ದುಬೈ:ಸ್ಮೃತಿ ಮಂದಾನ ಸಿಡಿಸಿದ ದಾಖಲೆಯ ಶತಕದ ಹಾಗೂ ಬೌಲರ್ಗಳ ಸಾಂಘಿಕ ದಾಳಿಯ ನೆರವಿನಿಂದ ಮಹಿಳಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಹಾಂಗ್ಕಾಂಗ್ ತಂಡವನ್ನು ಗುರುವಾರ 137 ರನ್ಗಳಿಂದ ನಿರಾಯಾಸವಾಗಿ ಮಣಿಸಿತು.ಟಾಸ್ ಗೆದ್ದ ಹಾಂಗ್ಕಾಂಗ್ ತಂಡವು
ಫೀಲ್ಡಿಂಗ್ ಆಯ್ದುಕೊಂಡಿತು. ಹರ್ಮನ್ಪ್ರೀತ್ ಕೌರ್ ಪಡೆ 194 ರನ್ಗಳ ಕಠಿಣ ಸವಾಲು ಒಡ್ಡಿತು. ಗುರಿ ಬೆನ್ನಟ್ಟಿದ ಹಾಂಗ್ಕಾಂಗ್ 16.2 ಓವರ್ಗಳಲ್ಲಿ ಬರೀ 56 ರನ್ಗಳಿಗೆ ಸರ್ವಪತನವಾಯಿತು.
ಇದಕ್ಕೆ ಮೊದಲು, ಉಪ ನಾಯಕಿ ಸ್ಮೃತಿ ಭಾರಿಸಿದ ಶತಕ(124) ಭಾರತಕ್ಕೆ ಬೃಹತ್ ಮೊತ್ತ ಗಳಿಸಲು ನೆರವಾಯಿತು. ಶಫಾಲಿ ವರ್ಮಾ (28; 17ಎ) ಪ್ರತೀಕಾ ರಾವಲ್ (10), ವಿಕೆಟ್ ಕೀಪರ್ ರಿಚಾ ಘೋಷ್ (11) ಮತ್ತು ಕೌರ್ (10) ನಿರಾಸೆ ಮೂಡಿಸಿದರು. ಸ್ಮೃತಿ ಇನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ಗಳಿದ್ದವು. ಅಂತಿಮ ಓವರ್ನಲ್ಲಿ ರನೌಟ್ ಮೂಲಕ ಅವರ ಸೊಗಸಾದ ಇನಿಂಗ್ಸ್ಗೆ ತೆರೆಬಿತ್ತು.
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಂದಾನ ಅವರು 18ನೇ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ದಂತಕಥೆ ಮೆಗ್ ಲ್ಯಾನಿಂಗ್ ಮತ್ತು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ (ತಲಾ 17 ಶತಕ) ಅವರನ್ನು ಹಿಂದಿಕ್ಕಿದರು. ಮಂದಾನ ಅವರಿಗೆ ಇದು ಟಿ20 ಕ್ರಿಕೆಟ್ನಲ್ಲಿ ಎರಡನೇ ಶತಕವಾಗಿದೆ. ಏಕದಿನ ಮಾದರಿಯಲ್ಲಿ 14, ಟೆಸ್ಟ್ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮಿಥಾಲಿ ರಾಜ್ (10,868) ಅವರನ್ನು ಹಿಂದೆಹಾಕಿ ಮಂದಾನ (10,880) ಅಗ್ರಸ್ಥಾನಕ್ಕೇರಿದರು.










