ಮಿಯಾಮಿ:ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೌದಿ ಅರೇಬಿಯಾ ವಿರುದ್ಧ ಸ್ಪೇನ್ 4-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಬೆಲ್ಜಿಯಂ ಹಾಗೂ ಇರಾನ್ ಮತ್ತು ಉರುಗ್ವೆ ಹಾಗೂ ಕೇಪ್ ವೆರ್ದೆ ನಡುವಣ ಪಂದ್ಯಗಳು ಡ್ರಾ ಫಲಿತಾಂಶವನ್ನು ಕಂಡಿವೆ.
‘ಎಚ್’ ಗುಂಪಿನ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ
ಸ್ಪೇನ್ ನಿರಾಯಾಸ ಗೆಲುವು ದಾಖಲಿಸಿತು. ಸ್ಪೇನ್ ಪರ ಲ್ಯಾಮಿನೆ ಯಮಲ್ 1, ಮೈಕೆಲ್ ಒಯರ್ಜಾಬಲ್ 2 ಗೋಲು ಗಳಿಸಿದರೆ ಎದುರಾಳಿ ತಂಡದ ಹಸನ್ ಅಲ್-ತಂಬಕ್ತಿ ಸೆಲ್ಫ್ ಗೋಲು ಹೊಡೆದರು.
ಈ ಗೆಲುವಿನೊಂದಿಗೆ ಸ್ಪೇನ್ ನಾಲ್ಕು ಅಂಕಗಳೊಂದಿಗೆ ನಾಕೌಟ್ ಹಂತದ ಸನಿಹದಲ್ಲಿದೆ.
ಇನ್ನೊಂದು ಪಂದ್ಯದಲ್ಲಿ ಉರುಗ್ವೆ ಹಾಗೂ ಕೇಪ್ ವೆರ್ದೆ ತಂಡಗಳು 2-2ರ ಗೋಲುಗಳ ಅಂತರದ ಸಮಬಲ ಸಾಧಿಸಿದವು. ಕೇಪ್ ವೆರ್ದೆ ಪರ ಕೆವಿನ್ ಪಿನಾ , ಹೆಲಿಯೊ ವರೆಲಾ ಮತ್ತು ಉರುಗ್ವೆ ಪರ ಮ್ಯಾಕ್ಸಿಮಿಲಿಯಾನೊ ಅರೌಜೊ ಹಾಗೂ ಆಗಸ್ಟಿನ್ ಕ್ಯಾನೋಬಿಯೊ ಗೋಲು ಗಳಿಸಿದರು.
ಮತ್ತೊಂದೆಡೆ ಬೆಲ್ಜಿಯಂ ಹಾಗೂ ಇರಾನ್ ನಡುವಣ ಪಂದ್ಯ ಗೋಲು ರಹಿತ ಡ್ರಾ ಫಲಿತಾಂಶ ಕಂಡಿದೆ. ಅಮೋಘ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಇರಾನ್ ಪಡೆ, ಬೆಲ್ಜಿಯಂ ವಿರುದ್ಧ ಸಮಬಲದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು.







