊಂದನ್ನೂ ಗಬಗಬನೆ ಎರಡೂ ಕೈಯ್ಯಲ್ಲಿ ಕಪಿಮುಷ್ಠಿಗೆತ್ತಿಕೊಂಡು ನುಂಗಿದುವು. ಚೀಪಿದವು. ಮೊಣಕೈ ನೆಕ್ಕಿ ತೇಗು ಹಾಕಿದುವು. ಜನಜಾತ್ರೆಯೇ ಸೇರಿದ್ದರೂ ಅವರೆಲ್ಲರ ನಡುವೆ ಇದು ನಮ್ಮದೆಂಬ ಹಕ್ಕಿನಿಂದ ತಿಂದುಂಡ ವಾನರಗಳ ತೃಪ್ತಭಾವವನ್ನೊಮ್ಮೆ ನೋಡಬೇಕಿತ್ತು..!
ಇದನ್ನು ನೋಡುವುದೇ ಸಂಭ್ರಮವಲ್ಲ, ಅನನ್ಯ ಮಾನುಷಿಕತೆಯ ಪಾಠವೆಂದು ಆ ದೃಶ್ಯಗಳೇ ಸಾರಿದುವು.
17ಬಗೆಯ ಔತಣಕ್ಕೆ ಏನಿತ್ತು.?
ಈ ಬಾರಿಯ ಔತಣಕ್ಕೆ 17 ಬಗೆಯ ಹಣ್ಣು ಹಂಪಲು ವೈವಿಧ್ಯತೆಗಳನ್ನು ಬಡಿಸಲಾಯಿತು. ಪಪ್ಪಾಯಿ, ಸೀತಾಫಲ, ಮುಳ್ಳುಸೌತೆ, ಚಿಕ್ಕು, ಪೇರಳೆ, ಫ್ಯಾಷನ್ ಫ್ರುಟ್, ಮಾವಿನಹಣ್ಣು, ಕ್ಯಾರೆಟ್, ಬೀಟ್ರೋಟ್, ಕಲ್ಲಂಗಡಿ, ಟೋಮೆಟೋ, ಅನಾನಸು, ನೇಂದ್ರಬಾಳೆ, ಕದಳಿ, ನೆಲ್ಲಿಕಾಯಿ ಮತ್ತು ಉಪ್ಪು ಬೆರೆಸದ ಅನ್ನ ಸಹಿತ
ಬಾಳೆಎಲೆಗೆ ಬಡಿಸಿದಾಗ ಗಣ್ಯರ ಸೋಗಿನಲ್ಲಿ ಠೀವಿಯಿಂದ ವಾನರಗಳುಂಡವು. ಮಂಗಗಳ ಪ್ರತ್ಯುತ್ಪಾದನಾ ಸಾಮರ್ಥ್ಯಕ್ಕೆ ಹಾನಿಯಾಗದಂತ, ಅವುಗಳು ತಿನ್ನಬಹುದಾದ ಆಹಾರವನ್ನಷ್ಟೇ ಇಲ್ಲಿ ಒದಗಿಸಲಾಯಿತು. ಹಸಿರು ನೀತಿ ಸಂಹಿತೆ ಪಾಲಿಸಿ ಸ್ಟೀಲಿನ ಗ್ಲಾಸಲ್ಲೇ ಕುಡಿಯಲು, ಕೈತೊಳೆಯಲು ನೀರಿಟ್ಟಿದ್ದರು. ಜತೆಗೆ ಈ ಭೂಮಿ ನಮಗಷ್ಟೇ ಅಲ್ಲ, ಎಲ್ಲ ಜೀವಜಾಲಕ್ಕೆ ಸೇರಿದ್ದೆಂದು ಜಾಗೃತಿ ಮೂಡಿಸಲಾಯಿತು. ಓಣಂ ಎಂದರೆ ನಾವಷ್ಟೇ ತಿಂದು ತೇಗುವುದಲ್ಲ. ಜಾತ್ಯಾತೀತ ಮಾನವರಂತೆಯೇ ಸಕಲ ಜೀವಜಾಲಕ್ಕೂ ಸಂಭ್ರಮಿಸಲು ನಾವು ಪ್ರೀತಿ ಉಣಿಸಿ, ಮಮತೆ ಪಡೆಯಬೇಕೆಂಬ ಸ್ನೇಹಸಂದೇಶ ನೀಡಲಾಯಿತು.
ಹೊಸದುರ್ಗ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಪಿ.ವೇಣುಗೋಪಾಲ್, ಗ್ರಂಥಾಲಯ ಸೆಕ್ರೆಟರಿ ಕೆ. ಸತ್ಯೇಂದ್ರನ್ ನೇತೃತ್ವದಲ್ಲಿ ನೂರಾರು ಮಕ್ಕಳು, ಊರ ನಾಗರಿಕರು ವಾನರ ಔತಣದ ಸಂಭ್ರಮಕ್ಕೆ ಸಾಕ್ಷಿಯಾದರು.
ಇದನ್ನು ನೋಡಲೆಂದೇ ಸಿನಿಮ ಚಿತ್ರೀಕರಣದ ಎಡೆಯಿಂದಲೂ ಸ್ಥಳೀಯ ನಿವಾಸಿಯಾದ ನಟ ವಿ ಕೆ.ಕರುಣಾಕರನ್ ಬಂದಿದ್ದರು.
ಕಾಸರಗೋಡಿನ ತ್ರಿಕರಿಪುರದ ದ್ವೀಪದಲ್ಲಿ ವಾನರಗಳಿಗೂ ಉಣಬಡಿಸುವ ಓಣಂ ಔತಣ ದೇಶದ ಇತರೆಡೆಯ ಹಬ್ಬಾಚರಣೆಯ ವೈಭೋಗಕ್ಕೆಲ್ಲ ದೊಡ್ಡ ಮಾನವಿಕ ಸಂದೇಶ ನೀಡುತ್ತಿದೆ ತಾನೇ??