ಸಿಡ್ನಿ: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಆಟಗಾರ ಸ್ವೀವ್ ಸ್ಮಿತ್ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್, ಇನ್ನು ಮುಂದೆ ಟೆಸ್ಟ್ ಹಾಗೂ ಟಿ–20 ಮಾದರಿಗಳಲ್ಲಿ ಮುಂದುವರಿಯಲಿದ್ದಾರೆ.ಮಂಗಳವಾರ ದುಬೈನಲ್ಲಿ ನಡೆದ ಪಂದ್ಯದಲ್ಲಿ
ಸೋಲನುಭವಿಸಿದ ಬೆನ್ನಲ್ಲೇ, ನಿವೃತ್ತಿ ನಿರ್ಧಾರವನ್ನು ಸ್ಮಿತ್ ಹಂಚಿಕೊಂಡಿದ್ದಾರೆ.‘ಇದೊಂದು ಅದ್ಭುತ ಪ್ರಯಾಣ. ನಾನು ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ’ ಎಂದು ಸ್ಮಿತ್ ಹೇಳಿದ್ದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ. 2010ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದ ಅವರು, ಈವರೆಗೆ 170 ಪಂದ್ಯಗಳಲ್ಲಿ 43.28 ಸರಾಸರಿಯಲ್ಲಿ 5,800 ರನ್ ಗಳಿಸಿದ್ದಾರೆ. 12 ಶತಕ ಹಾಗೂ 35 ಅರ್ಧಶತಕ ಅವರ ಹೆಸರಿನಲ್ಲಿವೆ. 2015 ಹಾಗೂ 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರೂ ಆಗಿದ್ದರು.
‘ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆಯಾಗಿರಲಿದ್ದು, ಜೂನ್ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ಶಿಪ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದನಿಸುತ್ತಿದೆ’ ಎಂದು ಸ್ಮಿತ್ ನುಡಿದಿದ್ದಾರೆ.