ಕಾನ್ಪುರ: ಬಾಂಗ್ಲಾದೇಶದ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ. ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ
ಆರಂಭಗೊಂಡಿದ್ದು, ಬಾಂಗ್ಲಾದೇಶ ಮೊದಲ ಇನಿಂಗ್ಸ್ನಲ್ಲಿ 74.2 ಓವರ್ಗಳಲ್ಲಿ 233 ರನ್ ಗಳಿಸಿ ಆಲೌಟ್ ಆಗಿದೆ.
ಇದಕ್ಕುತ್ತರವಾಗಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ.ಭಾರತ ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 72 ರನ್ ಗಳಿಸಿ ಮಿಂಚಿದ್ದಾರೆ. ಇತ್ತ ನಾಯಕ ರೋಹಿತ್ ಶರ್ಮಾ 11 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 23 ರನ್ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಪೂರೈಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೋಹಿತ್ ಮತ್ತು ಜೈಸ್ವಾಲ್ ಜೋಡಿಯು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಈ ಸಾಧನೆ ಮಾಡಿದೆ.ಇದರೊಂದಿಗೆ ಭಾರತವು ಇದೇ ವರ್ಷದ ಜುಲೈನಲ್ಲಿ ಟ್ರೆಂಟ್ ಬ್ರಿಡ್ಜ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಇಂಗ್ಲೆಂಡ್ ತಂಡದ ದಾಖಲೆಯನ್ನು ಸರಿಗಟ್ಟಿದೆ.
ಅತಿ ವೇಗದ ಶತಕ ಸಾಧನೆ: ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ವೇಗದ ಶತಕ ಪೂರೈಸುವ ಮೂಲಕ ದಾಖಲೆ ಬರೆದಿದೆ. ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 11 ಓವರ್ಗಳಲ್ಲಿ 110 ರನ್ ಗಳಿಸುವ ಮೂಲಕ ತಂಡ ಈ ಸಾಧನೆ ಮಾಡಿದೆ.
ಮೊದಲ ದಿನದಾಟದಲ್ಲಿ ಕೇವಲ 35 ಓವರ್ಗಳ ಆಟ ನಡೆದಿತ್ತು. ಬಾಂಗ್ಲಾದೇಶ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಬಳಿಕ ಎರಡು ಮತ್ತು ಮೂರನೇ ದಿನ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.