ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾ.ಪಂ.ಆಡಳಿತಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮಳೆ ಬಂದರೆ ಸುಳ್ಯದಲ್ಲಿ ದಿನಗಟ್ಟಲೆ ವಿದ್ಯುತ್ ಕಡಿತ ಉಂಟಾಗುತ್ತಿರುವ ಬಗ್ಗೆ ದೂರುಗಳು ಇದೆ. ಆದುದರಿಂದ ವಿದ್ಯುತ್ ಕಡಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು
ತಾ.ಪಂ.ಆಡಳಿತಾಧಿಕಾರಿಗಳು ಮೆಸ್ಕಾಂ ಇಂಜಿನಿಯರ್ಗಳಿಗೆ ಸೂಚನೆ ನೀಡಿದರು. ಎಲ್ಲಾ ವಿದ್ಯುತ್ ಪರಿವರ್ತಕಗಳು, ಲೈನ್ಗಳನ್ನು ಪರಿಶೀಲನೆ ನಡೆಸುವಂತೆ ಸೂಚಿಸಿದರು. ವಿದ್ಯುತ್ ಲೈನ್ ಹಾದು ಹೋಗುವ ಸ್ಥಳದಲ್ಲಿ ಯಾವುದೇ ಅಪಾಯಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ಮರದ ಕೊಂಬೆ, ಅಪಾಯಕಾರಿ ಕೊಂಬೆಗಳನ್ನು ತೆರವು ಮಾಡಲು ಸೂಚಿಸಲಾಯಿತು. ಲೈನ್ ಹಾಗು ಪರಿವರ್ತಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ದಿನಗಟ್ಟಲೆ ವಿದ್ಯುತ್ ಕಡಿತ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಶಾಲೆ, ಅಂಗನವಾಡಿಗಳ ವಿದ್ಯುತ್ ಲೈನ್ಗಳನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು. ಮಕ್ಕಳು ಶಾಲೆಗಳಲ್ಲಿ ಸ್ವಿಚ್ಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು.

ನಗರ ಪಂಚಾಯತ್ನ ಘನ ತ್ಯಾಜ್ಯ ವಿಲೇವಾರಿ ಘಟಕ
ಕಲ್ಚರ್ಪೆಯಲ್ಲಿ ತುಂಬಿರುವ ಕಸವನ್ನು ತೆರವು ಮಾಡಲು ವಾರದಲ್ಲಿ ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಅಧಿಕಾರಿಗಳಿಗೆ ಆದೇಶ ನೀಡಿದರು. ಕಲ್ಚರ್ಪೆಯಲ್ಲಿ ತುಂಬಿರುವ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.ದಿನ ಸಂಗ್ರಹಿಸುವ ಕಸವನ್ನು ನಾಲ್ಕು ವಿಭಾಗಳಾಗಿ ವಿಂಗಡಿಸಬೇಕು ಎಂಬ ನಿರ್ದೇಶನ ಇದೆ. ಹಸಿ ಕಸ, ಒಣಕಾ, ವಿಶೇಷ ಕಾ ಹಾಗು ಸ್ಯಾನಿಟೈಸರ್ ಎಂಬ ನಾಲ್ಕು ವಿಭಾಗಳಾಗಿ ವಿಂಗಡಿಸಬೇಕು ಎಂದು ಅವರು ಸೂಚನೆ ನೀಡಿದರು. ನಗರ ಪಂಚಾಯತ್ಗೆ ಕಸ ಹಾಕಲು ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯದಲ್ಲಿಯೇ ಸ್ಥಳ ಗುರುತು ಮಾಡಲಾಗುವುದು ಎಂದರು.
ಹಾಸ್ಟಲ್ಗಳಲ್ಲಿ ಸ್ವಚ್ಚತೆ, ಆರೋಗ್ಯ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಜಾಗೃತಿ ಶಿಬಿರಗಳನ್ನು ಏರ್ಪಡಿಸುವಂತೆ ಆಡಳಿತಾಧಿಕಾರಿ ಸೂಚಿಸಿದರು. ಪ್ರತಿ ತಿಂಗಳು ಹಾಸ್ಟೇಲ್ಗಳಿಗೆ ಭೇಟಿ ನೀಡಿ ಹಾಸ್ಟೇಲ್ಗಳ ಆಹಾರ, ಮಕ್ಕಳ ಆರೊಗ್ಯದ ಕುರಿತು ಪರಿಶೀಲನೆ ನಡೆಸಬೇಕು ಎಂದು ಅವರು ತಿಳಿಸಿದರು.
ಮಳೆಗಾಲಕ್ಕಿಂತ ಮುನ್ನ ಗುಡ್ಡಕುಸಿತ, ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.ನೀರಿಲ್ಲದೆ ಪಾಳು ಬಿದ್ದ ಅಪಾಯಕಾರಿಯಾಗಿರುವ ಕೊಳವೆ ಬಾವಿ, ತೆರೆದ ಬಾವಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ತಿಳಿಸಿದರು.
ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.







