ಸುಳ್ಯ:ಆಸ್ತಿ, ಹಣ ಮತ್ತು ವಿದ್ಯೆಗಿಂತಲೂ ಮಿಗಿಲಾಗಿ ಆರೋಗ್ಯವೇ ನಮ್ಮ ಜೀವನದ ಪ್ರಧಾನ ಸಂಪತ್ತು. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಸಮಾಜದಲ್ಲಿ ಆರೋಗ್ಯದ ರಕ್ಷಣೆಗೆ ವೈದ್ಯರ ಮಾರ್ಗದರ್ಶನ ಮುಖ್ಯವಾಗುತ್ತದೆ ಹಾಗಾಗಿ ವೈದ್ಯರ ದಿನಾಚರಣೆಗೆ ಪ್ರಾಮುಖ್ಯವಿದೆ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ
ವೈದ್ಯರ ದಿನಾಚರಣೆ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಣಕ್ಕೂ ಪತ್ರಿಕೆಗಳಿಗೂ ಹತ್ತಿರದ ಸಂಬಂಧವಿದೆ. ಕಲಿತವರ ಸಂಖ್ಯೆ ಹೆಚ್ಚಿದಂತೆಯೇ ಪತ್ರಿಕೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುವ ಕಾಲದಲ್ಲಿ ಜನರು ಜಾಲತಾಣಗಳಲ್ಲಿ ಹೆಚ್ಚಾಗಿ ವಾರ್ತೆ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ತಾಂತ್ರಿಕತೆಯೊಂದಿಗೆ ಸಂಭವಿಸುತ್ತಿರುವ ವೇಗದ ಬದಲಾವಣೆಗೆ ನಾವು ಹೊಂದಿಕೊಳ್ಳುವುದು ಅನಿವಾರ್ಯ ಎಂದು ಡಾ.ದಾಮ್ಲೆಯವರು ಹೇಳಿದರು. ಪತ್ರಿಕೆ ದಿನಾಚರಣೆಯ ಕುರಿತು ಶಿಕ್ಷಕಿ ಕವಿತಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರ ಹುಟ್ಟುಹಬ್ಬದ ಆಚರಣೆಯೂ ಜರಗಿತು. ಶಾಲಾ ಮುಖ್ಯ ಉಪಾಧ್ಯಾಯನಿ ಜಯಲಕ್ಷ್ಮಿ ದಾಮ್ಲೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ 9ನೇ ತರಗತಿಯ ಅಪ್ರಮೇಯ ಆರ್. ಯು ಹಾಗೂ ಎಂಟನೇ ತರಗತಿಯ ವೈಷ್ಣವ್ ಕೆ. ಇವರು ವೈದ್ಯರ ದಿನಾಚರಣೆಯ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಪವಿತ್ರ ಎಚ್. ಸ್ವಾಗತಿಸಿ, ಶಿಕ್ಷಕಿ ಗಿರಿಜಾ ಕುಮಾರಿ ಎಮ್. ವಂದಿಸಿದರು. ಶಿಕ್ಷಕರಾದ ದೇವಿ ಪ್ರಸಾದ್ ಜಿ. ಸಿ. ಕಾರ್ಯಕ್ರಮ ನಿರೂಪಿಸಿದರು.