ಸುಳ್ಯ: ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಟೊಮೆಟೋ ದರ ಶತಕ ದಾಖಲಿಸಿದೆ. ಸುಳ್ಯ ನಗರದಲ್ಲಿ ಬುಧವಾರ ಕೆ.ಜಿ.ಗೆ 100 ಆಗಿದೆ. ಕೇವಲ ವಾರದ ಅಂತರದಲ್ಲಿ ಕೆಜಿಗೆ 50ಕ್ಕೂ ಅಧಿಕ ರೂ ಏರಿ ಇಂದು ಟೊಮೆಟೋ ಸೆಂಚುರಿ ದಾಖಲಿಸಿದೆ. ಕೆಲವು ದಿನಗಳ ಹಿಂದೆ 40-50 ರೂ ಇದ್ದ ಟೊಮೆಟೊ ಬಳಿಕ 60, 70 ರೂ ಗೆ ಏರಿ ಮಂಗಳವಾರ ಕೆಜಿ ದರ 80 ಇತ್ತು. ಇಂದು ರೂ 20 ರೂ ಜಿಗಿದು 100ಕ್ಕೆ ಏರಿದೆ. ಬುಧವಾರ ಬಂದ ಟೊಮೆಟೊ ದಾಸ್ತಾನಿನಂತೆ ದರ
ನೂರಕ್ಕೆ ಏರಿದೆ ಎಂದು ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.ಸುಳ್ಯ ನಗರದ ಅಂಗಡಿಗಳಲ್ಲಿ ಕೆಜಿಗೆ 90-100 ದರಕ್ಕೆ ಮಾರಾಟ ಆಗುತಿದೆ.
ಸುಳ್ಯದ ಮಾರುಕಟ್ಟೆಗೆ ಮೈಸೂರು, ಹಾಸನ ಮಾರುಕಟ್ಟೆಗಳಿಂದ ಟೊಮೆಟೊ ಬರುತ್ತದೆ. ಸರಬರಾಜು ಕಡಿಮೆ ಆಗಿದೆ, ಮಾತ್ರವಲ್ಲ ಬರುವ ಟೊಮೆಟೊದ ಗುಣಮಟ್ಟವೂ ಚೆನ್ನಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ರಾಜ್ಯವೂ ಸೇರಿದಂತೆ ನೆರೆಯ ಮಹಾರಾಷ್ಟ್ರ ಇನ್ನಿತರ ಕಡೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದ ಪರಿಣಾಮ ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಮುಖಿಯಾಗಿದೆ ಎಂದು ಹೇಳಲಾಗುತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಎರಡು ವಾರಗಳ ಹಿಂದಷ್ಟೆ ಪ್ರತಿ ಕೆ.ಜಿಗೆ ಸರಾಸರಿ 30ರಿಂದ 35 ಇದ್ದ ಟೊಮೆಟೊ ದರ, ಈಗ ಏಕಾಏಕಿ 100ಕ್ಕೆ ಜಿಗಿತ ಕಂಡಿದೆ. ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿದಿದ್ದರಿಂದ ಫಸಲು ನಷ್ಟವಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ಕೆಲ ದಿನಗಳವರೆಗೆ ದರ ಏರಿಕೆ ಮುಂದುವರಿಯಬಹುದು ಎನ್ನುತ್ತಾರೆ ವ್ಯಾಪಾರಿಗಳು.