ಧರ್ಮಶಾಲಾ: ನಾಯಕ ರಜತ್ ಪಾಟೀದಾರ್ ಸ್ಫೋಟಕ ಬ್ಯಾಟಿಂಗ್, ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ 92 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಿದೆ.ಹಾಲಿ ಚಾಂಪಿಯನ್ ಆರ್ಸಿಬಿ ಸತತ ಎರಡನೇ ಫೈನಲ್ ಪ್ರವೇಶಿಸಿದೆ. ಐಪಿಎಲ್ ಪಂದ್ಯಾವಳಿಯ ಕ್ವಾಲಿಫೈಯರ್ 1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ಸಿಬಿ ನಿಗದಿತ
20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಗುಜರಾತ್ 19.3 ಓವರ್ಗಳಲ್ಲಿ 162 ರನ್ ಗಳಿಸಿ ಆಲ್ ಔಟ್ ಆಯಿತು. ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಸಾಯಿ ಸುದರ್ಶನ್ ಭರ್ಜರಿ ಆರಂಭ ನೀಡಿದರೂ 14 ರನ್ ಗಳಿಸಿದ ಸಂದರ್ಭದಲ್ಲಿ ಜೇಕಬ್ ಢಫಿ ಎಸೆತದಲ್ಲಿ ಹಿಟ್ ವಿಕೆಟ್ ಆದರು. 2 ರನ್ ಗಳಿಸಿದ ನಾಯಕ ಶುಭ್ಮನ್ ಗಿಲ್ ಅವರನ್ನು ಭುವನೇಶ್ವರ್ ಕುಮಾರ್ ಬೌಲ್ಡ್ ಮಾಡಿದರು. 11 ಎಸೆತಗಳಲ್ಲಿ 29 ರನ್ ಗಳಿಸಿದ ಜೋಸ್ ಬಟ್ಲರ್ ಅವರನ್ನು ಜೋಶ್ ಹೆಝಲ್ವುಡ್ ಬೌಲ್ಡ್ ಮಾಡಿದರು. ಬಳಿಕ ರಸಿಕ್ ಸಲಾಂ ಒಂದೇ ಓವರ್ನಲ್ಲಿ ನಿಶಾಂತ್ ಸಿಂಧು(5) ಮತ್ತು ಜೇಸನ್ ಹೋಲ್ಡರ್(0) ಪೆವಿಲಿಯನ್ಗೆ ಅಟ್ಟಿ ಗುಜರಾತ್ಗೆ ಆಘಾತ ನೀಡಿದರು.ಇದರಿಂದ ಪವರ್ ಪ್ಲೇ ಅವಧಿಯಲ್ಲಿ 51ರನ್ಗೆ 5 ವಿಕೆಟ್ ಕಳೆದುಕೊಂಡು

ಸಂಕಷ್ಟಕ್ಕೆ ಸಿಲುಕಿತು. ಬಳಿಕ ಗುಜರಾತ್ನ ಗೆಲುವಿನ ಆಸೆ ಕಮರಿತು. ನಿರಂತರ ವಿಕೆಟ್ ಉರುಳುತ್ತಾ ಇದ್ದರೂ ರಾಹುಲ್ ತೆವಾಟಿಯ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತು ಆಕರ್ಷಕ ಅರ್ಧ ಶತಕ ಸಿಡಿಸಿದರು. ಕೆಲವು ಆಕರ್ಷಕ ಹೊಡೆತಗಳ ಮೂಲಕ ರನ್ ಏರಿಸಿದ ತೆವಾಟಿಯ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ತೆವಾಟಿಯ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 68ರನ್ ಗಳಿಸಿದರು.
ಆರ್ಸಿಬಿ ಪರ ಜೇಕಬ್ ಢಫಿ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್,ರಸಿಕ್ ಸಲಾಂ,ಕ್ರುನಾಲ್ ಪಾಂಡ್ಯ, ತಲಾ ಎರಡು ವಿಕೆಟ್ ಪಡೆದರು. ಜೋಶ್ ಹೆಝಲ್ವುಡ್, ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ದಾಖಲೆಯ ಮೊತ್ತ ಪೇರಿಸಿತು.ಪಾಟಿದಾರ್ ಕೇವಲ 33 ಎಸೆತದಲ್ಲಿ 5 ಬೌಂಡರಿ, 9 ಸಿಕ್ಸರ್ನಿಂದ ಅಜೇಯ 93 ರನ್ ಗಳಿಸಿ ಮಿಂಚಿದರು.ಪ್ಲೇ ಆಫ್ನಲ್ಲಿ ಒಂದು ತಂಡ ಗಳಿಸಿದ ಅತೀ ದೊಡ್ಡ ಮೊತ್ತ ಇದಾಗಿದೆ. ಆರ್ಸಿಬಿ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ವೆಂಕಟೇಶ ಅಯ್ಯರ್ (19) ವಿಕೆಟ್ ಕಳೆದುಕೊಂಡಿತು.
ಎರಡನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಜೋಡಿ 38 ಎಸೆತದಲ್ಲಿ 72 ರನ್ಗಳ ಜತೆಯಾಟ ನಡೆಸಿ ತಂಡಕ್ಕೆ ಆಧಾರವಾದರು. 9ನೇ ಓವರ್ನ ಎರಡನೇ ಎಸೆತದಲ್ಲಿ ಕೊಹ್ಲಿ (43) ಔಟ್ ಆದರು.ಅದೇ ಓವರ್ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ ಹಿಂದೆಯೇ ಪಡಿಕ್ಕಲ್ (30) ಕೂಡ ವಿಕೆಟ್ ಕೀಪರ್ ಬಟ್ಲರ್ಗೆ ಕ್ಯಾಚ್ ಕೊಟ್ಟು ಔಟಾದರು.ನಾಲ್ಕನೇ ವಿಕೆಟ್ಗೆ ನಾಯಕ ರಜತ್ ಪಾಟೀದಾರ್ ಮತ್ತು ಕ್ರುನಾಲ್ ಪಾಂಡ್ಯ ಗುಜರಾತ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಕೇವಲ 45 ಎಸೆತದಲ್ಲಿ 95 ರನ್ಗಳ ಜತೆಯಾಟ ನಡೆಸಿದಾಗ ಕೃನಾಲ್ ಪಾಂಡ್ಯ (43) ರಬಾಡಾಗೆ ವಿಕೆಟ್ ಒಪ್ಪಿಸಿದರು.ಟೀಮ್ ಡೇವಿಡ್ ಕೇವಲ 4 ರನ್ಗಳಿಸಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಒಂದಡೆ ವಿಕೆಟ್ ಉರುಳುತ್ತಿದ್ದರೂ ಕೂಡ ರಜತ್ ಇನ್ನೊಂದು ತುದಿಯಲ್ಲಿ ನಿಂತು ಸ್ಫೋಟಕ ಬ್ಯಾಟಿಂಗ್ ನಡೆಸಿ ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 39ಕ್ಕೆ 2, ಕಗಿಸೊ ರಬಾಡ 54ಕ್ಕೆ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 34ಕ್ಕೆ ಒಂದು ವಿಕೆಟ್ ಉರುಳಿಸಿದರು.














