ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಆಡಳಿತಾಧಿಕಾರಿಗಳು ಕೈಗೊಂಡಿರುವ ಎರಡನೇ ಹಂತದ ಅನಿರ್ದಿಷ್ಟವಧಿ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಗ್ರಾಮ ಹಾಗೂ ತಾಲೂಕು ಆಡಳಿತದ ಕೆಲಸ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೆಲಸ ನಿರ್ವಹಿಸಲು ಸುಸಜ್ಜಿತವಾದ ಕಚೇರಿ ಮತ್ತಿತರ
ಮೂಲಭೂತ ಸೌಕರ್ಯ ಒದಗಿಸಬೇಕು, ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು,
ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್. ನಿಯಮ 16 ಎ ರ ಉಪಖಂಡ (೨) ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ
ವಿಶೇಷ ಮಾರ್ಗ ಸೂಚಿಯನ್ನು ರಚಿಸಬೇಕು. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ಮಂಜೂರು ಮಾಡಬೇಕು. ಪೋಲೀಸ್ ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು,

ನಿರ್ವಹಿಸುವ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿ ಮಾಡಿ ಆದೇಶಿಸಬೇಕು. ಪ್ರಯಾಣ ಭತ್ಯೆಗಳನ್ನು ಹೆಚ್ಚು ಮಾಡಬೇಕು.
ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಮಾತ್ರ ನೀಡುವ ಜವಾಬ್ದಾರಿ ನಿರ್ವಹಿಸುವಂತೆ ಆದೇಶಿಸಬೇಕು. ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ/ ತೋಟಗಾರಿಕೆ ಇಲಾಖೆಗಳು ನಿರ್ವಹಿಸುವಂತೆ ಆದೇಶಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಿಸಬೇಕು ಸಹಿತ 23 ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
ಕೆಲವು ತಿಂಗಳ ಹಿಂದೆ ಇದೇ ಬೇಡಿಕೆಯನ್ನು ಇಟ್ಟುಕೊಂಡು ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಎರಡನೇ ಹಂತದ ಮುಷ್ಕರ ನಡೆಸುತ್ತಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವರಾಜ್ ಗಾಯಕ್ವಾಡ್, ಗೌರವಾಧ್ಯಕ್ಷ ತಿಪ್ಪೇಶ್ , ಕಾರ್ಯದರ್ಶಿ ಶರತ್ ಕುಮಾರ್ ಎಸ್, ಖಜಾಂಜಿ ಅಜ್ಜಯ್ಯ,ಸದಸ್ಯರಾದ
ಭಾರತಿ, ಮಾರುತಿ, ಶ್ರಿಕಲಾ,ಹರೀಶ್ ಕುಮಾರ್ ಕೆ.ಕೆ.,ಸುಜನ್ ಕೆ ಆರ್, ಮಧು ಕೆ.ಬಿ,ಚಂದ್ರ ಕುಮಾರ್, ಕುಮಾರ ಸ್ವಾಮಿ, ಶಿವಾಜಿ, ಕಾರ್ತಿಕ್
ಗಾಯತ್ರಿ,ಕವನ,ಶಿವ ಕುಮಾರ್ ಮಂಜುನಾಥ ರಾಜೂರ್, ತೇಜಾವತಿ, ದುರುಗಪ್ಪ ಮತ್ತಿತರರು ಉಪಸ್ಥಿತರಿದ್ದರು.